ADVERTISEMENT

ಜೂನ್‌ 3ರಿಂದ 'ಜಲಾನಯನ ನಿರ್ವಹಣೆ' ರಾಷ್ಟ್ರೀಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 14:50 IST
Last Updated 2 ಜೂನ್ 2025, 14:50 IST
   

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಲಾನಯನ ನಿರ್ವಹಣೆಯ ಉತ್ಕೃಷ್ಟ ಕೇಂದ್ರ, ಜಲಾನಯನ ಅಭಿವೃದ್ಧಿ ಇಲಾಖೆ, ಭೂ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಜೂನ್‌ 3ರಿಂದ 5ರವರೆಗೆ ಜಿಕೆವಿಕೆಯ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ‘ಭೂ ಸಂಪನ್ಮೂಲ ಸಮೀಕ್ಷೆ ಆಧಾರಿತ ಸುಸ್ಥಿರ ಜಲಾನಯನ ನಿರ್ವಹಣೆ ಕುರಿತು ರಾಷ್ಟ್ರೀಯ ಸಮ್ಮೇಳನ’ ಆಯೋಜಿಸಲಾಗಿದೆ. 

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ, ಜಲಾನಯನ ಇಲಾಖೆಯ ನಿರ್ದೇಶಕ ಮೊಹಮ್ಮದ ಪರವೇಜ ಬಂಥನಾಳ, ‘ವಿಶ್ವ ಬ್ಯಾಂಕ್‌ ಆರ್ಥಿಕ ನೆರವಿನೊಂದಿಗೆ ಕರ್ನಾಟಕ ಹಾಗೂ ಒಡಿಶಾ ರಾಜ್ಯಗಳಲ್ಲಿ ನವೀನ ವಿಧಾನಗಳಿಂದ ಜಲಾನಯನ ಪ್ರದೇಶವನ್ನು ಪುನಶ್ಚೇತನಗೊಳಿಸಿ, ಕೃಷಿಯಲ್ಲಿ ಸ್ಥಿತಿಸ್ಥಾಪಕತ್ವ ಸಾಧಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. 2022ರಿಂದ 2026ರವರೆಗೆ 34 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ನವೀನ ವಿಧಾನಗಳ ಮೂಲಕ ಜಲಾನಯನ ಪ್ರದೇಶ ಅಭಿವೃದ್ಧಿಪಡಿಸುವ ಗುರಿ ಇದೆ’ ಎಂದು ಮಾಹಿತಿ ನೀಡಿದರು. 

‘ಸಮ್ಮೇಳನದಲ್ಲಿ ಜಲಾನಯನ ನಿರ್ವಹಣೆಯಲ್ಲಿ ಭೂ ಸಂಪನ್ಮೂಲ ಹಾಗೂ ಜಲವಿಜ್ಞಾನಿಗಳ ಸಮೀಕ್ಷೆ ವಿಧಾನಗಳು, ಜಲಾನಯನ ನಿರ್ವಹಣೆಗೆ ಸ್ಥಳ ನಿರ್ದಿಷ್ಟ ಚಟುವಟಿಕೆಗಳನ್ನು ಆಯ್ಕೆ ಮಾಡುವ ಡಿಜಿಟಲ್ ಪರಿಕರಗಳು. ಜಲಾನಯನ ನಿರ್ವಹಣೆಯಲ್ಲಿ ಸಮುದಾಯ ಭಾಗವಹಿಸುವುದರ ಕುರಿತು ತಜ್ಞರೊಂದಿಗೆ ಸಂವಾದಗಳು ನಡೆಯಲಿವೆ. ದೇಶದ ವಿವಿಧ ಭಾಗಗಳಿಂದ 250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಜೂನ್‌ 3ರಂದು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕೇಂದ್ರ ಸರ್ಕಾರದ ಭೂ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ನಿತಿನ್ ಖಾಡೆ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ, ವಿಶ್ವಬ್ಯಾಂಕ್‌ನ ಜೆ.ವಿ.ಆರ್. ಮೂರ್ತಿ, ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ ಭಾಗವಹಿಸಲಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.