ಕಮಲನಗರ: ತಾಲ್ಲೂಕಿನ ದಾಬಕಾದಿಂದ ಚಿಕ್ಲಿ ಮಾರ್ಗವಾಗಿ ಉದಗೀರ್ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹಾಳಾಗಿದೆ. ರಸ್ತೆ ಮಧ್ಯದಲ್ಲಿ ತಗ್ಗುಗಳು ಬಿದ್ದ ಕಾರಣ ಮಳೆ ನೀರು ನಿಂತು ಪ್ರಯಾಣಿಕರು ಪ್ರಯಾಣ ಮಾಡಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರು ಭಯದಲ್ಲೇ ಸಂಚಾರ ಮಾಡುತ್ತಿದ್ದಾರೆ.
‘ರಸ್ತೆ ಸಮಸ್ಯೆ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಂಚಾರಕ್ಕೆ ತೊಂದರೆಯಾಗಿದೆ’ ಎನ್ನುವುದು ಸ್ಥಳೀಯರ ಸಾಮಾನ್ಯ ಆರೋಪ.
ಈ ರಸ್ತೆ ದಾಬಕಾದಿಂದ ಚಿಕ್ಲಿ ಕ್ರಾಸ್‌ವರೆಗೂ ಸಂಪೂರ್ಣವಾಗಿ ಹದಗೆಟ್ಟಿದೆ. ಗುಂಡಿಗಳು ನಿರ್ಮಾಣವಾಗಿವೆ. ಅವುಗಳಲ್ಲಿ ನೀರು ತುಂಬಿದ ಕಾರಣ ಹಲವು ವಾಹನ ಸವಾರ ರು ಆಯಾತಪ್ಪಿ ಬಿದ್ದ ಉದಾಹರಣೆಗಳೂ ಇವೆ.
ಈ ರಸ್ತೆ ಮಾರ್ಗವಾಗಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ದಾಬಕಾ, ಗಂಗನಬೀಡ್, ಚಿಕ್ಲಿ, ಬಂಡಾರ ಕುಮಟಾದ ಜನರು ಇದೇ ರಸ್ತೆ ಮಾರ್ಗವಾಗಿ ಸಂಚರಿಸುತ್ತಾರೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು ಪಟ್ಟಣಕ್ಕೆ ತೆರಳುತ್ತಾರೆ. ಕೂಡಲೇ ರಸ್ತೆ ದುರಸ್ತಿ ಪಡಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
7 ತಿಂಗಳುಗಳಿಂದ ಈ ರಸ್ತೆ ಹಾಳಾಗಿದೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಲಾಗಿತ್ತು. ದುರಸ್ತಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು. ಆದರೆ ಇಲ್ಲಿಯವರೆಗೂ ಚಿತ್ರಣ ಬದಲಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ದಸ್ತಗಿರಿ ಗುಲಾಬ್ ರಸೂಲ್ ಆಗ್ರಹಿಸಿದ್ದಾರೆ.
ರಸ್ತೆ ದುರಸ್ತಿ ಮಾಡಿಸಿದರೆ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳ ಗ್ರಾಮಗಳಿಗೆ ಜನ ಸುಲಭವಾಗಿ ತಲುಪಬಹುದು. ಅಧಿಕಾರಿಗಳು ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಗಂಗನಬೀಡ್ ನಿವಾಸಿ ಸಂತೋಷ ಜಾಧವ ಒತ್ತಾಯಿಸಿದ್ದಾರೆ.
ದಾಬಕಾ–ಚಿಕ್ಲಿ ಮುಖ್ಯ ರಸ್ತೆಯು ಸುಮಾರು 5 ರಿಂದ 6 ಕಿ.ಮೀವರೆಗೆ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ಕೆಲ ದಿನಗಳಲ್ಲಿಯೇ ರಸ್ತೆ ದುರಸ್ತಿ ಮಾಡಲಾಗುವುದುಸುನೀಲ್ ಚಿಲ್ಲರ್ಗೆ ಎಇ ಲೋಕೋಪಯೋಗಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.