ADVERTISEMENT

ಪ್ರಜಾವಾಣಿ ಭೂಮಿಕಾ ಕ್ಲಬ್‌ನಲ್ಲಿ ಪಸರಿಸಿದ ‘ಹೃದಯ’ದ ಮಾತುಗಳು

ಸಂಭ್ರಮ ಮೂಡಿಸಿದ ಅಡುಗೆ, ಕಿವಿಗೆ ಇಂಪು ನೀಡಿದ ಹಾಡು, ಅಂಕಿತ ಅಮರ್‌ ಮಾತು

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 19:54 IST
Last Updated 21 ಜೂನ್ 2025, 19:54 IST
ಭೂಮಿಕಾ ಕ್ಲಬ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನಸ್ತೋಮ
ಪ್ರಜಾವಾಣಿ ಚಿತ್ರ
ಭೂಮಿಕಾ ಕ್ಲಬ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನಸ್ತೋಮ ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಹಿಳೆಯರು ಎಲ್ಲ ಕೆಲಸಗಳ ನಡುವೆ ಹೃದಯದ ಆರೋಗ್ಯದ ಕಾಳಜಿ ವಹಿಸ‌ಬೇಕಾದ ಮಾಹಿತಿ, ಘಮಘಮಿಸಿದ ಅಡುಗೆ, ಇಂಪಾದ ಹಾಡುಗಳು, ನಡು ನಡುವೆ ರಸಪ್ರಶ್ನೆಗಳು...

ಕೋರಮಂಗಲ ಕ್ಲಬ್‌ನಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ನ ಭೂಮಿಕಾ ಕ್ಲಬ್‌ ಶನಿವಾರ ಆಯೋಜಿಸಿದ್ದ 28ನೇ ಆವೃತ್ತಿಯ ಕಾರ್ಯಕ್ರಮದ ಇಣುಕುನೋಟ ಇದು.

‘ಫ್ರೀಡಂ ಆಯಿಲ್’, ‘ಮಣಿಪಾಲ್ ಆಸ್ಪತ್ರೆಗಳ ಸಮೂಹ’, ‘ಇಕೊ ಕ್ರಿಸ್ಟಲ್‌’ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉದ್ಘಾಟಕರ ಮಾತು, ಮೇಕಪ್‌ ಪ್ರಾತ್ಯಕ್ಷಿಕೆ ಉತ್ಸಾಹ ತುಂಬಿದವು.

ADVERTISEMENT

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟಿ ಅಂಕಿತಾ ಅಮರ್‌ ಮಾತನಾಡಿ, ‘ಹೆಣ್ಣುಮಕ್ಕಳು 23-25 ​​ನೇ ವಯಸ್ಸಿನಲ್ಲಿ ಸಂಗಾತಿಯನ್ನು ಹುಡುಕಲು ಆರಂಭಿಸುತ್ತಾರೆ. ಜೀವನದುದ್ದಕ್ಕೂ ನಮ್ಮ ಕೈ ಹಿಡಿಯಬಲ್ಲವರು ಯಾರೂ ಎಂದು ಮನಸ್ಸಲ್ಲೇ ಕೇಳಿಕೊಳ್ಳುತ್ತಾರೆ. ಸಂಗಾತಿ ಆಗುವವರಿಂದ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತೇವೆ. ನಮ್ಮನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಯಸುತ್ತೇವೆ. ನಮ್ಮ ಭಾವನೆಗೆ ಸ್ಪಂದಿಸಬೇಕು ಎಂದು ಆಸೆ ಪಡುತ್ತೇವೆ. ಜೊತೆಗೆ ನಾವು ನಮ್ಮನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ’ ಎಂದು ಸಲಹೆ ನೀಡಿದರು.

‘ಭೂಮಿಕಾ ಕ್ಲಬ್ ಆತ್ಮಾವಲೋಕನ ಗುಣವನ್ನು ಬೆಳೆಸುತ್ತದೆ. ಮಹಿಳೆಯರು ತಮ್ಮನ್ನು ತಾವು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ’ ಎಂದರು.

ಮಹಿಳೆಯರು ಪುರುಷರಿಗಿಂತ ಉತ್ತಮರು ಎಂದು ಭಾವಿಸಬಾರದು. ಹಾಗೆ ಪುರುಷರೂ ಮಹಿಳೆಯರಿಗಿಂತ ಶ್ರೇಷ್ಠರಲ್ಲ. ತಮ್ಮದೇ ಆದ ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ. ಸಹಾನುಭೂತಿ, ಕಾಳಜಿ ಮತ್ತು ಭಾವನಾತ್ಮಕ ವಿಚಾರಗಳಲ್ಲಿ ಮಹಿಳೆಯರು  ಮುಂದಿರುತ್ತಾರೆ ಎಂದರು. ಹಾಡು ಹಾಡಿ ಅಂಕಿತಾ ರಂಜಿಸಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ದಿಕ್ಸೂಚಿ ಭಾಷಣ ಮಾಡಿದರು. ‘ಚಂದನವನ’ ರಸಪ್ರಶ್ನೆಯಲ್ಲಿ ಪಾಲ್ಗೊಂಡು ಸರಿ ಉತ್ತರ ನೀಡಿದವರು ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಾಸ್‌ ಪಡೆದರು. 

ಒಗ್ಗರಣೆ ಡಬ್ಬಿ ಮುರಳಿ ಮತ್ತು ಸುಚಿತ್ರ ಅವರು ಅಡುಗೆ ಪ್ರಾತ್ಯಕ್ಷಿಕೆ ನೀಡಿದರು. ಶೋಭಾ ಬಿ.ಜಿ. ಮೇಕಪ್‌ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ನಿರೂಪಕರಾದ ಆರ್‌.ಜೆ. ಅಕ್ಷಯ್‌ ಮತ್ತು ಸ್ನೇಹಾ ನೀಲಪ್ಪ ಗೌಡ ಪ್ರೇಕ್ಷಕರಿಗೆ ವಿವಿಧ ಆಟಗಳನ್ನು ಆಡಿಸಿ ಹುರಿದುಂಬಿಸಿದರು. ದಿವ್ಯಾ ರಾಮಚಂದ್ರ ಅವರ ಇಂಪಾದ ಸಂಗೀತದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಒಗ್ಗರಣೆ ಡಬ್ಬಿ ಮುರಳಿ ಮತ್ತು ಸುಚಿತ್ರಾ ಅವರು ಅಡುಗೆ ಪ್ರಾತ್ಯಕ್ಷಿಕೆ ನೀಡಿದರು. 
ಶೋಭಾ ಬಿ.ಜಿ. ಮೇಕಪ್‌ ಪ್ರಾತ್ಯಕ್ಷಿಕೆ ನೀಡಿದರು
ದಿವ್ಯಾ ರಾಮಚಂದ್ರ ಹಾಡುಗಳ ಮೂಲಕ ರಂಜಿಸಿದರು
ಭೂಮಿಕಾ ಕ್ಲಬ್‌

ಉತ್ತಮ ಆಹಾರ ಪ್ರತಿದಿನ ನಡಿಗೆ ಇರಲಿ

ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಎಂದರೆ ಪೂರ್ತಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದಾಗಿದೆ. ಮನೆಯಿಂದ ಹೊರಗೆ ಊಟ ಮಾಡುವುದನ್ನು ಬಿಡಬೇಕು. ಎಣ್ಣೆ ಪದಾರ್ಥಗಳಿಂದ ದೂರ ಇರಬೇಕು. ದಿನಕ್ಕೆ ಕನಿಷ್ಠ ಅರ್ಧಗಂಟೆ ನಡೆಯಬೇಕು ಎಂದು ಮಣಿಪಾಲ್‌ ಆಸ್ಪತ್ರೆಯ ಹೃದ್ರೋಗ ತಜ್ಞೆ ಡಾ. ಅನುಷಾ ಎ. ರಾವ್‌ ಸಲಹೆ ನೀಡಿದರು. ‘ಬೆಳಿಗ್ಗೆಯಿಂದ ಸಂಜೆವರೆಗೆ ಅಡುಗೆ ಇನ್ನಿತರ ಕೆಲಸ ಮಾಡುತ್ತಿದ್ದೇವೆ. ಮತ್ತಿನ್ನೇಕೆ ವಾಕಿಂಗ್‌ ಎಂದು ಕೇಳುವುದನ್ನು ಬಿಟ್ಟುಬಿಡಿ. ನಿಮ್ಮ ಆರೋಗ್ಯದ ಬಗ್ಗೆ ನೀವಲ್ಲದೇ ಬೇರೆ ಯಾರೂ ಕಾಳಜಿ ವಹಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ‘ತಂಬಾಕಿನ ಉತ್ಪನ್ನಗಳನ್ನು ಸೇವಿಸಬೇಡಿ. ಮದ್ಯಪಾನ ಮಾಡಬೇಡಿ. 40 ವರ್ಷ ದಾಟಿದವರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಹೃದಯದ ಸಮಸ್ಯೆ ಉಂಟಾಗದಂತೆ ಮೊದಲೇ ಎಚ್ಚರವಹಿಸಿ. ಮಂಡಿ ನೋವು ಇರುವವರು ಐದು ನಿಮಿಷ ನಡೆದು ವಿಶ್ರಾಂತಿ ಪಡೆಯಬೇಕು. ಮತ್ತೆ ಐದು ನಿಮಿಷ ನಡೆಯಬೇಕು. ಇದೇ ರೀತಿ ಆರೇಳು ಬಾರಿ ನಡೆಯಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.