ADVERTISEMENT

ತಂದೆ -ಮಗನ ಸುಳ್ಳು ಪ್ರಚಾರ ಖಂಡನೀಯ: ಈಶ್ವರ ಖಂಡ್ರೆ ವಿರುದ್ಧ ಭಗವಂತ ಖೂಬಾ ಕಿಡಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 6:31 IST
Last Updated 21 ಜುಲೈ 2025, 6:31 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್: ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತನ್ನ ಮಗನ ಒಂದು ವರ್ಷದ ಸಾಧನೆ ಬಗ್ಗೆ ಜಿಲ್ಲೆಯ ಸ್ವಾಮೀಜಿಯೊಬ್ಬರಿಗೆ ತಪ್ಪು ಮಾಹಿತಿ ನೀಡಿ ಅವರಿಂದ ವಿಡಿಯೊ ಮೂಲಕ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಹೇಳಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ಈಶ್ವರ ಖಂಡ್ರೆ ರಾಜಕೀಯವಾಗಿ ಇಷ್ಟೊಂದು ಕೆಳ ಮಟ್ಟಕ್ಕೆ ಇಳಿದಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.‌ ಜಿಲ್ಲೆಯ ಒಬ್ಬ ಸ್ವಾಮೀಜಿಯವರ ಕಡೆಯಿಂದ ಪ್ರಸಾದ ಯೋಜನೆಯಡಿ ಪಾಪನಾಶ ದೇವಸ್ಥಾನಕ್ಕೆ ಅನುದಾನ ತಂದಿರುವುದಾಗಿ ಹೇಳಿಕೆ ಕೊಡಿಸಿ ಪ್ರಚಾರ ಪಡೆಯುತ್ತಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

‘ಪೂಜ್ಯರಿಗೆ ಕುತಂತ್ರಿಗಳು ಸತ್ಯವನ್ನು ಮುಚ್ಚಿಟ್ಟು, ತಮ್ಮ ಸ್ವಾರ್ಥಕ್ಕಾಗಿ, ಅವರಿಂದ ಅವರ ಭಕ್ತ ವೃಂದಕ್ಕೆ, ಸಾರ್ವಜನಿಕರಿಗೆ ತಪ್ಪು ಮಾಹಿತಿ ಕೊಡುವ ಕೆಲಸ ಮಾಡಿದ್ದಾರೆ’ ಎಂದರು.

ADVERTISEMENT

‘ಮಠವನ್ನು ಕೊಳ್ಳೆ ಹೊಡೆದವರು, ಪಿಠಾಧಿಪತಿಗಳಿಗೆ ನೋವು ಕೊಟ್ಟವರು ಇಂದು ಅದೇ ಮಠಗಳಿಗೆ, ಪೂಜ್ಯರ ಬಳಿಗೆ ಹೊಗಿ ಇಂತಹ ಹೊಸ ನಾಟಕ ಮಾಡುತ್ತಿದ್ದು, ತಂದೆ ಮಗನಿಗೆ ನಾಚಿಕೆ ಬರಬೇಕು. ಜನರು ಬುದ್ಧಿವಂತರಿದ್ದಾರೆ., ಇವರ ಆಟ ಬಹಳ ದಿನ ನಡೆಯಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.