ADVERTISEMENT

ಬೀದರ್‌: ಕಾಂಗ್ರೆಸ್‌ ಹೊಸ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುರು

ಕೆಪಿಸಿಸಿಯಿಂದ ವೀಕ್ಷಕರ ನಿಯೋಜನೆ; ಕಾಂಗ್ರೆಸ್‌ ಅಸಮಾಧಾನಿತರ ಮೇಲುಗೈ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ಜುಲೈ 2025, 4:52 IST
Last Updated 7 ಜುಲೈ 2025, 4:52 IST
<div class="paragraphs"><p>ಕಾಂಗ್ರೆಸ್</p></div>

ಕಾಂಗ್ರೆಸ್

   

ಬೀದರ್‌: ಬೀದರ್‌ ಜಿಲ್ಲಾ ಕಾಂಗ್ರೆಸ್‌ ಸಮಿತಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಕ್ಕಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬೀದರ್‌ ಜಿಲ್ಲೆಗೆ ಇಬ್ಬರು ವೀಕ್ಷಕರನ್ನು ನೇಮಿಸುವ ಮೂಲಕ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದಾರೆ.

ADVERTISEMENT

ಮಾಜಿಸಚಿವರೂ ಆದ ಕಾಂಗ್ರೆಸ್‌ ಮುಖಂಡ ರಾಜಶೇಖರ ಪಾಟೀಲ್‌ ಹುಮನಾಬಾದ್‌, ಮಾಜಿ ವಿಧಾನ ಪರಿಷತ್‌ ಸದಸ್ಯರೂ, ಪಕ್ಷದ ಮುಖಂಡರಾದ ಅರವಿಂದಕುಮಾರ ಅರಳಿ, ಪುಂಡಲೀಕರಾವ್‌ ಸೇರಿದಂತೆ ಹಲವು ಕಾಂಗ್ರೆಸ್‌ ಅಸಮಾಧಾನಿತರು ಇತ್ತೀಚೆಗೆ ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಬೀದರ್‌ ಜಿಲ್ಲೆಯ ಅಸಮಾಧಾನಿತ ಕಾಂಗ್ರೆಸ್‌ ಮುಖಂಡರು ಮೂರು ಸಲ ಬೆಂಗಳೂರಿನಲ್ಲಿ ಸಭೆ ಸೇರಿದರೆ, ಒಂದು ಸಲ ಬೀದರ್‌ನಲ್ಲಿ ಸಭೆ ಸೇರಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಪಕ್ಷದ ವರಿಷ್ಠರಿಗೆ ದೂರು ಸಲ್ಲಿಸಿದ್ದರು. ಇದಾದ ಬಳಿಕ ಹೊಸ ಅಧ್ಯಕ್ಷರ ಆಯ್ಕೆಗೆ ಕೆಪಿಸಿಸಿ ಮುಂದಾಗಿರುವುದರಿಂದ ಅಸಮಾಧಾನಿತ ಮುಖಂಡರಿಗೆ ಹುರುಪು ಬಂದಂತಾಗಿದೆ. ಅವರ ಮಾತಿಗೆ ಮನ್ನಣೆ ಸಿಕ್ಕಿದ್ದು, ಮೇಲುಗೈ ಸಾಧಿಸಿದ್ದಾರೆ.

8 ವರ್ಷಗಳ ಅಧಿಕಾರಕ್ಕೆ ತೆರೆ?:

ಹಾಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರು ಕಳೆದ ಎಂಟು ವರ್ಷಗಳಿಂದ ಈ ಹುದ್ದೆಯಲ್ಲಿ ಇದ್ದಾರೆ. ಇದರೊಂದಿಗೆ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ನೇಮಕಗೊಂಡಿದ್ದಾರೆ. ಆದರೆ, ಕಾಂಗ್ರೆಸ್‌ ಅಸಮಾಧಾನಿತ ಮುಖಂಡರು ಇವರ ಕಾರ್ಯವೈಖರಿ ಬಗ್ಗೆ ಸಾಕಷ್ಟು ದೂರುಗಳನ್ನು ಸಲ್ಲಿಸಿರುವುದರಿಂದ ಅವರು ಪುನಃ ಅಧ್ಯಕ್ಷರಾಗಿ ಮುಂದುವರೆಯುವ ಸಾಧ್ಯತೆಗಳು ತೀರ ಕಡಿಮೆ ಎಂದು ಕಾಂಗ್ರೆಸ್‌ ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.

‘ಬಸವರಾಜ ಜಾಬಶೆಟ್ಟಿ ಅವರು ಆರ್‌ಎಸ್‌ಎಸ್‌, ವಿಎಚ್‌ಪಿ ಪರ ಒಲವು ಹೊಂದಿರುವವರು. ಅವರು ಸಚಿವ ಈಶ್ವರ ಬಿ. ಖಂಡ್ರೆ ಅವರ ಆಪ್ತರು. ಖಂಡ್ರೆ ಅವರು ಅವರ ಪ್ರಭಾವ ಬಳಸಿ ಜಾಬಶೆಟ್ಟಿ ಅವರನ್ನು ಜಿಲ್ಲಾಧ್ಯಕ್ಷರಾಗಿ ಮಾಡಿದ್ದಾರೆ. ಬುಡಾ ಅಧ್ಯಕ್ಷಗಿರಿ ಕೂಡ ಅವರಿಂದಲೇ ಸಿಕ್ಕಿದೆ. ಹೀಗಾಗಿ ಅವರ ನಿಷ್ಠೆ ಖಂಡ್ರೆ ಅವರಿಗಷ್ಟೇ ಸೀಮಿತವಾಗಿದೆ. ಪಕ್ಷ ನಿಷ್ಠೆಯ ವ್ಯಕ್ತಿ ಅವರಲ್ಲ. ಈ ವಿಷಯ ಈಗ ಪಕ್ಷದ ವರಿಷ್ಠರಿಗೂ ಗೊತ್ತಾಗಿದೆ. ಈ ಸಲ ಅವರು ಮುಂದುವರೆಯುವುದಿಲ್ಲ. ಈ ಸಲ ಪಕ್ಷ ನಿಷ್ಠೆ ಹೊಂದಿದ ಹೊಸಬರಿಗೆ ಜವಾಬ್ದಾರಿ ಸಿಗುವುದು ನೂರಕ್ಕೆ ನೂರು ಖಚಿತ. ಇನ್ಮುಂದೆ ಏಕಪಕ್ಷೀಯ ನಿರ್ಧಾರಗಳಿಗೆ ಪಕ್ಷದಲ್ಲಿ ಯಾವುದೇ ಅವಕಾಶವಿಲ್ಲ’ ಎಂದು ಹಿರಿಯ ಕಾಂಗ್ರೆಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪಕ್ಷಕ್ಕಲ್ಲ ಅಧಿಕಾರಕ್ಕಾಗಿ ಅಧ್ಯಕ್ಷ’

‘ಬೀದರ್‌ ಜಿಲ್ಲಾ ಕಾಂಗ್ರೆಸ್‌ ಸಮಿತಿ ಹಾಲಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರು ಎಂದೂ ಪಕ್ಷಕ್ಕಾಗಿ ಶ್ರಮಿಸಿದವರಲ್ಲ. ಅವರು ಪಕ್ಷಕ್ಕಲ್ಲ ಅಧಿಕಾರಕ್ಕಾಗಿ ಅಧ್ಯಕ್ಷ ಸ್ಥಾನ ಅಲಂಕರಿಸಿದವರು. ಎಐಸಿಸಿ ಅಧ್ಯಕ್ಷರಾಗಲಿ ಗಾಂಧಿ ಮನೆತನದವರಾಗಲಿ ಕಾಂಗ್ರೆಸ್‌ ಪಕ್ಷವನ್ನು ವಿರೋಧಿಗಳು ಟೀಕಿಸಿದರೆ ಎಂದೂ ಅದಕ್ಕೆ ಪ್ರತಿಕ್ರಿಯಿಸಿದವರಲ್ಲ. ಇಂತಹವರು ಅಧ್ಯಕ್ಷರಾಗಿದ್ದರೆ ಪಕ್ಷಕ್ಕೆ ಏನು ಲಾಭ. ಈಗಲಾದರೂ ವರಿಷ್ಠರಿಗೆ ಈ ವಿಷಯ ಮನದಟ್ಟಾಗಿ ಅವರನ್ನು ಬದಲಿಸಲು ಹೊರಟಿರುವುದು ಸ್ವಾಗತಾರ್ಹ’ ಎಂದು ಹೆಸರು ಹೇಳಲಿಚ್ಛಿಸದ ಅಸಮಾಧಾನಿತ ಹಿರಿಯ ಕಾಂಗ್ರೆಸ್‌ ಮುಖಂಡರು ಹೇಳುತ್ತಾರೆ. ‘ಜಿಲ್ಲಾ ಬಿಜೆಪಿ ಅಧ್ಯಕ್ಷರು ತಿಂಗಳಲ್ಲಿ ಏಳೆಂಟು ಪತ್ರಿಕಾಗೋಷ್ಠಿಗಳನ್ನು ಕರೆದು ಪಕ್ಷವನ್ನು ಸಂಘಟಿಸುತ್ತಾರೆ. ಬೀದಿಗಿಳಿದು ಹೋರಾಟ ನಡೆಸುತ್ತಾರೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡುತ್ತಾರೆ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಎಂದಾದರೂ ಈ ಕೆಲಸ ಮಾಡಿದ್ದಾರಾ? ಆದರೆ ಎಂಟು ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ. ಇದು ದುರಂತವಲ್ಲದೇ ಮತ್ತೇನೂ’ ಎಂದು ಪ್ರಶ್ನಿಸಿದರು.

ಬೀದರ್‌ ಜಿಲ್ಲೆಗೆ ವೀಕ್ಷಕರು ಯಾರು?

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಬೀದರ್‌ ಜಿಲ್ಲೆಯ ವೀಕ್ಷಕರಾಗಿ ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ್‌ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಒಬೇದುಲ್ಲಾ ಷರೀಫ್‌ ಅವರನ್ನು ನೇಮಕ ಮಾಡಿ ಜವಾಬ್ದಾರಿ ವಹಿಸಿದೆ. ಶೀಘ್ರದಲ್ಲೇ ವೀಕ್ಷಕರು ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಿ ಅಭಿಪ್ರಾಯ ಆಲಿಸುವರು. ಎರಡರಿಂದ ಮೂರು ಹೆಸರುಗಳನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಶಿಫಾರಸು ಮಾಡುವರು.

ಮೌನಕ್ಕೆ ಶರಣಾದ ಸಚಿವರು

ಬೀದರ್‌ ಜಿಲ್ಲೆಯ ಅಸಮಾಧಾನಿತ ಕಾಂಗ್ರೆಸ್‌ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರ ವಿರುದ್ಧ ಸಭೆ ನಡೆಸಿ ಪಕ್ಷದ ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ. ಮಾಧ್ಯಮಗಳ ಎದುರು ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಆದರೆ ಇದುವರೆಗೆ ಸಚಿವ ಖಂಡ್ರೆಯವರು ಅದಕ್ಕೆ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ. ಬದಲಾಗಿ ಮೌನಕ್ಕೆ ಶರಣಾಗಿದ್ದಾರೆ. ಸಚಿವ ಖಂಡ್ರೆಯವರು ಅವರ ಇಲಾಖೆಗೆ ಸಂಬಂಧಿಸಿದ ವಿಷಯ ಜಿಲ್ಲೆಯಲ್ಲಿ ಏನಾದರೂ ಬೆಳವಣಿಗೆಗಳು ನಡೆದರೆ ತಕ್ಷಣವೇ ಪ್ರತಿಕ್ರಿಯಿಸುತ್ತಾರೆ. ಆದರೆ ಕಳೆದೊಂದು ತಿಂಗಳಿಂದ ಅಸಮಾಧಾನಿತರು ಅವರ ಕಾರ್ಯವೈಖರಿಯನ್ನು ಟೀಕಿಸುತ್ತ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದರೂ ಪ್ರತಿಕ್ರಿಯಿಸಿಲ್ಲ. ಇತ್ತೀಚೆಗೆ ಜಿಲ್ಲೆಯ ಬಿಜೆಪಿ ಶಾಸಕರು ಕೂಡ ಪತ್ರಿಕಾಗೋಷ್ಠಿ ನಡೆಸಿ ‘ಕಾಂಗ್ರೆಸ್‌ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಬಿಟ್ಟು ಬಿಜೆಪಿ ಶಾಸಕರ ವಿರುದ್ಧ ವೃಥಾ ಆರೋಪ ಮಾಡಲಾಗುತ್ತಿದೆ. ಅದರ ಬಗ್ಗೆ ಸ್ವತಃ ಸಚಿವ ಈಶ್ವರ ಬಿ. ಖಂಡ್ರೆಯವರು ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಅದಕ್ಕೂ ಅವರು ಪ್ರತಿಕ್ರಿಯಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.