
ಬಿವಿಎಸ್‍ಸಿ ಆ್ಯಂಡ್ ಎಎಚ್ ಪದವಿಯಲ್ಲಿ 16 ಚಿನ್ನದ ಪದಕಗಳ ಸಾಧನೆಗೈದ ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ 2023-24ನೇ ಬ್ಯಾಚ್‍ನ ವಿದ್ಯಾರ್ಥಿನಿ, ಉಡುಪಿಯ ಮಂದಾರ್ತಿಯ ಖುಷಿ
ನಂದಿನಗರ (ಬೀದರ್): ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವವು ಶುಕ್ರವಾರ ಸಂಭ್ರಮ ಹಾಗೂ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿನ್ನದ ಪದಕಗಳಿಗೆ ವಿದ್ಯಾರ್ಥಿಗಳ ಹೆಸರು ಘೋಷಿಸುತ್ತಿದ್ದಂತೆ ಕರತಾಡನ ಜೋರಾಯಿತು. ಉತ್ಸಾಹದೊಂದಿಗೆ ವೇದಿಕೆಯ ಮೇಲೇರಿ ರಾಜ್ಯಪಾಲರಿಂದ ಪದಕ ಹಾಗೂ ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದ ವಿದ್ಯಾರ್ಥಿಗಳಲ್ಲಿ ಸಾಧನೆಯ ಸಾರ್ಥಕ ಭಾವ ಇಣುಕುತ್ತಿತ್ತು. ಅವರ ಸಂಭ್ರಮ ಇಮ್ಮಡಿಯಾಗಿತ್ತು. ಇನ್ನೊಂದೆಡೆ ತಾವು ಕಷ್ಟಪಟ್ಟು ಓದಿಸಿದ ಮಕ್ಕಳು, ನಿರೀಕ್ಷೆಯಂತೆ ಓದಿ, ಅತ್ಯುತ್ತಮ ಸಾಧನೆ ಮಾಡಿದನ್ನು ಕಣ್ಣಾರೆ ಕಂಡ ಅವರ ಪೋಷಕರ ಕಣ್ಣಾಲಿಗಳಲ್ಲಿ ತುಂಬಿ ಬಂದವು. ಜನರೊಂದಿಗೆ ತಾವು ಕೂಡ ಚಪ್ಪಾಳೆ ಹೊಡೆದು ಆ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದರು.
ಪದಕ ಸ್ವೀಕರಿಸಿ ವೇದಿಕೆಯಿಂದ ಕೆಳಗಿಳಿದ ಬಂದ ಮಕ್ಕಳಿಗೆ ಪೋಷಕರು ತಬ್ಬಿಕೊಂಡು ತಲೆಯ ಮೇಲೆ ಕೈಯಾಡಿಸಿ, ಹಣೆಯ ಮೇಲೆ ಮುತ್ತಿಟ್ಟು ತಮ್ಮ ಪ್ರೀತಿ, ಅಭಿಮಾನ ತೋರಿದರು. ಬಳಿಕ ಪೋಷಕರು, ಬಂಧು ಬಾಂಧವರು, ವಿದ್ಯೆ ಕಲಿಸಿದ ಗುರು, ಸಹಪಾಠಿಗಳೊಂದಿಗೆ ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡರು.
ಘಟಿಕೋತ್ಸವದಲ್ಲಿ ಒಟ್ಟು 576 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ 455 ಸ್ನಾತಕ ಪದವೀಧರರು, 107 ಸ್ನಾತಕೋತ್ತರ ಹಾಗೂ 14 ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. 34 ಪ್ರತಿಭಾನ್ವಿತ ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವೀಧರರಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ 21 ವಿಶ್ವವಿದ್ಯಾಲಯದ ಪದಕಗಳು, 60 ಪ್ರಾಯೋಜಿತ ಚಿನ್ನದ ಪದಕಗಳು ಸೇರಿವೆ.
ಕಾರ್ಯಕ್ರಮಕ್ಕೂ ಮುನ್ನ ರಾಜ್ಯಪಾಲರನ್ನು ವಿವಿ ಆಡಳಿತ ಕಚೇರಿಯಿಂದ ಸಭಾಂಗಣದ ವರೆಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ವಂದೇ ಮಾತರಂ, ರಾಷ್ಟ್ರಗೀತೆ ನಂತರ ವಿವಿ ಕುಲಪತಿ ಪ್ರೊ. ಕೆ.ಸಿ. ವೀರಣ್ಣ ಅವರು ಸ್ವಾಗತ ಕೋರಿ, ವಿವಿ ಬೆಳೆದು ಬಂದ ಹಾದಿ, ಅದರ ಗುರಿ, ಸಂಶೋಧನೆಗಳ ಮಾಹಿತಿ ಹಂಚಿಕೊಂಡರು. ಕುಲಸಚಿವ ಪಿ.ಟಿ.ರಮೇಶ್ ಹಾಗೂ ವಿವಿ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.
‘ಯುವಕ/ಯುವತಿಯರು ಉದ್ಯೋಗಕ್ಕಾಗಿ ಅಲೆದಾಡಬೇಕಿಲ್ಲ. ಸ್ವತಃ ಸ್ವಾವಲಂಬಿಗಳಾಗಿ ಉದ್ಯೋಗದಾತರಾಗಬೇಕು’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪದವಿ ಪ್ರಮಾಣ ಪತ್ರಗಳನ್ನು ವಿತರಿಸಿದ ನಂತರ ಮಾತನಾಡಿದ ಅವರು, ನಿಮ್ಮ ಜ್ಞಾನ, ಸಂಶೋಧನೆ ಗ್ರಾಮೀಣರ ಅಭಿವೃದ್ಧಿ, ಸಬಲೀಕರಣಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಕೃಷಿಕರ ಆದಾಯ ವೃದ್ಧಿ, ಸ್ವದೇಶಿ ವಸ್ತುಗಳ ಬಳಕೆ, ಕೃಷಿ ಉದ್ಯಮದ ವಿಸ್ತಾರಕ್ಕೆ ಒತ್ತು ಕೊಡಬೇಕು. ಆತ್ಮನಿರ್ಭರ ಭಾರತ, ವಿಕಸಿತ ಭಾರತದ ಸಂಕಲ್ಪದೊಂದಿಗೆ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಜಗತ್ತಿನಲ್ಲಿ ಭಾರತ ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಉತ್ತಮ ಸಾಧನೆ ಮಾಡಿದೆ. ಅದನ್ನು ಹೊಸ ತಂತ್ರಜ್ಞಾನದೊಂದಿಗೆ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಕೃಷಿ ಹಾಗೂ ಮತ್ಸ್ಯೋದ್ಯಮ ಕ್ಷೇತ್ರದಲ್ಲಿ ಭಾರತ ಮುಂದಡಿ ಇಡುತ್ತಿದೆ. ಅದಕ್ಕೆ ಇನ್ನಷ್ಟು ವೇಗ ಕೊಡುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಭಾರತ ಕೃಷಿ ಪ್ರಧಾನ ದೇಶ. ಪಶು ಸಂಗೋಪನೆ ದೇಶದ ಬೆನ್ನೆಲುಬು. ಅನೇಕ ಜನರ ಜೀವನದ ಭಾಗವಾಗಿದೆ. ಅದೇ ರೀತಿ ಪಶು, ಮತ್ಸ್ಯೋದ್ಯಮ ಕೂಡ. ಇಲ್ಲಿ ಜ್ಞಾನಾರ್ಜನೆ ಪಡೆದ ವಿದ್ಯಾರ್ಥಿಗಳ ಜ್ಞಾನಾಧಾರಿತ ಕೌಶಲ ಪ್ರತಿ ಹಳ್ಳಿ ತಲುಪಬೇಕು. ಜೀವನದಲ್ಲಿ ಸಫಲತೆ, ಶಿಸ್ತು ನಡತೆಯಿಂದ ಸಿಗುತ್ತದೆ. ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಬೇಕು. ರೈತರ ಪರ ಸಂವೇದನೆ ಇಟ್ಟುಕೊಂಡು ಕೆಲಸ ಮಾಡಬೇಕು. ಜ್ಞಾನ, ಕೌಶಲ ನೈತಿಕ ಮೌಲ್ಯಗಳೊಂದಿಗೆ ಕೆಲಸ ನಿರ್ವಹಿಸುವುದು ಬಹಳ ಮುಖ್ಯ. ಜೊತೆಗೆ ರಾಷ್ಟ್ರ ನಿರ್ಮಾಣಕ್ಕಾಗಿ ಕೊಡುಗೆ ನೀಡಬೇಕು ಎಂದು ಸಲಹೆ ಮಾಡಿದರು.
‘ಹೊಸ ಹೊಸ ಸಂಶೋಧನೆಗಳಿಂದ ರೈತರ ಬದುಕು ಬದಲಾಗಬೇಕು. ಆಗ ಅದರ ಮೌಲ್ಯ ಹೆಚ್ಚಾಗುತ್ತದೆ’ ಎಂದು ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.
ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಿತ್ಯ 1 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ ಸಂಶೋಧಕರ ಪಾತ್ರ ಬಹಳ ಮಹತ್ವದಿದೆ. ಹಾಲು ಉತ್ಪಾದನೆಯಿಂದ ಗ್ರಾಮೀಣರ ಬದುಕಿನಲ್ಲಿ ದೊಡ್ಡ ಬದಲಾವಣೆ ಆಗಿದೆ ಎಂದರು.
ಪಶು ಸಂಗೋಪನಾ ಕ್ಷೇತ್ರದ ಬಲವರ್ಧನೆಗೆ ಸರ್ಕಾರ ಶ್ರಮಿಸುತ್ತಿದೆ. ಅದಕ್ಕೆ ಪೂರಕವಾಗಿ ಪಶು ವಿವಿ ಕೆಲಸ ಮಾಡುತ್ತಿದೆ. ಜಾನುವಾರುಗಳ ಖರೀದಿಗೆ ಪ್ರೋತ್ಸಾಹ ಧನ, ಜಾನುವಾರುಗಳು ಮೃತಪಟ್ಟರೆ ಅದಕ್ಕೆ ಪರಿಹಾರ ಕೊಡಲಾಗುತ್ತಿದೆ ಎಂದು ಹೇಳಿದರು.
‘ಕೃಷಿ ವಲಯದಲ್ಲಿ ಕರ್ನಾಟಕ ಬಹಳ ದೊಡ್ಡ ಯಶಸ್ಸು ಗಳಿಸಿದೆ. ಇಡೀ ದೇಶಕ್ಕೆ ಕರ್ನಾಟಕ ಮಾದರಿ’ ಎಂದು ಹೈದರಾಬಾದಿನ ‘ಇಕ್ರಿಸ್ಯಾಟ್’ ಪ್ರಧಾನ ನಿರ್ದೇಶಕ ಡಾ. ಹಿಮಾಂಶು ಪಾಠಕ್ ತಿಳಿಸಿದರು.
ಘಟಿಕೋತ್ಸವ ಭಾಷಣ ಮಾಡಿದ ಅವರು, ಭಾರತದ ಕೃಷಿ ವಲಯ ಬಹಳ ಸಾಧನೆ ಮಾಡಿದೆ. ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಈಗ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿ, ಅನ್ಯ ದೇಶಗಳಿಗೆ ರಫ್ತು ಮಾಡುತ್ತಿದೆ. 1950ರಲ್ಲಿ ಪ್ರತಿ ವರ್ಷ 70 ಮಿಲಿಟನ್ ಟನ್ ಹಾಲು ಉತ್ಪಾದಿಸಲಾಗುತ್ತಿತ್ತು. ಈಗ ಪ್ರತಿ ವರ್ಷ 217 ಟನ್‌ಗೆ ತಲುಪಿದೆ. ಅದೇ ರೀತಿ ಮತ್ಸ್ಯೋದ್ಯಮದಲ್ಲಿ 1 ಮಿಲಿಯನ್‌ನಿಂದ 210 ಮಿಲಿಯನ್‌ಗೆ ತಲುಪಿದೆ. ನಿಜಕ್ಕೂ ಇದು ದೊಡ್ಡ ಸಾಧನೆ ಎಂದು ವರ್ಣಿಸಿದರು.
ಆದರೆ, ಇಷ್ಟೇ ಸಾಲದು. ಜನಸಂಖ್ಯೆ ನಿರಂತರವಾಗಿ ಹೆಚ್ಚಳವಾಗುತ್ತಿದೆ. 2047ರಲ್ಲಿ ದೇಶ ವಿಕಸಿತ ಭಾರತ ಅನಿಸಿಕೊಳ್ಳಬೇಕಾದರೆ ಕೃಷಿ, ಪಶು ಸಂಗೋಪನೆ ಮತ್ತು ಮತ್ಸ್ಯೋದ್ಯಮದಲ್ಲಿ ಇನ್ನೂ ಸಾಕಷ್ಟು ಕೆಲಸಗಳಾಗಬೇಕಿದೆ. ಎಐ ಜತೆಗೆ ಅನೇಕ ಹೊಸ ತಂತ್ರಜ್ಞಾನಗಳ ಸೌಲಭ್ಯವಿದೆ. ಉತ್ಪಾದನೆ, ಗುಣಮಟ್ಟ ಹೆಚ್ಚಿಸಲು ಸಾಕಷ್ಟು ಸಾಧ್ಯತೆಗಳಿವೆ. ಇವೆಗಳೆಲ್ಲಕ್ಕೂ ಶಿಕ್ಷಣ ಮೂಲವಾಗಿದೆ. ಶಿಕ್ಷಣದಿಂದಲೇ ಶಾಂತಿ, ಸೌಹಾರ್ದ ಸಾಧ್ಯ ಎಂದು ತಿಳಿಸಿದರು.
ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಭಾರಿ ಹೆಚ್ಚಳ ಆಗಿರುವುದರಿಂದ ಈ ಸಲದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ನೀಡುವ ಚಿನ್ನದ ಪದಕಗಳ ಗಾತ್ರ ಮತ್ತು ತೂಕ ಇಳಿಕೆಯಾಗಿದೆ.
ಪದಕಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಪ್ರಮಾಣ ತಗ್ಗಿಸಲಾಗಿದೆ. ಪ್ರತಿ ಪದಕವನ್ನು 20 ಗ್ರಾಂನಿಂದ 17 ಗ್ರಾಂಗೆ ತೂಕ ಇಳಿದರೆ, ಈ ಹಿಂದೆ 2 ಎಂಎಂ ಇದ್ದ ಪದಕದ ಗಾತ್ರ 1.775 ಎಂಎಂ ಮಾಡಲಾಗಿದೆ. ಈ ಸಲ 81 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗಿದೆ. ಇದರಲ್ಲಿ 21 ವಿಶ್ವವಿದ್ಯಾಲಯದ ಹಾಗೂ 60 ಪ್ರಾಯೋಜಿತ ಚಿನ್ನದ ಪದಕಗಳು ಸೇರಿವೆ.
‘ಚಿನ್ನ, ಬೆಳ್ಳಿ ದರ ಹೆಚ್ಚಾಗಿರುವ ಕಾರಣ ಪ್ರಾಯೋಜಕತ್ವದ ಚಿನ್ನದ ಪದಕಗಳ ತೂಕ, ಗಾತ್ರದಲ್ಲಿ ಸ್ವಲ್ಪ ಇಳಿಕೆ ಮಾಡಿದ್ದಾರೆ. ವಿವಿ ಕೊಡುವ ಪದಕಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ’ ಎಂದು ವಿವಿ ಕುಲಪತಿ ಪ್ರೊ. ಕೆ.ಸಿ. ವೀರಣ್ಣ ತಿಳಿಸಿದ್ದಾರೆ.
‘ಕನ್ನಡದಲ್ಲಿಯೇ ಸಂಪೂರ್ಣ ಭಾಷಣ ಮಾಡಬೇಕು. ಮುಂದಿನ ಘಟಿಕೋತ್ಸವ ಕಾರ್ಯಕ್ರಮಗಳಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕು. ನಾನು ಕನ್ನಡದಲ್ಲಿ ಭಾಷಣ ಮಾಡಿದ್ದೇನೆ. ಕುಲಪತಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದು ಬದಲಾಗಬೇಕು. ಕನ್ನಡ ಬೆಳೆಸಬೇಕು’ ಎಂದು ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು ತಮ್ಮ ಭಾಷಣದಲ್ಲಿ ಕುಲಪತಿ ಪ್ರೊ. ಕೆ.ಸಿ. ವೀರಣ್ಣ ಅವರಿಗೆ ಸೂಚನೆ ನೀಡಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ‘ಎಲ್ಲರಿಗೂ ನಮಸ್ಕಾರ, ನಾನು ನಿಮ್ಮೆಲ್ಲರಿಗೂ ಹಾರ್ದಿಕವಾಗಿ ಸ್ವಾಗತಿಸುತ್ತೇನೆ’ ಎಂದು ಕನ್ನಡದಲ್ಲಿ ಹೇಳಿದಾಗ ಸಭಾಂಗಣದಲ್ಲಿ ಕರತಾಡನ ಮುಗಿಲು ಮುಟ್ಟಿತ್ತು. ಬಳಿಕ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.