ADVERTISEMENT

₹15 ಲಕ್ಷ ಕೊಡ್ತಿವಿ ಅಂತ ಹೇಳಿ 11 ವರ್ಷ ಆಯ್ತು, ಅದನ್ನೇಕೆ ಕೇಳವಲ್ರಿ: ದರ್ಶನಾಪೂರ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 12:30 IST
Last Updated 26 ಜೂನ್ 2025, 12:30 IST
<div class="paragraphs"><p>ಶರಣಬಸಪ್ಪ ದರ್ಶನಾಪೂರ</p></div>

ಶರಣಬಸಪ್ಪ ದರ್ಶನಾಪೂರ

   

ಬೀದರ್‌: ‘₹15 ಲಕ್ಷ ಕೊಡ್ತಿವಿ ಅಂತ ಹೇಳಿ 11 ವರ್ಷ ಆಯ್ತು. ಅದನ್ನೇಕೆ ಕೇಳವಲ್ರಿ. ಗ್ಯಾರಂಟಿ ಹಣ ಕೊಡಲು ಎರಡು ತಿಂಗಳು ವಿಳಂಬವಾದರೆ ಪೇಪರ್‌ನವ್ರು, ವಿರೋಧ ಪಕ್ಷದವರು ಕೇಳತೀರಿ’ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಪ್ರಶ್ನಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಗುರುವಾರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ನಾವು ಪ್ರತಿ ತಿಂಗಳು ₹2 ಸಾವಿರ ಹಾಕ್ತಿವಿ ಅಂತ ಹೇಳಿದ್ವಿ. ಏನೋ ಸ್ವಲ್ಪ ತಡವಾಗಿರಬೇಕು. ಆದರೆ, ₹15 ಲಕ್ಷ ಕೊಡ್ತಿವಿ ಅಂತ ಕೇಂದ್ರದ ಬಿಜೆಪಿಯವರು ಹೇಳಿ 11 ವರ್ಷವಾಯ್ತು ಅದನ್ನೇಕೆ ಕೇಳುವುದಿಲ್ಲ ಎಂದು ಮರು ಪ್ರಶ್ನೆ ಹಾಕಿದರು.

ADVERTISEMENT

ಯಾರಾದ್ರೂ ಒಬ್ಬರು ಅಪಸ್ವರ ಎತ್ತುತ್ತಾರೆ. ಎಲ್ಲರೂ ಒಂದೇ ತರಹ ಇರ್ತಾರಾ? ನಮ್ಮ ಎಲ್ಲ ಶಾಸಕರ ಒಪ್ಪಿಗೆ ಇರುವುದಕ್ಕೆ ಗ್ಯಾರಂಟಿಗಳನ್ನು ಕೊಡ್ತಿದ್ದೀವಿ. ಅಣ್ಣತಮ್ಮಂದಿರೆ ಜಗಳ ಆಡಿ ಮರ್ಡರ್‌ ಮಾಡ್ತಾರ. ಇಲ್ಲಿ ಯಾರು ಮಾತೇ ಆಡಬಾರದಾ? ಅಭಿವೃದ್ಧಿಗೆ ಹಣ ಬರ್ತಿದೆ. ಆದರೆ, ಕೇಂದ್ರ ಸರ್ಕಾರ ಏನು ಕೊಡ್ಬೇಕು ಅದನ್ನು ಕೊಡ್ತಿಲ್ಲ ಎಂದು ಆರೋಪಿಸಿದರು.

ಬಿಜೆಪಿಯವರು ಎಂದಾದರೂ ಅಭಿವೃದ್ಧಿ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸಿದ್ದಾರಾ? ನಾವು ಕೆಲಸ ಮಾಡಿದ್ದೇವೆ ಎಂದು ಎದೆ ತಟ್ಟಿ ಹೇಳುತ್ತೇವೆ. 11 ವರ್ಷಗಳಲ್ಲಿ ಬಿಜೆಪಿಯವರು ರೈತರು, ಕೂಲಿ ಕಾರ್ಮಿಕರಿಗೆ ಏನು ಮಾಡಿದ್ದಾರೆ. ನೀವು ಎಂದೂ ಬಿಜೆಪಿಯವರನ್ನ ಕೇಳಿಲ್ಲ. ಕೆಲಸ ಮಾಡುವವರಿಗೆ ಕೇಳ್ತೀರಿ. ತುರ್ತು ಪರಿಸ್ಥಿತಿ ಆಗಿ 50 ವರ್ಷವಾಯ್ತು. ಔರಂಗಜೇಬ್‌ ಸತ್ತು ಎಷ್ಟೋ ವರ್ಷಗಳಾಗಿವೆ. ಈಗ ಅದರ ಬಗ್ಗೆ ಮಾತನಾಡಿದರೆ ಏನು ಉಪಯೋಗ. ಎಮರ್ಜೆನ್ಸಿ ಛಲೋ ಅಂತ ನಾವ್ಯಾರೂ ಹೇಳಿಲ್ಲ ಎಂದರು.

ಕಾಂಗ್ರೆಸ್‌ ಮುಖಂಡ ಅರವಿಂದಕುಮಾರ ಅರಳಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.