ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾಥಾದಲ್ಲಿ ವೈದ್ಯರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕ್ಯಾನ್ಸರ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಿದರು.
ಸಂಸ್ಥೆಯ ಆವರಣದಲ್ಲಿ ಈ ಜಾಥಾಕ್ಕೆ ಚಲನಚಿತ್ರ ನಟ ವಸಿಷ್ಠ ಸಿಂಹ ಚಾಲನೆ ನೀಡಿದರು. ‘ಶೀಘ್ರ ಪತ್ತೆ, ಕ್ಯಾನ್ಸರ್ ನಾಪತ್ತೆ’ ಘೋಷವಾಕ್ಯದಡಿ ನಡೆದ ಈ ಜಾಥಾದಲ್ಲಿ 500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಇದೇ ವೇಳೆ ಮಾತನಾಡಿದ ವಸಿಷ್ಠ ಸಿಂಹ, ‘ಕ್ಯಾನ್ಸರ್ ಎಂದ ಕೂಡಲೇ ಸಾಮಾನ್ಯವಾಗಿ ಎಲ್ಲರಲ್ಲೂ ಭಯ ಇರುತ್ತದೆ. ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ನಡೆದ ಸಂಶೋಧನೆಗಳಿಂದಾಗಿ ಎಲ್ಲ ರೀತಿಯ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ಲಭ್ಯವಿದೆ. ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಮೂಲಕ ಜನ ಸಮೂಹಕ್ಕೆ ಧೈರ್ಯ ತುಂಬಬೇಕಿದೆ. ಕ್ಯಾನ್ಸರ್ ಬಗ್ಗೆ ಯಾರೂ ಭಯ ಪಡಬೇಕಾಗಿಲ್ಲ. ತಂಬಾಕು ಹಾಗೂ ದುಶ್ಚಟಗಳಿಂದ ದೂರವಿದ್ದರೆ ಆರೋಗ್ಯಯುತ ಜೀವನ ಸಾಧ್ಯ’ ಎಂದು ಹೇಳಿದರು
ಆರಂಭಿಕ ಹಂತದಲ್ಲೇ ಪತ್ತೆ:
ಸಂಸ್ಥೆಯ ಆಡಳಿತಾಧಿಕಾರಿ ವೈ. ನವೀನ್ ಭಟ್, ‘ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಿದಲ್ಲಿ ಕಾಯಿಲೆ ಗುಣಪಡಿಸಬಹುದಾಗಿದೆ. ಕಿದ್ವಾಯಿ ಆಸ್ಪತ್ರೆಯು ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು, ವಿಶ್ವದರ್ಜೆಯ ಚಿಕಿತ್ಸೆ ಒದಗಿಸುತ್ತಿದೆ. ಕ್ಯಾನ್ಸರ್ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.
ಸಂಸ್ಥೆ ನಿರ್ದೇಶಕ ಡಾ.ಟಿ.ನವೀನ್, ‘ಕ್ಯಾನ್ಸರ್ ರೋಗವನ್ನು ಸೂಕ್ತ ಸಮಯದಲ್ಲಿ ಪತ್ತೆ ಹಚ್ಚಿ, ಸಮರ್ಪಕ ಚಿಕಿತ್ಸೆ ಒದಗಿಸಿದರೆ ಗುಣಪಡಿಸಲು ಸಾಧ್ಯ. ರೋಗಿಗಳು ಕ್ಯಾನ್ಯರ್ ಬಗ್ಗೆ ಭಯಪಡದೆ, ಅಗತ್ಯ ಚಿಕಿತ್ಸೆ ಪಡೆಯಬೇಕು. ನಮ್ಮ ಆಸ್ಪತ್ರೆಯು ಅತ್ಯಾಧುನಿಕ ಸೌಲಭ್ಯ, ನುರಿತ ವೈದ್ಯರನ್ನು ಒಳಗೊಂಡಿದೆ. ಸ್ತನ, ರಕ್ತ, ಶ್ವಾಸಕೋಶ ಸೇರಿದಂತೆ ಗರ್ಭಕಂಠ ಕ್ಯಾನ್ಸರ್ ಹೆಚ್ಚಿನ ಜನರನ್ನು ಕಾಡುತ್ತಿದೆ’ ಎಂದು ಹೇಳಿದರು.
ಇದೇ ವೇಳೆ ಕ್ಯಾನ್ಸರ್‌ನಿಂದ ಚೇತರಿಸಿಕೊಂಡವರು ಹಾಗೂ ಅವರ ಕುಟುಂಬಸ್ಥರು ಅಭಿಪ್ರಾಯ ಹಂಚಿಕೊಂಡರು. ಸಂಸ್ಥೆಯ ಆವರಣದಿಂದ ತೆರಳಿದ ಜಾಥಾ, ಲಾಲ್‌ಬಾಗ್‌ವರೆಗೂ ಸಾಗಿ ರೋಗದ ಬಗ್ಗೆ ಜಾಗೃತಿ ಮೂಡಿಸಿತು.
ಬಾಯಿ ಸ್ತನ ಕ್ಯಾನ್ಸರ್ ತಪಾಸಣೆ
ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಎಚ್‌ಸಿಜಿ ಕಾನ್ಸರ್ ಕೇಂದ್ರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ರಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಾರಿಗೆ ನೌಕರರಿಗೆ ಉಚಿತವಾಗಿ ಬಾಯಿ ಮತ್ತು ಸ್ತನ ಕ್ಯಾನ್ಸರ್ ತಪಾಸಣೆ ನಡೆಸಿತು. ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಎಚ್‌ಸಿಜಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್ ಅವರು ಈ ಆರೋಗ್ಯ ತಪಾಸಣಾ ಶಬಿರಕ್ಕೆ ಚಾಲನೆ ನೀಡಿದರು. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಆಡಳಿತಾಧಿಕಾರಿ ನವೀನ್ ಭಟ್ ಕೆಎಸ್ಆರ್‌ಟಿಸಿ ನಿರ್ದೇಶಕಿ (ಸಿಬ್ಬಂದಿ ಮತ್ತು ಜಾಗೃತ) ನಂದಿನಿದೇವಿ ಕೆ. ಎಚ್‌ಸಿಜಿ ಆಸ್ಪತ್ರೆಯ ಡಾ. ಮಹೇಶ್ ಬಂಡೆಮೇಗಲ್ ಉಪಸ್ಥಿತರಿದ್ದರು. ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರ್ನಾಟಕ ರಾಜ್ಯ ಶಾಖೆಯಿಂದಲೂ ವಿಶ್ವ ಕ್ಯಾನ್ಸರ್ ದಿನ ಆಚರಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಐಎಂಎ ರಾಜ್ಯ ಘಟಕದ ಉಪಾಧ್ಯಕ್ಷ ಡಾ. ಮರಿಗೌಡ ಟಿ.ಎಸ್. ಗೌರವ ಕಾರ್ಯದರ್ಶಿ ಡಾ. ಸೂರಿರಾಜು ವಿ. ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ‘ಉತ್ತಮ ಜೀವನ ವಿಧಾನ ಅಳವಡಿಸಿಕೊಂಡು ನಿಯಮಿತವಾಗಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿದಲ್ಲಿ ಚಿಕಿತ್ಸೆ ಸುಲಭ ಸಾಧ್ಯ’ ಎಂದು ಸಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.