ADVERTISEMENT

ಊಟಕ್ಕಾಗಿ ಬಾಲಮಂದಿರ ಸೇರಿದ್ದ ಬಾಲಕ: ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 15:38 IST
Last Updated 28 ನವೆಂಬರ್ 2024, 15:38 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಹೊಟ್ಟೆ ತುಂಬ ತಿಂಡಿ, ಊಟ ಸಿಗುತ್ತದೆ ಎಂಬ ಕಾರಣಕ್ಕೆ ಮನೆ ಬಿಟ್ಟು ಬಂದು ಬಾಲಮಂದಿರ ಸೇರಿಕೊಳ್ಳುತ್ತಿದ್ದ ಬಾಲಕನನ್ನು ಮತ್ತೆ ಪೋಷಕರ ಮಡಿಲಿಗೆ ಶಂಕರಪುರ ಠಾಣೆ ಪೊಲೀಸರು ಸೇರಿಸಿದ್ದಾರೆ.

‘ಪಾನಮತ್ತ ತಂದೆ, ಕೂಲಿ ಕೆಲಸ ಮಾಡುವ ತಾಯಿ, ಓದಿನಲ್ಲಿ ಆಸಕ್ತಿ ಇರದ ಬಾಲಕ ಮನೆ ಬಿಟ್ಟು ಬಂದು ಪಾದಚಾರಿ ಮಾರ್ಗದಲ್ಲಿ ನಿಂತುಕೊಳ್ಳುತ್ತಿದ್ದ. ಬಾಲಕನನ್ನು ಗಮನಿಸಿದವರು ಸಹಜವಾಗಿಯೇ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ವಿಚಾರಿಸಿದಾಗ, ಸರಿಯಾದ ಮಾಹಿತಿ ನೀಡುತ್ತಿರಲಿಲ್ಲ. ಹಾಗಾಗಿ ಬಾಲಕನನ್ನು ಸರ್ಕಾರಿ ಬಾಲಮಂದಿರಕ್ಕೆ ಬಿಟ್ಟು ಬರುತ್ತಿದ್ದರು. ಅಲ್ಲಿಯೇ ಊಟ, ತಿಂಡಿ ಮಾಡಿಕೊಂಡು ಇರುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈ ಹಿಂದೆಯೂ ಅತ್ತಿಬೆಲೆ, ಸರ್ಜಾಪುರ, ಹೊಸಕೋಟೆ ಪೊಲೀಸರು ಬಾಲಮಂದಿರಕ್ಕೆ ಒಪ್ಪಿಸಿದ್ದರು. ಬಳಿಕ ಪೋಷಕರನ್ನು ಪತ್ತೆ ಹಚ್ಚಿ ಆತನನ್ನು ಮನೆಗೆ ಕಳಿಸಿಕೊಡಲಾಗಿತ್ತು ಎಂದು ಹೇಳಿದ್ದಾರೆ.

‘ವಾರದ ಹಿಂದೆ ರಾತ್ರಿ ಪಾದಚಾರಿ ಮಾರ್ಗದಲ್ಲಿ ನಿಂತಿದ್ದ ಬಾಲಕನನ್ನು ಶಂಕರಪುರ ಠಾಣೆಯ ಇನ್‌ಸ್ಪೆಕ್ಟರ್‌ ಉದಯರವಿ ಗಮನಿಸಿದ್ದರು. ವಿಚಾರಿಸಿದಾಗ ಬಾಲಕ ‘ತಂದೆ, ತಾಯಿ ಗೊತ್ತಿಲ್ಲ, ಊರು ಗೊತ್ತಿಲ್ಲ’ ಎಂದು ಉತ್ತರಿಸಿದ್ದ. ಬಳಿಕ ಆತನನ್ನು ಬಾಲಮಂದಿರಕ್ಕೆ ಬಿಟ್ಟು ಬಂದಿದ್ದ ಪೊಲೀಸರು, ಪೋಷಕರ ಪತ್ತೆಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಅತ್ತಿಬೆಲೆ ಠಾಣೆಗೆ ಪೋಷಕರು ಬಂದು ಬಾಲಕನನ್ನು ಕರೆದೊಯ್ದರು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.