ಬೀದರ್: ಎಲ್ಲ ರೀತಿಯ ತರಕಾರಿ ಬೆಲೆಯಲ್ಲಿ ದಿಢೀರನೆ ಕುಸಿತ ಉಂಟಾಗಿದೆ. ಕಳೆದ ತಿಂಗಳಿದ್ದ ತರಕಾರಿ ಬೆಲೆ ಈಗಿಲ್ಲ. ಎರಡು ತಿಂಗಳ ಹಿಂದೆ ಇದ್ದ ಶುಂಠಿ, ಬೆಳ್ಳುಳ್ಳಿಯ ದರ ಈಗ ಭಾರಿ ಪ್ರಮಾಣದಲ್ಲಿ ಕುಸಿದಿದೆ. ವಾಣಿಜ್ಯ ಬೆಳೆ ಬೆಳೆದವರು ಕಡಿಮೆ ಬೆಲೆಗೆ ಮಾರಾಟ ಮಾಡಿ ಕೈಸುಟ್ಟುಕೊಳ್ಳುತ್ತಿದ್ದಾರೆ.
ತಿಂಗಳ ಹಿಂದೆ ಪ್ರತಿ ಕೆ.ಜಿ.ಗೆ ಬೆಳ್ಳುಳ್ಳಿ ಬೆಲೆ ₹500 ಇತ್ತು. ಅದೀಗ ₹250ಕ್ಕೆ ಕಮ್ಮಿಯಾಗಿದೆ. ಅರ್ಧಕ್ಕರ್ಧ ಬೆಲೆ ಕಡಿಮೆಯಾಗಿದೆ. ಅದೇ ರೀತಿ ಶುಂಠಿ ಬೆಲೆ ₹300ರಿಂದ ₹50ಕ್ಕೆ ಇಳಿದಿದೆ.
ವಾಣಿಜ್ಯ ಬೆಳೆಗಳ ಜೊತೆಗೆ ಟೊಮೆಟೊ, ಹೀರೇಕಾಯಿ, ಮೆಂತೆ ಸೊಪ್ಪು, ಸೌತೆಕಾಯಿ, ಹಾಗಲಕಾಯಿ, ಬೆಂಡೆಕಾಯಿ, ಬೀನ್ಸ್, ಬೀಟ್‌ರೂಟ್ ಸೇರಿದಂತೆ ಇತರೆಲ್ಲ ತರಕಾರಿಗಳ ಬೆಲೆಯೂ ಕಡಿಮೆಯಾಗಿದೆ.
ಕಳೆದ ತಿಂಗಳು ಟೊಮೆಟೊ ₹40 ಕೆ.ಜಿ. ಇತ್ತು. ಈಗ ₹10ರಿಂದ ₹20ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಇನ್ನು, ಸುಗ್ಗಿ ಹಬ್ಬ ಎಳ್ಳ ಅಮಾವಾಸ್ಯೆ ಸಂದರ್ಭದಲ್ಲಿಯೇ ಮೆಂತೆ ಸೊಪ್ಪು ಪ್ರತಿ ಕೆ.ಜಿಗೆ ₹40ರಿಂದ ₹50ಕ್ಕೆ ಮಾರಾಟವಾಗಿತ್ತು. ಈಗ ಅದನ್ನು ಯಾರು ಕೇಳುವವರು ಇಲ್ಲದಂತಾಗಿದೆ. ₹15ರಿಂದ ₹20ಕ್ಕೆ ಮಾರಾಟ ಮಾಡಲಾಗುತ್ತಿದೆ.
ಅದೇ ರೀತಿ ಬೀನ್ಸ್ ₹120ರಿಂದ ₹140 ಇತ್ತು. ಈಗ ಅದು ₹60ರಿಂದ ₹80 ನಡುವೆ ಮಾರಾಟವಾಗುತ್ತಿದೆ.
‘ತರಕಾರಿ ಸಾಮಾನ್ಯವಾಗಿ ಎರಡ್ಮೂರು ತಿಂಗಳಲ್ಲಿ ಕೈಗೆ ಬರುವ ಬೆಳೆ. ಎರಡ್ಮೂರು ತಿಂಗಳ ಹಿಂದೆ ತರಕಾರಿ ಬೆಳೆದವರಿಗೆ ಈಗ ಕೈಗೆ ಫಸಲು ಬರುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ, ಬೀನ್ಸ್, ಶುಂಠಿ, ಮೆಂತೆ ಸೊಪ್ಪು ಬರುತ್ತಿದೆ. ಬೇರೆ ಜಿಲ್ಲೆ, ಬೇರೆ ರಾಜ್ಯದಿಂದಲೂ ತರಕಾರಿ ಹೆಚ್ಚಾಗಿ ಬರುತ್ತಿದೆ. ಇದರಿಂದಾಗಿ ಎಲ್ಲ ತರಕಾರಿಗಳ ಬೆಲೆ ಕುಸಿದಿದೆ. ಇದರಿಂದ ಎಲ್ಲರಿಗೂ ನಷ್ಟ ಉಂಟಾಗುತ್ತಿದೆ’ ಎಂದು ನಗರದ ಜನವಾಡ ರಸ್ತೆಯ ರಾಜೀವ ಗಾಂಧಿ ವೃತ್ತದಲ್ಲಿ ತರಕಾರಿ ಮಾರಾಟ ಮಾಡುವ ವ್ಯಾಪಾರಿ ಮೆಹಮೂದ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಈಗಿರುವ ಟ್ರೆಂಡ್ ಫೆಬ್ರುವರಿ ಕೊನೆಯ ತನಕ ಮುಂದುವರೆಯಲಿದೆ. ಈಗ ಎಲ್ಲ ರೀತಿಯ ತರಕಾರಿ ಬರುವುದು ಹೆಚ್ಚಾಗಿದೆ. ಇನ್ನೂ ಕೂಡ ಚಳಿಯ ಪ್ರಮಾಣ ಇದೆ. ಮಂಜಿನಿಂದಲೇ ತರಕಾರಿ ಬೆಳೆಯುತ್ತದೆ. ಮಾರ್ಚ್ ನಂತರವೇ ತರಕಾರಿ ಮಾರುಕಟ್ಟೆಗೆ ಬರುವುದು ಕಡಿಮೆಯಾಗುತ್ತದೆ. ಆಗ ಬೆಲೆ ಹೆಚ್ಚಾಗಲು ಶುರುವಾಗುತ್ತದೆ’ ಎಂದು ಹೇಳಿದ್ದಾರೆ.
‘ಡಿಸೆಂಬರ್ ತಿಂಗಳ ವರೆಗೆ ಮದುವೆ, ಮುಂಜಿ ಸೇರಿದಂತೆ ಹೆಚ್ಚಿನ ಕಾರ್ಯಕ್ರಮಗಳಿದ್ದವು. ಸಹಜವಾಗಿಯೇ ತರಕಾರಿಗೆ ಬೇಡಿಕೆ ಇತ್ತು. ಜನವರಿಯಿಂದ ಫೆಬ್ರುವರಿ ತನಕ ಕೌಟುಂಬಿಕ ಕಾರ್ಯಕ್ರಮಗಳು ಹೆಚ್ಚಾಗಿ ಇರುವುದಿಲ್ಲ. ತರಕಾರಿಗೂ ಬೇಡಿಕೆ ಇರುವುದಿಲ್ಲ. ಇದು ಕೂಡ ಬೆಲೆ ಇಳಿಕೆಗೆ ಒಂದು ಕಾರಣ’ ಎಂದು ಗುಂಪಾ ಸಮೀಪದ ತರಕಾರಿ ವ್ಯಾಪಾರಿ ಬಸವರಾಜ ತಿಳಿಸಿದ್ದಾರೆ.
ತರಕಾರಿ ಒಂದು ರೀತಿಯ ಕಚ್ಚಾ ದಂಧೆ. ಇದನ್ನು ಹೆಚ್ಚು ದಿನ ಸ್ಟಾಕ್ ಮಾಡಲು ಆಗಲ್ಲ.ಬೇಡಿಕೆ ಕುಸಿದು ಸರಕು ಹೆಚ್ಚು ಬಂದರೆ ದರ ಕುಸಿಯುತ್ತದೆ.–ಸಿದ್ರಾಮಪ್ಪ ಆಣದೂರೆ ಜಿಲ್ಲಾಧ್ಯಕ್ಷ ರೈತ ಸಂಘ
ಶುಂಠಿ ಪ್ರತಿ ಕೆ.ಜಿ ಕನಿಷ್ಠ ₹100ಕ್ಕೆ ಮಾರಾಟವಾದರೆ ರೈತರು ಹಾಕಿದ ಬಂಡವಾಳ ಬರುತ್ತೆ. ಇಲ್ಲವಾದರೆ ನಷ್ಟ ಅನುಭವಿಸಬೇಕಾಗುತ್ತದೆ. ಏನೇ ಆದರೂ ರೈತರಿಗೆ ಸಮಸ್ಯೆ.–ಬಾಬುರಾವ್ ಜೋಳದಾಪಕೆ ಮುಖಂಡ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.