ADVERTISEMENT

ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವು: ಈಶ್ವರ ಖಂಡ್ರೆ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 12:24 IST
Last Updated 28 ಜೂನ್ 2025, 12:24 IST
ಈಶ್ವರ ಖಂಡ್ರೆ, ಭಗವಂತ ಖೂಬಾ
ಈಶ್ವರ ಖಂಡ್ರೆ, ಭಗವಂತ ಖೂಬಾ   

ಬೀದರ್‌: ‘ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಷ್ಟ್ರ ಪ್ರಾಣಿ ಹುಲಿಗಳು ಸಾವನ್ನಪ್ಪಿದ್ದು, ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆಯವರು ಇದರ ಜವಾಬ್ದಾರಿ ಹೊತ್ತು ಕ್ಷಮೆಯಾಚಿಸಿ, ರಾಜೀನಾಮೆ ನೀಡಬೇಕು’ ಎಂದು ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.

ಹುಲಿಗಳ ಸಾವಿನಿಂದ ರಾಜ್ಯದ ಮಾನ ಹರಾಜಾಗುತ್ತಿದೆ. ಈ ವಿಷಯದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವ ಖಂಡ್ರೆ ಉತ್ತರಿಸಲಾಗದೆ, ಪತ್ರಕರ್ತರಿಗೆ ನಿಮ್ಮ ಧೋರಣೆ ಬದಲಾಯಿಸಿಕೊಳ್ಳಿ ಎಂದು ಗುರಾಯಿಸಿ, ತನ್ನ ರಾಕ್ಷಸ ಪ್ರವೃತ್ತಿ ತೋರಿಸಿದ್ದಾರೆ. ಇದನ್ನು ನಿಲ್ಲಿಸಿ ಕ್ಷಮೆಯಾಚಿಸಬೇಕೆಂದು ಶನಿವಾರ ಒತ್ತಾಯಿಸಿದ್ದಾರೆ.

ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶದ ಎರಡನೇ ರಾಜ್ಯ ಕರ್ನಾಟಕ. ಈ ಖ್ಯಾತಿ ಪಡೆದಿರುವ ರಾಜ್ಯದಲ್ಲಿ ಇಂತಹ ಘಟನೆ ನಡೆದಿದೆ. ಈ ಇಲಾಖೆಯ ಸಚಿವರಾಗಲಿ, ಸರ್ಕಾರವಾಗಲಿ ಇದರ ಹೊಣೆ ಹೊತ್ತಿಲ್ಲ. ಕೇವಲ ತನಿಖೆ ನಡೆಯುತ್ತಿದೆ ಎನ್ನುವ ಬೇಜವಾಬ್ದಾರಿ ಹೇಳಿಕೆ ನೀಡಿ ನುಣುಚಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ADVERTISEMENT

ಇಂತಹದ್ದೊಂದು ದೊಡ್ಡ ದುರಂತ ಸಂಭವಿಸಿದೆ. ಅರಣ್ಯ ಇಲಾಖೆ ವನ್ಯಜೀವಿಗಳ ರಕ್ಷಣೆಯಲ್ಲಿ ವಿಫಲವಾಗಿದೆ. ಈಶ್ವರ ಖಂಡ್ರೆ ಇದರ ಜವಾಬ್ದಾರಿ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಖಂಡ್ರೆ ಅಹಂಕಾರ, ಭಂಡತನದಲ್ಲಿ ಎತ್ತಿದ ಕೈ. ಇವರ ಹಾದಿಯಲ್ಲೆ ಅವರ ಇಲಾಖೆಯೂ ಸಾಗುತ್ತಿದೆ ಎಂಬುದು ಈ ಘಟನೆಯಿಂದ ಗೊತ್ತಾಗುತ್ತದೆ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂವಿಧಾನ, ಡಾ.ಬಿ.ಆರ್.ಅಂಬೇಡ್ಕರ್‌, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ನೆನಪಿಗೆ ಬರುತ್ತಾರೆ. ಯಾವುದೋ ಒಂದು ವೇದಿಕೆ ಬಳಸಿಕೊಂಡು, ಅಲ್ಲಿ ಸಂವಿಧಾನದ ನೆನಪು ಮಾಡಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರಿಗೆ ಬೈದು ನಾನೊಬ್ಬ ಸಮಾಜವಾದಿ, ಜಾತ್ಯತೀತವಾದಿ ಎಂದು ತೋರಿಸಿಕೊಳ್ಳುವ ಕೆಲಸ ಸಿದ್ದರಾಮಯ್ಯನವರು ಮಾಡುತ್ತಾರೆ ಎಂದು ಹೇಳಿದ್ದಾರೆ.

ಮಾಜಿಪ್ರಧಾನಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದಾಗ ನಿಜವಾಗಿಯೂ ಸಂವಿಧಾನದ ಕಗ್ಗೊಲೆಯಾಗಿತ್ತು. ಆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ವಿರೋಧ ಪಕ್ಷದಲ್ಲಿದ್ದು, ಇದನ್ನು ವಿರೋಧಿಸಿದ್ದರು. ಈಗೇಕೆ ಅದರ ನೆನಪು ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.