
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿದರು
ಬೀದರ್: ‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾದ1,86,426 ರೈತರ ಖಾತೆಗಳಿಗೆ 17 ಹಂತಗಳಲ್ಲಿ ಒಟ್ಟು ₹261.43 ಕೋಟಿ ಪರಿಹಾರ ಜಮೆ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರವಾಹದಿಂದ ಬೆಳೆ ಹಾನಿಯಾದ ರೈತರಿಗೆ ಎನ್‍ಡಿಆರ್‌ಎಫ್ ಹಾಗೂ ಎಸ್‍ಡಿಆರ್‌ಎಫ್‌ನಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪ್ರತಿ ಹೆಕ್ಟೇರ್‌ಗೆ ಮಳೆಯಾಶ್ರಿತ ₹8,500, ನೀರಾವರಿ ಬೆಳೆಗೆ ₹17,000 ಮತ್ತು ಬಹುವಾರ್ಷಿಕ ಬೆಳೆಗಳಿಗೆ ₹22,500 ಗಳಂತೆ ಬೆಳೆ ಹಾನಿಯಾದ ರೈತರಿಗೆ, 10 ಹಂತಗಳಲ್ಲಿ ಒಟ್ಟು 1,76,382 ರೈತರಿಗೆ ₹127.16 ಕೋಟಿ ಪರಿಹಾರವನ್ನು ನೇರವಾಗಿ ಅವರ ಬ್ಯಾಂಕ್ ಖಾತೆ ಜಮೆ ಮಾಡಲಾಗಿದೆ ಎಂದು ವಿವರಿಸಿದರು.
ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಘೋಷಿಸಲಾದ ಪರಿಹಾರ ಮೊತ್ತ ₹8,500 ಸಹ 7 ಹಂತಗಳಲ್ಲಿ ಒಟ್ಟು 1,86,426 ರೈತರಿಗೆ ₹134.27 ಕೋಟಿ ಪರಿಹಾರ ನೇರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಜಿಲ್ಲೆಯ ರೈತರಿಗೆ ಕೇಂದ್ರ ಸರ್ಕಾರದ ಎನ್‍ಡಿಆರ್‌ಎಫ್/ಎಸ್‍ಡಿಆರ್‌ಎಫ್ ಮಾರ್ಗಸೂಚಿ ಅಯನ್ವಯ ಹಾಗೂ ರಾಜ್ಯ ಸಕಾರದಿಂದ ಹೆಚ್ಚುವರಿಯಾಗಿ ಘೋಷಿಸಲಾದ ಪರಿಹಾರ ಮೊತ್ತ ಸೇರಿ 17 ಹಂತಗಳಲ್ಲಿ 1,86,426 ರೈತರಿಗೆ ₹261.43 ಕೋಟಿ ಪರಿಹಾರ ಜಮೆ ಮಾಡಲಾಗಿರುತ್ತದೆ. ಆಧಾರ್ ಸೀಡಿಂಗ್, ರೈತರು ಮೂಲಸ್ಥಳದಲ್ಲಿ ಇರದ ಕಾರಣ 8,615 ಜನರಿಗೆ ತಾಂತ್ರಿಕ ಕಾರಣದಿಂದ ಪರಿಹಾರ ಇನ್ನೂ ಬರಬೇಕಿದೆ. ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬೀದರ್ ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ಸೋಯಾಬೀನ್, ತೊಗರಿ, ಉದ್ದು, ಹೆಸರು ಮತ್ತು ಹತ್ತಿಯನ್ನು ಒಟ್ಟು 4,32,825 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಹೆಚ್ಚುವರಿ ಮಳೆಯಾಗಿ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಮಾಂಜ್ರಾ ನದಿಗೆ ಧನೆಗಾಂವ್ ಅಣೆಕಟ್ಟೆಯಿಂದ ನೀರು ಹರಿಸಿದ್ದರಿಂದ ಪ್ರವಾಹ ಉಂಟಾಗಿ ಜಿಲ್ಲೆಯಾದ್ಯಂತ 1,67,202.78 ಹೆಕ್ಟೇರ್ ಪ್ರದೇಶದಲ್ಲಿ ₹143.60 ಕೋಟಿ ಬೆಳೆ ಹಾನಿಯಾಗಿತ್ತು. ಬಳಿಕ ಸಮೀಕ್ಷೆ ನಡೆಸಿ, ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ರಾಜ್ಯ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ ₹8,500 ಹೆಚ್ಚುವರಿ ಪರಿಹಾರ ಘೋಷಿಸಲಾಗಿತ್ತು. ಅದರಂತೆ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಜರಿದ್ದರು.
‘ಮುಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ಹೆಸರು ನೋಂದಣಿ ಮಾಡಿಸಿದ 88,886 ರೈತರಿಗೆ ₹41.52 ಕೋಟಿ ವಿಮೆ ಪರಿಹಾರವನ್ನು ಜನವರಿ ತಿಂಗಳೊಳಗೆ ಪಾವತಿಸಲು ವಿಮಾ ಕಂಪನಿಗಳಿಗೆ ಸೂಚಿಸಲಾಗಿದೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 2,04,235 ಪ್ರಸ್ತಾವಗಳನ್ನು ವಿಮೆ ಅಡಿ ನೋಂದಾಯಿಸಲಾಗಿದೆ, 41,648 ಹೆಕ್ಟೇರ್ ತೊಗರಿ ಬೆಳೆ ವಿಮೆ ಮಾಡಿದ ರೈತರಿಗೆ ಅನುಕೂಲವಾಗುವಂತೆ ಬೆಳೆ ನಷ್ಟದ ಬಗ್ಗೆ ಮಧ್ಯ ಋತುವಿನ ಪ್ರತಿಕೂಲ ಪರಿಸ್ಥಿತಿಯಡಿ ₹36.74 ಕೋಟಿ ಪರಿಹಾರ ವರ್ಗಾಯಿಸಲಾಗಿದೆ. ಸ್ಥಳೀಯ ಪ್ರಕೃತಿ ವಿಕೋಪದಡಿ ಬೆಳೆ ನಷ್ಟದ ಕುರಿತು 88,886 ದೂರು ದಾಖಲಿಸಿದ ರೈತರಿಗೆ ₹41.52 ಕೋಟಿ ವಿಮಾ ಪರಿಹಾರ ಜನವರಿಯೊಳಗೆ ಪಾವತಿಸಲಾಗುವುದು ಎಂದರು.
ನನ್ನ ಸಲಹೆ ಮೇರೆಗೆ ಬೆಳೆ ವಿಮೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಹಿಂದೆ ಬೆಳೆ ವಿಮೆ ಕಂಪನಿಗಳಿಗೆ ಶೇ 100ರಷ್ಟು ಲಾಭಾಂಶ ಹೋಗುತ್ತಿತ್ತು. ಈ ಸಲ ಅದು ಶೇ 20ಕ್ಕೆ ತಗ್ಗಿದೆ. ಬೆಳೆ ವಿಮೆಯ ಕೆಲವು ನಿಯಮಗಳು ವಿಮೆ ಕಂಪನಿಗಳಿಗೆ ಅನುಕೂಲವಾಗುವ ರೀತಿಯಲ್ಲಿವೆ. ಅವುಗಳನ್ನು ಬದಲಿಸಬೇಕೆಂದು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಅಲ್ಲದೇ ಕಳೆದ ಒಂಬತ್ತು ವರ್ಷಗಳಲ್ಲಿ ವಿಮೆ ಕಂಪನಿಗಳಲ್ಲಿ ಎಷ್ಟು ಹಣ ಜಮೆ ಆಗಿದೆ ಎಂಬುದರ ಶ್ವೇತ ಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.
‘ಬೀದರ್‌ನ ಕೊಳಾರ ಸಮೀಪದ ರೇಷ್ಮೆ ಇಲಾಖೆಗೆ ಸೇರಿದ 25 ಎಕರೆ ಜಮೀನಿನಲ್ಲಿ ಸುಮಾರು 20 ಸಾವಿರ ಜನ ಪ್ರೇಕ್ಷಕರು ಕೂರುವ ಸಾಮರ್ಥ್ಯದ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವ ವಾರದೊಳಗೆ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಬಳಿಕ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು, ಕೆಕೆಆರ್‌ಡಿಬಿಯಿಂದ ₹25 ಕೋಟಿ ಅನುದಾನ ಪಡೆಯಲಾಗುವುದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ನೆಹರೂ ಕ್ರೀಡಾಂಗಣವನ್ನು ಯಥಾರೀತಿ ಉಳಿಸಿಕೊಳ್ಳಲಾಗುವುದು. ಹೊಸ ಕ್ರೀಡಾಂಗಣವನ್ನು ರಾಷ್ಟ್ರ, ಅಂತರರಾಷ್ಟ್ರೀಯ ದರ್ಜೆಯಲ್ಲಿ ನಿರ್ಮಿಸಲಾಗುವುದು ಎಂದರು.
‘ಬ್ರಿಮ್ಸ್‌ನಲ್ಲಿ ಅವ್ಯವಸ್ಥೆ ಸರಿಪಡಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ಹೆಚ್ಚುವರಿ ಜಿಲ್ಲಾಧಿಕಾರಿ ಅವರನ್ನು ಬ್ರಿಮ್ಸ್ ಆಡಳಿತಾಧಿಕಾರಿಯಾಗಿ ನೇಮಕ ಮಾಡಿ ಸಂಪೂರ್ಣ ಅಧಿಕಾರ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಬ್ರಿಮ್ಸ್ ಅಕ್ರಮಕ್ಕೆ ಸಂಬಂಧಿಸಿದ ತನಿಖಾ ವರದಿ ಸಲ್ಲಿಕೆಯಾಗಿದೆ. ನಿರ್ದೇಶಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಅದನ್ನು ತೆರವುಗೊಳಿಸುವ ಕೆಲಸ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
‘ಬೀದರ್ ತಾಲ್ಲೂಕಿನ ಅತಿವಾಳ ಸಮೀಪದ 9 ಎಕರೆ ಜಮೀನಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಮಗ್ರ ಅಧ್ಯಯನ ಕೇಂದ್ರ ನಿರ್ಮಿಸಲು ನಿರ್ಧರಿಸಲಾಗಿದೆ. ಈಗಾಗಲೇ ವಿನ್ಯಾಸಕ್ಕೆ ಪರಿಣತರಿಗೆ ಸೂಚಿಸಲಾಗಿದೆ. ಕೆಕೆಆರ್‌ಡಿಬಿ ಮ್ಯಾಕ್ರೋ ಅನುದಾನ ಬಳಸಿಕೊಳ್ಳಲಾಗುವುದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ಬೀದರ್ ವಿಶ್ವವಿದ್ಯಾಲಯದಲ್ಲಿ ಮೂಲಸೌಕರ್ಯ, ಜಿಟಿಟಿಸಿ ತರಬೇತಿ ಕೇಂದ್ರಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ. ಬೀದರ್ ವಿವಿಗೆ ಸೇರಿದ ಜಾಗದಲ್ಲಿ ಸುತ್ತಲಿನ ಗ್ರಾಮಸ್ಥರು ಅವರಿಗೆ ಗೊತ್ತಿಲ್ಲದೇ ದೇವಸ್ಥಾನ, ಶವಸಂಸ್ಕಾರ ಮಾಡುತ್ತ ಬಂದಿದ್ದಾರೆ ಹೊರತು ಯಾರು ಕೂಡ ಅದರ ಜಾಗ ಅತಿಕ್ರಮಿಸಿಲ್ಲ. ಒಂದುವೇಳೆ ಯಾರಾದರೂ ಅತಿಕ್ರಮಿಸಿದರೆ ತೆರವುಗೊಳಿಸಲಾಗುವುದು ಎಂದು ಹೇಳಿದರು.
‘ಬೀದರ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಾ. ಬಾಬು ಜಗಜೀವನರಾಮ್ ಭವನದ ನಿರ್ಮಾಣಕ್ಕೆ ಮಂಜೂರಾಗಿದ್ದ ₹1 ಕೋಟಿ ಬಿಜೆಪಿಯವರೇ ವಿತ್‌ಡ್ರಾ ಮಾಡಿದ್ದಾರೆ. ₹50 ಲಕ್ಷ ನಿರ್ಮಿತಿ ಕೇಂದ್ರದಲ್ಲಿದೆ. ಮುಂದಿನ ವರ್ಷ ಭವನ ನಿರ್ಮಾಣವಾಗಲಿದೆ. ಆದರೆ, ಬಿಜೆಪಿ ಕಾಲದ ಅಕ್ರಮ, ಪಾಪದ ಕೆಲಸ ನಮ್ಮ ಮೇಲೆ ಹಾಕಬಾರದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಅವರು ಬಿಜೆಪಿಗರ ಆರೋಪದ ಕುರಿತು ಖಾರವಾಗಿ ಪ್ರತಿಕ್ರಿಯಿಸಿದರು.
ರಿಂಗ್‌ರೋಡ್ ಪೂರ್ಣಗೊಳಿಸಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಶೀಘ್ರವೇ ಕೆಲಸ ಆರಂಭವಾಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.