ADVERTISEMENT

ಬೀದರ್‌–ಬೆಂಗಳೂರು ವಿಮಾನ ತಿರುಪತಿಗೆ ವಿಸ್ತರಣೆ: ಸಚಿವ ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 12:28 IST
Last Updated 18 ಆಗಸ್ಟ್ 2023, 12:28 IST
   

ಬೀದರ್‌: ‘ಬೀದರ್‌–ಬೆಂಗಳೂರು ನಡುವೆ ನಿತ್ಯ ಸಂಚರಿಸುವ ‘ಸ್ಟಾರ್‌ ಏರ್‌’ ಹಾಲಿ ವಿಮಾನ ಆ. 24ರಿಂದ ವಾರದಲ್ಲಿ ಐದು ದಿನ ತಿರುಪತಿ ವರೆಗೆ ವಿಸ್ತರಿಸಲಾಗಿದೆ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.


ವಾರದಲ್ಲಿ ಸೋಮವಾರ, ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ತಿರುಪತಿ ತನಕ ವಿಮಾನ ಪಯಣ ಬೆಳೆಸಲಿದೆ. ಪ್ರತಿ ಸೋಮವಾರ ಮತ್ತು ಶುಕ್ರವಾರ ಬೀದರ್‌ನಿಂದ ಸಂಜೆ 5.30ಕ್ಕೆ ಹೊರಟು ಬೆಂಗಳೂರಿಗೆ 6.45ಕ್ಕೆ ತಲುಪಿ, ಅಲ್ಲಿಂದ ರಾತ್ರಿ 7.10ಕ್ಕೆ ನಿರ್ಗಮಿಸಿ ರಾತ್ರಿ 8ಕ್ಕೆ ತಿರುಪತಿ ತಲುಪಲಿದೆ. ಅದೇ ದಿನ ರಾತ್ರಿ 8.25ಕ್ಕೆ ತಿರುಪತಿಯಿಂದ ಹೊರಡುವ ವಿಮಾನ ರಾತ್ರಿ 9.15ಕ್ಕೆ ಬೆಂಗಳೂರು ಸೇರಲಿದೆ. ಮರುದಿನ ಮಧ್ಯಾಹ್ನ 3ಕ್ಕೆ ಬೆಂಗಳೂರಿನಿಂದ ನಿರ್ಗಮಿಸಿ 4.10ಕ್ಕೆ ಬೀದರ್‌ ತಲುಪಲಿದೆ ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಳಿದ ಮೂರು ದಿನಗಳಾದ ಗುರುವಾರ, ಶನಿವಾರ ಮತ್ತು ಭಾನುವಾರ ಬೀದರ್‌ನಿಂದ ಸಂಜೆ 4.50ಕ್ಕೆ ಹೊರಟು ಸಂಜೆ 6.05ಕ್ಕೆ ಬೆಂಗಳೂರು ತಲುಪಲಿದೆ. ಸಂಜೆ 6.30ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 7.20ಕ್ಕೆ ತಿರುಪತಿ ಸೇರಲಿದೆ. ತಿರುಪತಿಯಿಂದ ರಾತ್ರಿ 7.45ಕ್ಕೆ ಹೊರಟು ರಾತ್ರಿ 8.35ಕ್ಕೆ ಬೆಂಗಳೂರು ತಲುಪಲಿದೆ. ಮರುದಿನ ಮಧ್ಯಾಹ್ನ ಎಂದಿನಂತೆ ಬೆಂಗಳೂರಿನಿಂದ ಬೀದರ್‌ಗೆ ವಿಮಾನ ಪ್ರಯಾಣ ಬೆಳೆಸಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT


ತಿರುಪತಿ ವರೆಗೆ ವಿಮಾನ ಸೇವೆ ಆರಂಭಗೊಂಡ ನಂತರ ಬಾಲಾಜಿ ಭಕ್ತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಕ್ಷೇತ್ರದ ಜನರ ಬಹುವರ್ಷಗಳ ಕನಸು ಈಡೇರಿದೆ. ಬೀದರ್‌ನಿಂದ ವಿಮಾನ ಸೇವೆ ಆರಂಭಿಸಲು ಅನೇಕ ತೊಡಕುಗಳು ಎದುರಾಗಿದ್ದವು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಸಮನ್ವಯ ಸಾಧಿಸಿ ವಿಮಾನ ಸೇವೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
 
ಇತ್ತೀಚೆಗೆ ₹25 ಕೋಟಿ ಅನುದಾನದಲ್ಲಿ ಬೀದರ್‌ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ತೆಲಂಗಾಣದ ವಿಕಾರಾಬಾದ–ಬೀದರ್‌–ಮಹಾರಾಷ್ಟ್ರದ ಪರಳಿ 267 ಕಿ.ಮೀ ರೈಲು ಮಾರ್ಗದ ಅಂತಿಮ ಲೋಕೇಷನ್‌ ಸರ್ವೇಗೆ ಆದೇಶಿಸಲಾಗಿದೆ. ಶೀಘ್ರ ಮಂಜೂರಾತಿ ದೊರೆಯಲಿದೆ ಎಂದು ಹೇಳಿದ್ದಾರೆ.

ಬೀದರ್‌ ವಿಮಾನ ನಿಲ್ದಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.