
ಹುಮನಾಬಾದ್: ತಾಲ್ಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಹೊರವಲಯದಲ್ಲಿ ಐತಿಹಾಸಿಕ ಸೀಮಿನಾಗನಾಥೇಶ್ವರ ರಥೋತ್ಸವವು ಭಾನುವಾರ ಬೆಳಗಿನ ಜಾವ ವೈಭವದಿಂದ ನಡೆಯಿತು.
ಜಾತ್ರಾ ಮಹೋತ್ಸವ ಪ್ರಯುಕ್ತ ಅಭಿಷೇಕ್, ಬಿಲ್ವಾರ್ಚನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಾನುವಾರ ಬೆಳಿಗ್ಗೆ ಹಳ್ಳಿಖೇಡ (ಬಿ) ಪಟ್ಟಣದ ಚಿಕ್ಕಮಠ ಸಂಸ್ಥಾನದ ಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ಸಹಸ್ರಾರು ಸದ್ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.
ಮೈಕೋರೆಯುವ ಛಳಿ ಲೆಕ್ಕಿಸದೆ ಹಾಜರಿದ್ದ ಸಾವಿರಾರು ಭಕ್ತರು ದೇವರಿಗೆ ಕಾಯಿ ಕರ್ಪೂರ ಅರ್ಪಿಸಿ ದರ್ಶನ ಪಡೆದು ಪುನೀತರಾದರು.
ಸಂಭ್ರದ ಪಲ್ಲಕ್ಕಿ ಉತ್ಸವ: ಶನಿವಾರ ರಾತ್ರಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮಾರಾವ್ ಪಾಟೀಲ ಅವರು ಸೀಮಿನಾಗನಾಥೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಹೆಗಲು ನೀಡಿ ಚಾಲನೆ ನೀಡಿದರು.
ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಗಳ ನಡುವೆ ದೇವಸ್ಥಾನದ ಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯಿತು.
ದೇವಸ್ಥಾನದಲ್ಲಿ ಶನಿವಾರ ತಡರಾತ್ರಿಯಿಂದ ಭಾನುವಾರ ಬೆಳಿಗಿನ ಜಾವದವರೆಗೆ ಭಕ್ತಸಾಗರ ಹರಿದು ಬಂದಿದೆ. ಬೀದರ್, ಕಲಬುರಗಿ ಮಾತ್ರ ಅಲ್ಲದೇ ಪಕ್ಕದ ತೆಲಂಗಾಣದ ಜಹಿರಾಬಾದ್, ಹೈದರಾಬಾದ್, ಮಹಾರಾಷ್ಟ್ರ ಸೋಲಾಪುರ, ಪುಣೆ, ಲಾತೂರ್ ಮೊದಲಾದ ಕಡೆಗಳಿಂದ ಅಪಾರ ಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ, ಸಂತೋಷ್ ಪಾಟೀಲ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗೇಶ್ ಪ್ರಭಾ, ಸಿಪಿಐ ಗುರು ಪಾಟೀಲ, ಪಿಎಸ್ಐ ವಿಜಯಕುಮಾರ್, ಸೇರಿ ಪಟ್ಟಣದ ಪ್ರಮುಖರು ಸೇರಿ ವಿವಿಧ ಗಣ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.