ಬೆಂಗಳೂರು: ರಸ್ತೆ ಸುರಕ್ಷತಾ ನಿಯಮ ಉಲ್ಲಂಘಿಸಿ, ನಗರದಲ್ಲಿ ವ್ಹೀಲಿ ನಡೆಸುತ್ತಿರುವ ದ್ವಿಚಕ್ರ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿರುವ ಸಂಚಾರ ಪೊಲೀಸರು, ಮಾರ್ಚ್‌ನಲ್ಲಿ 398 ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಮಾರ್ಚ್ 1ರಿಂದ 31ರವರೆಗೆ ವಿವಿಧ ಸಂಚಾರ ಠಾಣೆಗಳ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ಕೈಗೊಂಡು, 397 ವಾಹನ ಜಪ್ತಿ ಮಾಡಿದ್ದಾರೆ.
ಪಶ್ಚಿಮ ಸಂಚಾರ ವಿಭಾಗದ ಕಾಮಾಕ್ಷಿಪಾಳ್ಯ, ವಿಜಯನಗರ, ಮಾಗಡಿ ರಸ್ತೆ, ಜ್ಞಾನಭಾರತಿ, ಕೆಂಗೇರಿ, ಬ್ಯಾಟರಾಯನಪುರ, ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಸಂಚಾರ ಪೊಲೀಸರು ತಿಳಿಸಿದರು.
ಒಂದು ತಿಂಗಳ ಅವಧಿಯಲ್ಲಿ 324 ಆರೋಪಿಗಳನ್ನು ಬಂಧಿಸಲಾಗಿದೆ. ಆ ಪೈಕಿ 82 ಬಾಲಕರು ಇದ್ದಾರೆ. ಮಕ್ಕಳಿಗೆ ಬೈಕ್ ನೀಡಿದ್ದ 68 ಪೋಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, 40 ಮಂದಿಯ ಚಾಲನಾ ಪರವಾನಗಿ ಹಾಗೂ 197 ಆರ್.ಸಿ(ವಾಹನ ನೋಂದಣಿ) ರದ್ದುಪಡಿಸುವಂತೆ ಕೋರಿ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ. ಬಾಲಾಪರಾಧ ಕಾಯ್ದೆ ಅಡಿ 32 ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
‘ವ್ಹೀಲಿಯಲ್ಲಿ ಭಾಗಿಯಾದ ಆರೋಪಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಡ್ರಗ್ಸ್ ತೆಗೆದುಕೊಂಡು ವ್ಹೀಲಿ ನಡೆಸುತ್ತಿರುವುದು ಕಂಡುಬಂದಿದೆ. ಕೆ.ಜಿ.ಹಳ್ಳಿ, ಮಡಿವಾಳ, ಅಶೋಕನಗರ, ಕಾಮಾಕ್ಷಿಪಾಳ್ಯ, ವಿಜಯನಗರ ಭಾಗದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿವೆ. ಕೆಲವು ತಿಂಗಳ ಹಿಂದೆ ಮಾರಕಾಸ್ತ್ರ ತೋರಿಸುತ್ತಾ ವ್ಹೀಲಿ ನಡೆಸುತ್ತಿದ್ದ ಆರೋಪಿಗಳನ್ನು ರೌಡಿಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಆರೋಪಿಗಳ ವಿರುದ್ಧ ಮಾದಕ ದ್ರವ್ಯ ನಿಗ್ರಹ ಕಾಯ್ದೆ ಅಡಿ(ಎನ್‌ಡಿಪಿಎಸ್) ಹಾಗೂ ಶಸ್ತ್ರಾಸ್ತ್ರ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಸಂಚಾರ ವಿಭಾಗ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.