ADVERTISEMENT

ಬೆಂಗಳೂರಿನ ಬೀದಿ ನಾಯಿಗಳಿಗೆ ಚಿಕನ್ ಸೇರಿ ಪೋಷಕಾಂಶಯುಕ್ತ ಆಹಾರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 1:01 IST
Last Updated 11 ಜುಲೈ 2025, 1:01 IST
<div class="paragraphs"><p>ಬೀದಿ ನಾಯಿ</p></div>

ಬೀದಿ ನಾಯಿ

   

ಬೆಂಗಳೂರು: ನಗರದಲ್ಲಿರುವ ಬೀದಿ ನಾಯಿಗಳಿಗೆ ಆಹಾರ ನೀಡಲು ಸಮುದಾಯದ ಜನರು ಹೆಚ್ಚಿನ ಆಸಕ್ತಿ ತೋರದ್ದರಿಂದ ಬಿಬಿಎಂಪಿ ವತಿಯಿಂದಲೇ ಪೋಷಕಾಂಶಯುಕ್ತ ಆಹಾರ ನೀಡಲು ತೀರ್ಮಾನಿಸಲಾಗಿದೆ.

ಬೀದಿ ನಾಯಿಗಳಿಗೆ ಯಾವ ರೀತಿಯ ಆಹಾರವನ್ನು ಯಾವ ಸಮಯದಲ್ಲಿ ನೀಡಬೇಕೆಂದು ನಿಗದಿಪಡಿಸಿರುವ ಬಿಬಿಎಂಪಿ ಪಶುಸಂಗೋಪನೆ ವಿಭಾಗ, ಪ್ರತಿ ವರ್ಷ ಅಂದಾಜು ₹2.88 ಕೋಟಿ ವೆಚ್ಚದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲು ಟೆಂಡರ್‌ ಆಹ್ವಾನಿಸಿದೆ.

ADVERTISEMENT

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ (ಎಫ್‌ಎಸ್‌ಎಸ್‌ಎಐ) ನೋಂದಣಿಯಾಗಿರುವ ಸಂಸ್ಥೆ ಅಥವಾ ಏಜೆನ್ಸಿಗಳು ಟೆಂಡರ್‌ನಲ್ಲಿ ಭಾಗವಹಿಸಬಹುದು. ಯಾವುದೇ ರೀತಿಯ ಕೃತಕ ಬಣ್ಣ ಬಳಸಬಾರದು. ತಾಜಾ ಹಾಗೂ ಸ್ವಚ್ಛವಾಗಿ ಆಹಾರವನ್ನು ತಯಾರಿಸಬೇಕು. ಬಿಬಿಎಂಪಿ ಒದಗಿಸಿರುವ ಆಹಾರ ಯೋಜನೆಯಂತೆಯೇ ಆಹಾರ ತಯಾರಿಸಬೇಕು. ತಯಾರಿಸಿದ ಆಹಾರವನ್ನು ಸತತ ಎರಡು ದಿನ ಬೀದಿ ನಾಯಿಗಳು ತಿನ್ನದಿದ್ದರೆ ಆಹಾರವನ್ನು ಬದಲಿಸಬೇಕು. ಅಡುಗೆಮನೆಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ಒಂದೇ ಅಡುಗೆ ಮನೆಯಲ್ಲಿ ಆಹಾರವನ್ನು ತಯಾರಿಸಿ, ಎಲ್ಲ ವಲಯಗಳಿಗೆ ವಿತರಿಸಬೇಕು. ಪ್ರತಿ ದಿನ 11 ಗಂಟೆಗೆ ಬೀದಿ ನಾಯಿಗಳಿಗೆ ಆಹಾರ ನೀಡಬೇಕು. ಆಹಾರ ಕೊಂಡೊಯ್ಯುವ ವಾಹನಕ್ಕೆ ಜಿಪಿಎಸ್‌ ಅಳವಡಿಸಿರಬೇಕು ಮತ್ತು ವಾಹನದ ಮೇಲೆ ಬಿಬಿಎಂಪಿ ಹಾಗೂ ಸಂಬಂಧಪಟ್ಟ ಎನ್‌ಜಿಒಗಳ ಮಾಹಿತಿ ಪ್ರಕಟಿಸಬೇಕು ಎಂದು ಜುಲೈ 17ರಂದು ತೆರೆಯಲಾಗುವ ಟೆಂಡರ್‌ ದಾಖಲೆಗಳಲ್ಲಿ ತಿಳಿಸಲಾಗಿದೆ.

ಬೀದಿ ನಾಯಿಗಳೊಂದಿಗಿನ ಪ್ರೀತಿ ಮತ್ತು ಬಾಂಧವ್ಯದ ಕಥೆಗಳನ್ನು ಹಂಚಿಕೊಳ್ಳುತ್ತಾ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಪ್ರಾಣಿಗಳ ಪಾಲಕರನ್ನು ಒಟ್ಟುಗೂಡಿಸಲು ಬಿಬಿಎಂಪಿ ‘ನಾಯಿಗಳಿಗಾಗಿ ಉತ್ಸವ’ವನ್ನು (ಕುಕುರ್‌ ತಿಹಾರ್‌) 2024ರ ಅಕ್ಟೋಬರ್ 17ರಂದು ಆಯೋಜಿಸಲಾಗಿತ್ತು. ಬೀದಿ ನಾಯಿಗಳಿಗೆ ಸಾರ್ವಜನಿಕರು, ಸಂಘ–ಸಂಸ್ಥೆಗಳು, ಸ್ವಯಂಸೇವಕರಿಂದ ಆಹಾರ ನೀಡುವ ಪ್ರಕ್ರಿಯೆಗೂ ಚಾಲನೆ ನೀಡಲಾಗಿತ್ತು. ಆಹಾರ ನೀಡುವ ಸ್ಥಳಗಳನ್ನು ವಲಯವಾರು ಗುರುತಿಸಲಾಗಿತ್ತು.

‘ಬೀದಿ ನಾಯಿಗಳಿಗೆ ನಿಗದಿತ ಪ್ರದೇಶದಲ್ಲಿ ಆಹಾರ ಹಾಕುವುದನ್ನು ನಿಷೇಧಿಸುವಂತಿಲ್ಲ, ವಿರೋಧಿಸುವಂತಿಲ್ಲ. ಅಪಾರ್ಟ್‌ಮೆಂಟ್‌ಗಳಲ್ಲಿ ಸಾಕು ಪ್ರಾಣಿಗಳಿಗೆ ಸೌಲಭ್ಯ ಕಲ್ಪಿಸಬೇಕು. ಸಮುದಾಯ ಪ್ರಾಣಿಗಳನ್ನು ಹೊಡೆದರೆ ಅಥವಾ ಹಿಂಸಿಸಿದರೆ ದಂಡ ಅಥವಾ ಜೈಲು ಶಿಕ್ಷೆಯಾಗವ ‘ಸಮುದಾಯ ಪ್ರಾಣಿಗಳ’ ಕಾಯ್ದೆಯನ್ನು 2025ರ ಜನವರಿಯಿಂದ ನಗರದಲ್ಲಿ ಜಾರಿಗೆ ತರಲಾಗಿತ್ತು.

‘ಬೀದಿ ನಾಯಿಗಳಿಗೆ ಆಹಾರ ನೀಡುವ ಕಾರ್ಯಕ್ರಮಕ್ಕೆ ಸ್ವಯಂಪ್ರೇರಿತರಾಗಿ ಹೆಚ್ಚು ಸಂಖ್ಯೆಯಲ್ಲಿ ಜನರು ಬರಲಿಲ್ಲ. ಹೀಗಾಗಿ ನಾವೇ ಯೋಜನೆ ತಯಾರಿಸಿದ್ದು ಆಹಾರ ನೀಡಲಿದ್ದೇವೆ. ತಜ್ಞರ ಸಲಹೆ ಮಾರ್ಗದರ್ಶನ ಮೇಲೆ ರೂಪುರೇಷೆ ಮಾಡಲಾಗಿದ್ದು, ಬೀದಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿ ದಾಖಲಾಗಿರುವ ಪ್ರದೇಶಗಳಲ್ಲಿ ಆಹಾರ ನೀಡುವ ಕಾರ್ಯಕ್ರಮ ಅನುಷ್ಠಾನವಾಗಲಿದೆ’  ಎಂದು ಬಿಬಿಎಂಪಿ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್‌ ವಿಕಾಸ್‌ ಕಿಶೋರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.