ADVERTISEMENT

ಬಿಸಿಲಿನ ತಾಪ: ಉದುರುತ್ತಿದೆ ಮಾವಿನ ಹೀಚು, ಹೂವು

ಬಿಸಿಲಿನ ತಾಪದ ಪರಿಣಾಮ

ಮೋಹನ್ ಕುಮಾರ್‌
Published 5 ಏಪ್ರಿಲ್ 2019, 19:27 IST
Last Updated 5 ಏಪ್ರಿಲ್ 2019, 19:27 IST
ಮಾವಿನ ಮರದಲ್ಲಿ ರೈತರು ನಿರೀಕ್ಷಿಸಿದಷ್ಟು ಕಾಯಿಗಳು ಇಲ್ಲ
ಮಾವಿನ ಮರದಲ್ಲಿ ರೈತರು ನಿರೀಕ್ಷಿಸಿದಷ್ಟು ಕಾಯಿಗಳು ಇಲ್ಲ   

ದಾಬಸ್‌ಪೇಟೆ: ಏರುತ್ತಿರುವ ಬಿಸಿಲ ತಾಪಕ್ಕೆ ನೆಲಮಂಗಲ ತಾಲ್ಲೂಕು ಹಾಗೂ ದಾಬಸ್‌ಪೇಟೆ ವ್ಯಾಪ್ತಿಯಲ್ಲಿನ ನೂರಾರು ಎಕರೆಗಳ ಮಾವಿನ ತೋಟಗಳಲ್ಲಿ ಹೂ ಮತ್ತು ಹೀಚು ಉದುರುತ್ತಿದೆ. ಇದರಿಂದ ಫಸಲು ಕಡಿಮೆಯಾಗುವ ಆತಂಕ ರೈತರನ್ನು ಕಾಡುತ್ತಿದೆ.

‘ಈ ಬಾರಿಯೂ ಮಳೆಯ ಕೊರತೆಯಿಂದಾಗಿ ಹೂ ಕಡಿಮೆಯಾಗಿತ್ತು. ಬಿಟ್ಟಿರುವ ಹೂವಾದರೂ ಕಾಯಿಯಾದರೆ ಹಾಕಿರುವ ಬಂಡವಾಳವಾದರೂ ಕೈಗೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಬಿಟ್ಟಿದ್ದ ಹೂ ಕಾಯಿಯಾಗಿ ಬೆಳೆಯುತ್ತಿದಂತೆ ಹೀಚುಗಳು ಬಿಸಿಲಿಗೆ ಉದುರುವುದು ಆತಂಕ ತಂದಿದೆ’ ಎಂದುರೈತ ರಮೇಶ್ ಆತಂಕ ವ್ಯಕ್ತಪಡಿಸಿದರು.

ರೈತ ತ್ಯಾಗರಾಜು,‘ನಾವು ಒಂದರ್ಥದಲ್ಲಿ ಪ್ರಾಕೃತಿಕ ಶಾಪಕ್ಕೆ ಒಳಗಾಗಿದ್ದೇವೆ. ನಮ್ಮಲ್ಲಿ ನೀರಾವರಿ ವ್ಯವಸ್ಥೆಯಿಲ್ಲ. ಮತ್ತೊಂದು ಕಡೆ ಮಳೆ ಬಾರದೆ ಇಳುವರಿ ಕುಸಿಯುತ್ತದೆ. ಸಿಕ್ಕ ಫಸಲಿಗೂ ಸೂಕ್ತ ಬೆಲೆ ಸಿಗಲ್ಲ’ ಎಂದು ಬೇಸರಿಸಿದರು.

ADVERTISEMENT

‘ಮಾವಿನ ಬೆಳೆಯಲ್ಲಾದರೂ ಒಂದಷ್ಟು ಹಣ ಬಂದರೆ, ಸಣ್ಣ ಸಾಲಗಳನ್ನಾದರೂ ತೀರಿಸಿ, ಉತ್ತಮ ಜೀವನ ನಡೆಸುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಹೂ ಉಳಿಸಿಕೊಳ್ಳಲಿಕ್ಕೆ ಔಷಧಿಗಳನ್ನು ಸಿಂಪಡಣೆ ಮಾಡಿದ್ದೆವು. ಈಗ ಅದು ವ್ಯರ್ಥವಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

ರೈತ ಮಂಜುನಾಥ್,‘ತೋಟಗಳಲ್ಲಿ ಹೂ ಬಿಟ್ಟಾಗಲೇ ವ್ಯಾಪಾರಿಗಳಿಂದ ಒಂದಷ್ಟು ಹಣ ಮುಂಗಡವಾಗಿ ತಗೊಂಡಿದ್ದೇವೆ. ಈಗ ಹೀಚು ಉದುರುತ್ತಿರುವುದರಿಂದ, ‘ನಷ್ಟವಾಗುತ್ತದೆ’ ಅಂತ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ‘ಇಲ್ಲದಿದ್ದರೆ ತೋಟ ಬೇಡ’ ಅಂತಿದ್ದಾರೆ. ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ’ ಎಂದರು.

ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯ,‘ಮಾವಿನ ಬೆಳೆಗೆ 25 ಡಿಗ್ರಿಯಿಂದ 28 ಡಿಗ್ರಿ ತಾಪಮಾನ ಸೂಕ್ತ. ಈ ಬಾರಿ ಬಿಸಿಲು ಜಳ ಹೆಚ್ಚಿದೆ. ಫಸಲು ಕಡಿಮೆಯಾಗಬಹುದು. ರೈತರು ಬೆಳೆವಿಮೆ ಮಾಡಿಸಿಕೊಳ್ಳುವುದು ಉತ್ತಮ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.