ADVERTISEMENT

ರಾಮ ಲಕ್ಷ್ಮಣರಂತಿರುವ ಸಿದ್ದರಾಮಯ್ಯ–ಶಿವಕುಮಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 8:32 IST
Last Updated 4 ಡಿಸೆಂಬರ್ 2025, 8:32 IST
<div class="paragraphs"><p>ಸಿದ್ದರಾಮಯ್ಯ– ಡಿ.ಕೆ. ಶಿವಕುಮಾರ್</p></div>

ಸಿದ್ದರಾಮಯ್ಯ– ಡಿ.ಕೆ. ಶಿವಕುಮಾರ್

   

ಬೀದರ್‌: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ರಾಮ–ಲಕ್ಷ್ಮಣನಂತಿದ್ದಾರೆ. ಅವರು ಬ್ರೇಕ್‌ ಫಾಸ್ಟ್‌, ಲಂಚ್‌, ಡಿನ್ನರ್‌ ಏನು ಬೇಕಾದರೂ ಮಾಡಲಿ. ಬಿಜೆಪಿಯವರಿಗೆ ಅವರ ಉಸಾಬರಿ ಏಕೆ. ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಅದನ್ನು ಸರಿ ಮಾಡಲು ಪಕ್ಷದ ಹೈಕಮಾಂಡ್‌ ಇದೆ. ಬಿಜೆಪಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು’ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸಿದ್ದು–ಡಿಕೆಶಿ ಬ್ರೇಕ್‌ಫಾಸ್ಟ್‌ ಮೀಟ್‌, ಜೆಡಿಎಸ್‌ ಹಾಗೂ ಬಿಜೆಪಿಗೆ ಕಪಾಳಮೋಕ್ಷವಾಗಿದೆ. ಪಕ್ಷ ಒಡೆದು ಹೋಗುತ್ತದೆ ಎಂದು ಸುದ್ದಿ ಹಬ್ಬಿಸಿದ್ದರು. ಈಗೇನಾಯಿತು? ನಮ್ಮ ಪಕ್ಷದಲ್ಲಿ ನರೇಂದ್ರ ಮೋದಿ ರೀತಿ ಒಬ್ಬರೇ ಹೇಳಿದಂತೆ ನಡೆಯುವುದಿಲ್ಲ. ಹೈಕಮಾಂಡ್‌ ಇದೆ. ಟಿಕೆಟ್‌, ಸಚಿವ ಸ್ಥಾನ ಸೇರಿದಂತೆ ಎಲ್ಲವೂ ಅದೇ ನಿರ್ಧರಿಸುತ್ತದೆ. ಎಲ್ಲಾ ವರ್ಗಗಳ ಹಿತ ಕಾಪಾಡುವುದು ಕಾಂಗ್ರೆಸ್‌ ಪಕ್ಷದ ಧ್ಯೇಯ. ಸಮಯ, ಸಂದರ್ಭ ನೋಡಿ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ಈಗ ನಮ್ಮ ಮುಂದಿರುವುದು ಬೆಳಗಾವಿ ವಿಧಾನ ಮಂಡಲದ ಅಧಿವೇಶನ. ಅಲ್ಲಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಲಾಗುವುದು ಎಂದರು.

ADVERTISEMENT

‘ಎಲೆಕ್ಷನ್‌ ಕಮಿಷನ್‌, ಬಿಜೆಪಿ ಕಮಿಷನ್‌’

‘ಎಲೆಕ್ಷನ್‌ ಕಮಿಷನ್‌ ಈಗ ಬಿಜೆಪಿ ಕಮಿಷನ್‌ ಆಗಿದೆ. ಐಟಿ, ಇಡಿ, ಸಿಬಿಐ ಸೇರಿದಂತೆ ಇತರೆ ಸಂಸ್ಥೆಗಳನ್ನು ಬಿಜೆಪಿ ಯಾವ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದೆಯೋ ಅದೇ ರೀತಿ ಎಲೆಕ್ಷನ್‌ ಕಮಿಷನ್‌ ಅನ್ನು ಬಳಸಿಕೊಳ್ಳುತ್ತಿದೆ. ಒಂದೇ ಬೂತ್‌ನಲ್ಲಿ ಒಬ್ಬ ವಿದೇಶಿ ಮಾಡೆಲ್‌ 22 ಸಲ ಮತ ಹಾಕಿದ್ದಾರೆ. 1 ಲಕ್ಷ ಮತ ಕಳ್ಳತನ ಹೇಗೆ ನಡೆದಿದೆ ಎಂಬುದನ್ನು ರಾಹುಲ್‌ ಗಾಂಧಿ ಅವರು ಸಾಕ್ಷ್ಯ ಸಮೇತ ತೋರಿಸಿದ್ದಾರೆ’ ಎಂದು ಸಲೀಂ ಅಹಮ್ಮದ್‌ ಹೇಳಿದರು.

ಬಿಹಾರದಲ್ಲಿ 60 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಚುನಾವಣೆಯಲ್ಲಿ ಬಿಜೆಪಿಯ ಸ್ಟ್ರೈಕ್‌ರೇಟ್‌ ಶೇ 95ರಷ್ಟಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಿತೀಶ್‌ ಕುಮಾರ್‌ ಕೂಡ ಅಷ್ಟೇ ಸಾಧನೆ ಮಾಡಿದ್ದಾರೆ. ಇದು ಓಟ್‌ ಚೋರಿಯಲ್ಲದೆ ಮತ್ತೇನೂ? ಎಲೆಕ್ಷನ್‌ ಕಮಿಷನ್‌ ದೇಶದಲ್ಲಿ ಜೀವಂತವಾಗಿದೆಯಾ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.