ಮೃತ ವ್ಯಕ್ತಿಯ ಕುಟುಂಬದವರಿಗೆ ಖಂಡ್ರೆ ಸಾಂತ್ವನ
ಬೀದರ್: ನಗರದ ಎಸ್‌ಬಿಐ ಕಚೇರಿ ಎದುರು ಗುರುವಾರ ದರೋಡೆಕೋರರ ಗುಂಡಿನ ದಾಳಿಯಲ್ಲಿ ಮೃತಪಟ್ಟ ಗಿರಿ ವೆಂಕಟೇಶ ಎಂಬುವರ ಕುಟುಂಬಕ್ಕೆ ₹18 ಲಕ್ಷ ಪರಿಹಾರ ಘೋಷಿಸಲಾಗಿದೆ.
ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡ ಗ್ರಾಮದ ಗಿರಿ ಅವರ ನಿವಾಸಕ್ಕೆ ಪರಿಸರ, ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆಯವರು ಶುಕ್ರವಾರ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
‘ಗಿರಿ ವೆಂಕಟೇಶ ಅವರ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ₹8 ಲಕ್ಷ ನೀಡಲಾಗುವುದು. ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ, ಹೆಚ್ಚುವರಿಯಾಗಿ ₹10 ಲಕ್ಷ ಕೊಡಲಾಗುವುದು. ಗಿರಿ ಅವರ ತಾಯಿಗೆ ₹5 ಸಾವಿರ ಮಾಸಾಶನ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೌಕರಿ ನೀಡುತ್ತೇವೆ. ಜಮೀನು ಕೂಡ ಕೊಡುತ್ತೇವೆ’ ಎಂದು ಘೋಷಿಸಿದರು.
ಇನ್ನು, ಗುಂಡೇಟು ತಗುಲಿ ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಗರದ ಲಾಡಗೇರಿ ನಿವಾಸಿ ಶಿವಕುಮಾರ ಅವರ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ದೊರಬೇಕಾದ ಪರಿಹಾರ ಕೂಡ ನೀಡಲಾಗುವುದು ಎಂದರು. ಇದಕ್ಕೂ ಮುನ್ನ ಅವರು ಗುಂಡಿನ ದಾಳಿ ನಡೆದ ಎಸ್‌ಬಿಐ ಕಚೇರಿ ಎದುರಿನ ಮುಖ್ಯರಸ್ತೆಗೆ ಭೇಟಿ ನೀಡಿದರು. ರಾಜ್ಯ ಅಪರಾಧ ವಿಭಾಗದ ಎಡಿಜಿಪಿ ಪಿ. ಹರಿಶೇಖರನ್ ಅವರಿಂದ ಮಾಹಿತಿ ಪಡೆದರು. ಸಚಿವ ರಹೀಂ ಖಾನ್, ಕಲಬುರಗಿ ವಲಯ ಡಿಐಜಿ ಅಜಯ್ ಹಿಲೋರಿ, ಎಸ್ಪಿ ಪ್ರದೀಪ್ ಗುಂಟಿ ಹಾಜರಿದ್ದರು.
ಎಡಿಜಿಪಿ ಪಿ. ಹರಿಶೇಖರನ್ ಅವರು ನಂತರ ಪತ್ರಿಕಾಗೋಷ್ಠಿ ನಡೆಸಿ, ಈಗಾಗಲೇ ದರೋಡೆಕೋರರನ್ನು ಗುರುತಿಸಲಾಗಿದೆ. ಅವರನ್ನು ಬಂಧಿಸಲು ಬೀದರ್ ಜಿಲ್ಲಾ ಪೊಲೀಸರನ್ನು ಹೈದರಾಬಾದ್‌ಗೆ ಕಳಿಸಲಾಗಿದೆ. ತೆಲಂಗಾಣ ಪೊಲೀಸರು ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಆರೋಪಿಗಳಿಬ್ಬರೂ ಹಲವು ದರೋಡೆ ಪ್ರಕರಣಗಳಲ್ಲಿ ಶಾಮಿಲಾಗಿದ್ದರೂ ಎಂಬ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.
ಗುರುವಾರ (ಜ.16) ಇಬ್ಬರು ಅಪರಿಚಿತರು ಬೈಕ್ ಮೇಲೆ ಬಂದು, ಎಟಿಎಂಗಳಿಗೆ ಜಮೆ ಮಾಡಲು ಹಣ ಕೊಂಡೊಯ್ಯುತ್ತಿದ್ದ ಗಿರಿ ವೆಂಕಟೇಶ ಹಾಗೂ ಶಿವಕುಮಾರ ಮೇಲೆ ಗುಂಡಿನ ದಾಳಿ ನಡೆಸಿ, ನೋಟಿನ ಕಂತೆಗಳಿರುವ ಟ್ರಂಕ್ ಕದ್ದೊಯ್ದಿದ್ದರು. ಗುಂಡೇಟಿನಿಂದ ಗಿರಿ ಸ್ಥಳದಲ್ಲೇ ಮೃತಪಟ್ಟಿದ್ದರು. ಶಿವಕುಮಾರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.