ADVERTISEMENT

ಬೆಂಗಳೂರು: ₹67 ಲಕ್ಷ ನಗದು, ಒಂದೂವರೆ ಕೆ.ಜಿ ಚಿನ್ನ ಕದ್ದಿದ್ದ ಕೆಲಸದಾಕೆ ಸೆರೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 16:23 IST
Last Updated 14 ಜೂನ್ 2025, 16:23 IST
<div class="paragraphs"><p>ಆರೋಪಿ  ಉಮಾ ಮತ್ತು ಜಪ್ತಿ ಮಾಡಿಕೊಂಡ ನಗದು ಹಾಗೂ ಚಿನ್ನಾಭರಣ&nbsp;</p></div>

ಆರೋಪಿ ಉಮಾ ಮತ್ತು ಜಪ್ತಿ ಮಾಡಿಕೊಂಡ ನಗದು ಹಾಗೂ ಚಿನ್ನಾಭರಣ 

   

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ ₹67 ಲಕ್ಷ ನಗದು ಹಾಗೂ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿದ್ದ ಕೆಲಸದಾಕೆಯನ್ನು ಚಾಮರಾಜಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರದ ಗಾಳಿಪುರದ ನಿವಾಸಿ ಉಮಾ (43) ಬಂಧಿತ ಆರೋಪಿ.

ADVERTISEMENT

ಆರೋಪಿಯಿಂದ ₹57.50 ಲಕ್ಷ ನಗದು, ₹12.65 ಲಕ್ಷ ಮೌಲ್ಯದ ಆಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಚಾಮರಾಜಪೇಟೆಯ ಮೂರನೇ ಮುಖ್ಯರಸ್ತೆಯ ನಿವಾಸಿ, ಉದ್ಯಮಿ ರಾಧಾ ಅವರು ನೀಡಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ನಗರ್ತಪೇಟೆಯಲ್ಲಿ ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿರುವ ರಾಧಾ ಅವರು, ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರಿ ಸುಜಾತಾ ಅವರ ಆರೈಕೆಗೆಂದು ಮೂರು ತಿಂಗಳ ಹಿಂದೆ ಆರೋಪಿಯನ್ನು ನೇಮಿಸಿಕೊಂಡಿದ್ದರು. ತಿಂಗಳಿಗೆ ₹23 ಸಾವಿರ ಸಂಬಳ ನಿಗದಿ ಪಡಿಸಿದ್ದರು. ಎರಡು ತಿಂಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿರುವ ನಿವೇಶನವನ್ನು ಮಾರಾಟ ಮಾಡಿದ್ದ ರಾಧಾ ಅವರು, ಅದರಿಂದ ಬಂದ ಹಣವನ್ನು ಬೀರುವಿನಲ್ಲಿ ಇಟ್ಟಿದ್ದರು. ನಗದು ಜತೆಗೆ ಒಂದು ಕೆ.ಜಿ 415 ಗ್ರಾಂ ತೂಕದ ಚಿನ್ನಾಭರಣ ಹಾಗೂ ಎರಡು ಕೆ.ಜಿ 445 ಗ್ರಾಂ ತೂಕದ ಬೆಳ್ಳಿಯ ತಟ್ಟೆ, ಚೊಂಬು ಹಾಗೂ ಕಪ್‌ಗಳನ್ನು ಇಟ್ಟಿದ್ದರು ಎಂದು ಪೊಲೀಸರು ಹೇಳಿದರು.

ನಿವೇಶನ ಮಾರಾಟದಿಂದ ಬಂದ ಹಣದಿಂದ ರಾಧಾ ಅವರು ಫ್ಲ್ಯಾಟ್‌ ಖರೀದಿಸುವ ಆಲೋಚನೆಯಲ್ಲಿದ್ದರು. ಜೂನ್ 9ರಂದು ಬೀರುವಿನಲ್ಲಿದ್ದ ಹಣ ತೆಗೆಯಲು ಹೋದಾಗ ಹಣ ಮತ್ತು ಚಿನ್ನಾಭರಣ ಇರಲಿಲ್ಲ. ನಂತರ, ದೂರು ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

‘ದೂರು ಆಧರಿಸಿ ದೂರುದಾರರ ಮನೆಗೆ ತೆರಳಿ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸಲಾಯಿತು. ಮನೆ ಕೆಲಸದಾಕೆ ಜೂನ್ 4ರ ಬೆಳಿಗ್ಗೆ ಬ್ಯಾಗ್‌ವೊಂದನ್ನು ಹಿಡಿದುಕೊಂಡು ತೆರಳುತ್ತಿರುವುದು ಕಂಡುಬಂದಿತ್ತು. ಉಮಾಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೆಲಸದಾಕೆಯೇ ಕೃತ್ಯ ಎಸಗಿರುವುದು ಪತ್ತೆ ಆಯಿತು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.