
ಬೀದರ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾನೂನುಬಾಹಿರ ಹಾಗೂ ದಲಿತ ವಿರೋಧಿ ನೀತಿಯನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ರ್‍ಯಾಲಿ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಬಾಬಾಸಾಹೇಬರ ಭಾವಚಿತ್ರ ಹಿಡಿದು, ಘೋಷಣೆಗಳನ್ನು ಹಾಕುತ್ತ ಹೆಜ್ಜೆ ಹಾಕಿದರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಕೇಂದ್ರದಲ್ಲಿ ಮನುವಾದಿ ಶಕ್ತಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಲಿತ ಸಮುದಾಯದ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದು ಅಪಮಾನ ಎಸಗಲಾಗಿದೆ. ಆರ್‌ಎಸ್‌ಎಸ್ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ. ಅದರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಮಾರುತಿ ಬೌದ್ಧೆ, ಪ್ರಮುಖರಾದ ರಾಜಕುಮಾರ ವಾಘಮಾರೆ, ಅರುಣ ಪಟೇಲ್, ರಮೇಶ ಉಮಾಪೂರೆ, ಅಶೋಕ ಗಾಯಕವಾಡ, ಶಿವರಾಜ ತಡಪಳ್ಳಿ, ಸತೀಶ ರತ್ನಾಕರ್, ಝರೆಪ್ಪಾ ವರ್ಮಾ, ವಾಮನರಾವ ಮೈಸಲಗೆ, ನರಸಿಂಗ ಮೇಟಿ, ರಾಹುಲ ಹಾಲಹಿಪ್ಪರಗಾ, ಶಿರೋಮಣಿ ಹಲಗೆ, ರಮೇಶ ಬೆಲ್ದಾಳ, ವಿಜಯಕುಮಾರ ಭಾವಿಕಟ್ಟಿ, ಬಸವರಾಜ ಭಾವಿದೊಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.