
ಪತ್ರಿಕಾಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು.
ಬೀದರ್: ‘ಒಳಮೀಸಲಾತಿಯನ್ನು ಮನಸ್ಸಿಗೆ ತೋಚಿದಂತೆ ಹಂಚಲು ಅದು ಅಪ್ಪನ ಆಸ್ತಿಯಲ್ಲ. ಸಂವಿಧಾನದ ಪರಿಚ್ಛೇದ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಮಾಡಬೇಕು. ಆದರೆ, ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯಿಲ್ಲ. ಬೆಳಗಾವಿ ಅಧಿವೇಶನದ ಕೊನೆಯ ದಿನ ಹೊಸ ಮಸೂದೆ ಮಂಡಿಸಿ ಒಳಮೀಸಲಾತಿಗೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿಸಿದೆ’ ಎಂದು ಸಂಸದ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದರು.
ಒಳಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ನಿಜವಾಗಲೂ ಇಚ್ಛಾಶಕ್ತಿ, ಬದ್ಧತೆ ಇದ್ದಿದ್ದರೆ ಅದನ್ನು ಮಂಡಿಸಿ, ಚರ್ಚೆಗೆ ಒಳಪಡಿಸುತ್ತಿತ್ತು. ಆದರೆ, ಅಧಿವೇಶನದ ಕೊನೆಯ ದಿನ ಮಂಡಿಸಿ, ಚರ್ಚೆಯಿಲ್ಲದೆ ಪಾಸ್ ಮಾಡಿದೆ. ಇದು ಕಣ್ಣೊರೆಸುವ ತಂತ್ರ. ಸರ್ಕಾರದ ಈ ನಿಲುವು ಖಂಡನಾರ್ಹ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಿದ್ದಾಗ ಮಾಧುಸ್ವಾಮಿ ಅವರ ವರದಿ ಅನ್ವಯ ಒಳಮೀಸಲಾತಿ ಜಾರಿಗೆ ತರಲಾಗಿತ್ತು. ಆದರೆ, ವ್ಯವಸ್ಥಿತವಾದ ಅಪಪ್ರಚಾರದಿಂದ 2023ರ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಯಿತು. ಆದರೆ, ಈ ಸರ್ಕಾರ ಸುಪ್ರೀಂಕೋರ್ಟ್ ನಿರ್ದೇಶನವಿದ್ದರೂ ಸಕಾಲಕ್ಕೆ ಒಳಮೀಸಲಾತಿ ಜಾರಿಗೆ ತರಲಿಲ್ಲ. ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಆಯೋಗ ರಚಿಸಿತು. ಆ ಆಯೋಗದ ಶಿಫಾರಸು ಪ್ರಕಾರ ಜಾರಿಗೆ ಮಾಡಿತು. ಅಲೆಮಾರಿಗಳ ವಿರೋಧದ ನಂತರ ಈಗ ಪುನಃ ತನ್ನ ನಿಲುವು ಬದಲಿಸಿ ಹೊಸದಾಗಿ ಮಸೂದೆ ಮಂಡಿಸಿದೆ. ಸರ್ಕಾರದ ಈ ನಡೆ ನೋಡಿದರೆ ದುರುದ್ದೇಶದಿಂದ ಕೂಡಿದೆ ಎಂಬ ಅನುಮಾನ ಬರುತ್ತದೆ ಎಂದು ಹೇಳಿದರು.
ನೇಮಕಾತಿ ಹಾಗೂ ಮುಂಬಡ್ತಿ ಎರಡರಲ್ಲೂ ಮೀಸಲಾತಿ ಕಲ್ಪಿಸಬೇಕೆಂದು ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ರಾಜ್ಯ ಸರ್ಕಾರವು ನೇಮಕಾತಿಗಷ್ಟೇ ಒಳಮೀಸಲಾತಿ ಜಾರಿಗೆ ತರಲು ಹೊರಟಿದೆ. ಸರ್ಕಾರ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಪರಿಶಿಷ್ಟರ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಫರ್ನಾಂಡಿಸ್ ಹಿಪ್ಪಳಗಾಂವ್, ಕಮಲಾಕರ ಹೆಗಡೆ, ವಿಜಯಕುಮಾರ, ಶಿವಣ್ಣ, ದೇವಪ್ಪ, ಹರೀಶ್ ಇದ್ದರು.
‘ರಾಜ್ಯ ಸರ್ಕಾರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿತು. ವಾಲ್ಮೀಕಿ, ಭೋವಿ ನಿಗಮದ ಹಣ ದುರ್ಬಳಕೆ ಆಯಿತು. ಇದರ ಬಗ್ಗೆ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಆಗಲಿ, ಪ್ರಿಯಾಂಕ್ ಖರ್ಗೆ ಆಗಲಿ ಮಾತನಾಡಿಲ್ಲ. ಮಹದೇವಪ್ಪನವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಒಂದು ಬೋರ್‌ವೆಲ್ ಕೊಡಲು ಆಗಿಲ್ಲ. ಪ್ರಿಯಾಂಕ್ ಖರ್ಗೆ ಅವರು ದಲಿತರಿಗೆ ಒಂದು ನಿವೇಶನ, ಮನೆ ಕಟ್ಟಿಸಿಕೊಟ್ಟಿಲ್ಲ. ಇವರಿಗೆ ದಲಿತರ ಕಾಳಜಿ ಎಲ್ಲಿದೆ’ ಎಂದು ಮಾಜಿಸಂಸದ ಎ. ನಾರಾಯಣಸ್ವಾಮಿ ಟೀಕಿಸಿದರು.
‘ನೇಮಕಾತಿ, ಮುಂಬಡ್ತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಒಳಮೀಸಲಾತಿ ಜಾರಿಗೆ ತರಬೇಕು. ಆದರೆ, ಹೊಸ ಮಸೂದೆ ಇದಕ್ಕೆ ವಿರುದ್ಧವಾಗಿದೆ. ಕೂಡಲೇ ಸರ್ಕಾರ ಇದನ್ನು ಪರಿಷ್ಕರಿಸಬೇಕು. ಇದಕ್ಕಾಗಿ ಒಂದು ತಿಂಗಳ ಗಡುವು ನೀಡಲಾಗುವುದು. ಇಲ್ಲವಾದರೆ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ನಡೆಸಲಾಗುವುದು. ಈ ಬಗ್ಗೆ ಕಾಂಗ್ರೆಸ್‌ನಲ್ಲಿರುವ ಮಾದಿಗ ಸಮಾಜದ ಶಾಸಕರು, ಸಚಿವರು ಧ್ವನಿ ಎತ್ತಬೇಕು’ ಎಂದು ಆಗ್ರಹಿಸಿದರು.
‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಹಣವಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸದೇ ಬೀದರ್‌ನಲ್ಲಿ ಬಾಬು ಜಗಜೀವನರಾಮ್ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ’ ಎಂದು ಮಾಜಿಸಂಸದ ಎ. ನಾರಾಯಣಸ್ವಾಮಿ ಟೀಕಿಸಿದರು.
ಬಾಬು ಜಗಜೀವನರಾಮ್ ಭವನ ನಿರ್ಮಾಣಕ್ಕೆ ₹6.25 ಕೋಟಿ ಅನುದಾನ ಹಾಗೂ ಒಂದು ಎಕರೆ ಜಮೀನು ಮಂಜೂರಾಗಿತ್ತು. ಆದರೆ, ಆ ಹಣವನ್ನು ಡೈವರ್ಟ್ ಮಾಡಲಾಗಿದೆ. ಇದು ಸಮಾಜಕ್ಕೆ ಅಪಮಾನ ಮಾಡಿದಂತೆ. ಜವಾಬ್ದಾರಿ ವಹಿಸಿಕೊಂಡವರು ಅದರ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾರದ್ದೋ ಪ್ರಭಾವಕ್ಕೆ ಒಳಗಾಗಿ ಒಳಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿದ್ದಾರೆ. ಈಗ ವಿಳಂಬ ಮಾಡದೇ ಎಚ್.ಎನ್. ನಾಗಮೋಹನ್‌ದಾಸ್ ಅಥವಾ ಮಾಧುಸ್ವಾಮಿ ಮಾಡಿರುವ ಶಿಫಾರಸು ಆಧರಿಸಿ ಜಾರಿಗೆ ತರಬೇಕು.–ಗೋವಿಂದ ಎಂ. ಕಾರಜೋಳ, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.