ಅಜೀಂ ಪ್ರೇಮ್‍ಜಿ ಹಾಗೂ ಸಿದ್ದರಾಮಯ್ಯ, ಉದ್ಯಮಿ ಅಜೀಂ ಪ್ರೇಮ್‌ಜಿ
ಪ್ರಜಾವಾಣಿ ಚಿತ್ರ
ಬೆಂಗಳೂರು: ನಗರದ ಹೊರ ವರ್ತುಲ ರಸ್ತೆಯಲ್ಲಿ (ಒಆರ್‌ಆರ್) ವಿಪರೀತ ಸಂಚಾರ ದಟ್ಟಣೆ ಇರುವ ಕಾರಣ ವಿಪ್ರೊ ಕ್ಯಾಂಪಸ್ ಮೂಲಕ ಸೀಮಿತ ಪ್ರಮಾಣದಲ್ಲಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದ ಕೋರಿಕೆಯನ್ನು ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ನಿರಾಕರಿಸಿದ್ದಾರೆ.
ಇದು ಸಾರ್ವಜನಿಕ ಬಳಕೆಗೆ ಅನುಮತಿ ಇರದ, ಕಂಪನಿಯ ಒಡೆತನದ ಖಾಸಗಿ ಆಸ್ತಿಯಾಗಿರುವುದರಿಂದ ನಾವು ಕಾನೂನು, ಆಡಳಿತ ಮತ್ತು ಶಾಸನಬದ್ಧ ತೊಡಕುಗಳನ್ನು ಎದುರಿಸುತ್ತಿದ್ದೇವೆ. ನಮ್ಮ ಸರ್ಜಾಪುರ ಕ್ಯಾಂಪಸ್ ಜಾಗತಿಕ ಗ್ರಾಹಕರಿಗೆ ಸೇವೆಗಳನ್ನು ಒದಗಿಸುವ ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್) ಆಗಿದ್ದು, ನಮ್ಮ ಒಪ್ಪಂದದ ಷರತ್ತುಗಳು ಕಟ್ಟುನಿಟ್ಟಾಗಿದ್ದು, ಬದಲಾವಣೆ ಮಾಡಲು ಸಾಧ್ಯವಿಲ್ಲದವುಗಳಾಗಿದೆ ಎಂದು ಅವರು ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಅಲ್ಲದೆ ಖಾಸಗಿ ಆಸ್ತಿಯಲ್ಲಿ ಸಾರ್ವಜನಿಕ ವಾಹನ ಸಂಚಾರವು ಸುಸ್ಥಿರ, ದೀರ್ಘಕಾಲೀನ ಪರಿಹಾರವಲ್ಲ ಎಂದೂ ಅವರು ಹೇಳಿದ್ದಾರೆ.
ಬೆಂಗಳೂರಿನ ಹೊರವರ್ತುಲ ರಸ್ತೆಯ ಸಂಚಾರ ದಟ್ಟಣೆ ಸಮಸ್ಯೆಗೆ ದೀರ್ಘಕಾಲಿನ ಪರಿಹಾರಕ್ಕೆ ತಜ್ಞರ ನೇತೃತ್ವದ ಅಧ್ಯಯನ ಮಾಡುವುದಿದ್ದರೆ ಪಾಲುದಾರಿಕೆಗೆ ಸಿದ್ಧ ಎಂದು ಅವರು ಹೇಳಿದ್ದಾರೆ.
ಹೊರ ವರ್ತುಲ ರಸ್ತೆಯಲ್ಲಿ ದಟ್ಟಣೆ ಅವಧಿಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಅದರಲ್ಲೂ ಇಬ್ಲೂರು ಜಂಕ್ಷನ್‌ನಲ್ಲಿ ಸಮಸ್ಯೆ ತೀವ್ರವಾಗಿದೆ. ಇದು ಉತ್ಪಾದನಾ ವಲಯ ಹಾಗೂ ಸ್ಥಳೀಯ ಜನರ ಜೀವನದ ಗುಣಮಟ್ಟದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹಾಗಾಗಿ ಪರಸ್ಪರ ಒಪ್ಪಿತ ಷರತ್ತು ಮತ್ತು ಅಗತ್ಯ ಭದ್ರತೆಯೊಂದಿಗೆ ವಿಪ್ರೊ ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೇಮ್‌ಜಿ ಅವರಿಗೆ ಪತ್ರ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.