ADVERTISEMENT

ಬೀದರ್ | 6 ತಿಂಗಳಲ್ಲಿ ₹16 ಕೋಟಿ ಮೌಲ್ಯದ ಗಾಂಜಾ, ₹7 ಕೋಟಿ ಮೊತ್ತದ ತಂಬಾಕು ಜಪ್ತಿ

ಗಾಂಜಾ ಸಂಪೂರ್ಣ ಕಡಿವಾಣಕ್ಕೆ ಪೊಲೀಸರ ಪಣ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 18 ಡಿಸೆಂಬರ್ 2025, 4:13 IST
Last Updated 18 ಡಿಸೆಂಬರ್ 2025, 4:13 IST
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ನೇತೃತ್ವದಲ್ಲಿ ಜಿಲ್ಲೆಯ ಔರಾದ್‌ ತಾಲ್ಲೂಕಿನ ಕರಂಜಿ (ಬಿ) ಗ್ರಾಮದಲ್ಲಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕಾರ್ಯಾಚರಣೆ ನಡೆಸಿ, ಡ್ರೋನ್‌ ಸಹಾಯದಿಂದ ಹತ್ತಿ ಬೆಳೆಯ ನಡುವೆ ಬೆಳೆಸಿದ್ದ ಗಾಂಜಾ ಪತ್ತೆ ಹಚ್ಚಿ ಜಪ್ತಿ ಮಾಡಿರುವುದು
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ನೇತೃತ್ವದಲ್ಲಿ ಜಿಲ್ಲೆಯ ಔರಾದ್‌ ತಾಲ್ಲೂಕಿನ ಕರಂಜಿ (ಬಿ) ಗ್ರಾಮದಲ್ಲಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕಾರ್ಯಾಚರಣೆ ನಡೆಸಿ, ಡ್ರೋನ್‌ ಸಹಾಯದಿಂದ ಹತ್ತಿ ಬೆಳೆಯ ನಡುವೆ ಬೆಳೆಸಿದ್ದ ಗಾಂಜಾ ಪತ್ತೆ ಹಚ್ಚಿ ಜಪ್ತಿ ಮಾಡಿರುವುದು   

ಬೀದರ್‌: ಗಾಂಜಾ ಮಾರಾಟಗಾರರು ಹಾಗೂ ಬೆಳೆಗಾರರ ವಿರುದ್ಧ ಸಮರ ಸಾರಿರುವ ಬೀದರ್‌ ಜಿಲ್ಲಾ ಪೊಲೀಸರು, ಈ ಜಾಲವನ್ನು ಬುಡಸಮೇತ ಮೂಲೋತ್ಪಾಟನೆ ಮಾಡಲು ಪಣ ತೊಟ್ಟಂತಿದೆ.

ಕಳೆದ ಆರು ತಿಂಗಳ ಅಂಕಿ–ಅಂಶಗಳ ಮೇಲೆ ಕಣ್ಣಾಡಿಸಿದರೆ ಈ ವಿಷಯ ಗೊತ್ತಾಗುತ್ತದೆ. ಈ ವರ್ಷದ ಜುಲೈನಿಂದ ಡಿಸೆಂಬರ್‌ ಮಧ್ಯದವರೆಗೆ ₹16.50 ಕೋಟಿ ಮೌಲ್ಯದ ಗಾಂಜಾ, ₹7.50 ಕೋಟಿ ಬೆಲೆ ಬಾಳುವ ತಂಬಾಕು ಪದಾರ್ಥಗಳನ್ನು ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಟ್ಟು 62 ಪ್ರಕರಣಗಳು ದಾಖಲಾಗಿದ್ದು, 120 ಆರೋಪಿಗಳನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ.

ನವೆಂಬರ್‌ 29ರಂದು ಬಸವಕಲ್ಯಾಣ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಜೇಶ್ವರ ಸಮೀಪ ನಡೆದ ಕಾರ್ಯಾಚರಣೆ ಅತಿ ದೊಡ್ಡದು. ಹೈದರಾಬಾದ್‌ನಿಂದ ವಾಯಾ ಬಸವಕಲ್ಯಾಣ ಮೂಲಕ ಮಹಾರಾಷ್ಟ್ರದ ಸೋಲಾಪೂರಕ್ಕೆ ಟಾಟಾ ಗೂಡ್ಸ್‌ ವಾಹನದಲ್ಲಿ ಸಾಗಿಸುತ್ತಿದ್ದ ₹6.50 ಕೋಟಿ ಮೌಲ್ಯದ ಗಾಂಜಾ ಜಪ್ತಿ ಮಾಡಿ, ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು.

ADVERTISEMENT

ಇನ್ನೊಂದು ಪ್ರಮುಖ ಘಟನೆಯೆಂದರೆ ಈ ಸಾಲಿನ ಫೆಬ್ರುವರಿ 3ರಂದು ಹುಮನಾಬಾದ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ನಡೆಸಿದ ರಹಸ್ಯ ಕಾರ್ಯಾಚರಣೆ. ತೆಲಂಗಾಣದ ರಾಜಧಾನಿ ಹೈದರಾಬಾದ್‌ನಿಂದ ಮಹಾರಾಷ್ಟ್ರಕ್ಕೆ ಸ್ವಿಫ್ಟ್‌ ಕಾರಿನಲ್ಲಿ ಸಾಗಿಸುತ್ತಿದ್ದ ₹1.23 ಕೋಟಿ ಮೌಲ್ಯದ 123 ಕೆಜಿ ಗಾಂಜಾ ಜಪ್ತಿ ಮಾಡಿರುವುದು.

ನಶೆ ಗುಳಿಗೆ, ಸಿರಪ್‌ ಮಾರಾಟದ ದೊಡ್ಡ ಜಾಲವೂ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು, ಅದರ ಬೇರು ಕತ್ತರಿಸುವ ನಿಟ್ಟಿನಲ್ಲೂ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ₹7.50 ಕೋಟಿ ಮೌಲ್ಯದ ನಶೆ ವಸ್ತು, ತಂಬಾಕು ಪದಾರ್ಥಗಳನ್ನು ಜಪ್ತಿ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ಜಾಲದ 30 ಮಂದಿಯನ್ನು ಬಂಧಿಸಿ, ಅದರ ಜಾಲ ಭೇದಿಸುವಲ್ಲಿ ಬಹುತೇಕ ಯಶಸ್ಸು ಕಂಡಿದ್ದಾರೆ.

ಗಾಂಜಾ ಮಾರಾಟ ಸಾಗಾಟದ ರಹದಾರಿ

ಬೀದರ್‌ ಜಿಲ್ಲೆ ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದೊಂದಿಗೆ ಗಡಿ ಹಂಚಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿಗಳ ಜೊತೆಗೆ ಅನೇಕ ಗ್ರಾಮಗಳ ರಸ್ತೆಗಳ ಮೂಲಕವೂ ಈ ರಾಜ್ಯಗಳೊಂದಿಗೆ ಸಂಪರ್ಕ ರಸ್ತೆಗಳಿವೆ. ತೆಲಂಗಾಣದ ಹೈದರಾಬಾದ್‌ ಮಹಾರಾಷ್ಟ್ರದ ಮುಂಬೈ ಪುಣೆ ಸೋಲಾಪೂರ ಔರಂಗಾಬಾದ್‌ ಸೇರಿದಂತೆ ಹಲವು ನಗರಗಳಲ್ಲಿ ಗಾಂಜಾ ಡ್ರಗ್ಸ್‌ ದಂಧೆಯ ದೊಡ್ಡ ಮಾಫಿಯಾ ಇದೆ. ಇದೆಲ್ಲ ಬೀದರ್‌ ಜಿಲ್ಲೆಯ ಮೂಲಕ ಕೆಲಸ ನಿರ್ವಹಿಸುತ್ತದೆ. ಇದಕ್ಕೆ ರೈಲು ರಸ್ತೆ ಮಾರ್ಗ ಬಳಸಲಾಗುತ್ತದೆ. ಗಾಂಜಾ ಸಾಗಾಟ ಹಾಗೂ ಮಾರಾಟದ ರಹದಾರಿ ಇದೇ ಆಗಿದೆ. ವಿವಿಧ ತಂತ್ರಗಳನ್ನು ಬಳಸಿ ಗಾಂಜಾ ನಿರಂತರವಾಗಿ ಸಾಗಿಸಲಾಗುತ್ತದೆ. ಜೊತೆಗೆ ಬೀದರ್‌ ಜಿಲ್ಲೆಯಲ್ಲೂ ಗಾಂಜಾ ಬಳಕೆ ಹೆಚ್ಚಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಬೀದರ್‌ ಜಿಲ್ಲಾ ಪೊಲೀಸರು ಇದರ ಕಡೆಗೆ ಹೆಚ್ಚಿನ ಗಮನ ಹರಿಸಿ ವಿಶೇಷ ಕ್ರಮ ಕೈಗೊಂಡಿದ್ದಾರೆ. ನೆರೆಯ ರಾಜ್ಯಗಳೊಂದಿಗೆ ಮಾಹಿತಿ ವಿನಿಮಯ ಬೇಹುಗಾರಿಕೆ ಬಲಪಡಿಸಿದೆ. ಗಡಿ ಮೂಲಕ ಸಂಚರಿಸುವ ವಾಹನಗಳ ಮೇಲೆ ವಿಶೇಷ ನಿಗಾ ಇರಿಸಿದೆ. ಇದರ ಪರಿಣಾಮ ದೊಡ್ಡ ಮಟ್ಟದ ಗಾಂಜಾ ಜಪ್ತಿ ಆಗುತ್ತಿರುವುದೇ ಸಾಕ್ಷಿ. ಇದು ಡ್ರಗ್ಸ್‌ ದಂಧೆಕೋರರ ನಿದ್ದೆಗೆಡಿಸಿದೆ.

ಗಾಂಜಾ ಪತ್ತೆಗೆ ಡ್ರೋನ್‌ ಬಳಕೆ

ಪ್ರಕರಣವೊಂದರಲ್ಲಿ ಬೀದರ್‌ ಜಿಲ್ಲಾ ಪೊಲೀಸರು ಡ್ರೋನ್‌ ಸಹಾಯದಿಂದ ಅಕ್ರಮವಾಗಿ ಗಾಂಜಾ ಬೆಳೆದಿರುವುದನ್ನು ಪತ್ತೆ ಹೆಚ್ಚಿ ವಿನೂತನ ಕಾರ್ಯಾಚರಣೆ ನಡೆಸಿದ್ದು ಮೆಚ್ಚುಗೆ ಗಳಿಸಿತ್ತು. ಈ ಸಾಲಿನ ಸೆಪ್ಟೆಂಬರ್‌ 16ರಂದು ಔರಾದ್‌ ತಾಲ್ಲೂಕಿನ ಕರಂಜಿ (ಬಿ) ಗ್ರಾಮದ ಹೊಲವೊಂದರಲ್ಲಿ ಹತ್ತಿ ಬೆಳೆಯ ನಡುವೆ ಗಾಂಜಾ ಬೆಳೆಸಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಡ್ರೋನ್‌ ಹಾರಿಸಿ ಅದರಿಂದ ಗಾಂಜಾ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಕಾರ್ಯಾಚರಣೆ ನಡೆಸಿದ್ದರು. ₹8.12 ಲಕ್ಷದ ಗಾಂಜಾ ಜಪ್ತಿ ಮಾಡಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು.

ಬೀದರ್‌ ಜಿಲ್ಲೆಯನ್ನು ಸಂಪೂರ್ಣ ಗಾಂಜಾ ಡ್ರಗ್ಸ್‌ ಮುಕ್ತ ಮಾಡುವುದು ನಮ್ಮ ಮುಖ್ಯ ಗುರಿ. ಪೊಲೀಸರು ಯೋಜನಾಬದ್ಧವಾಗಿ ಕೆಲಸ ಮಾಡುತ್ತಿರುವ ಕಾರಣ ಇದರ ಜಾಲ ಭೇದಿಸಲು ಸಹಾಯವಾಗಿದೆ.
–ಪ್ರದೀಪ್‌ ಗುಂಟಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬೀದರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.