ADVERTISEMENT

ಬೀದರ್ | ಸಾರ್ವಜನಿಕರ ಸುರಕ್ಷತೆಗಾಗಿ ತೆರೆದ ಬಾವಿಗಳಿಗೆ ಕಬ್ಬಿಣದ ಜಾಲರಿ ಅಳವಡಿಕೆ

ನಾಗೇಶ ಪ್ರಭಾ
Published 14 ಸೆಪ್ಟೆಂಬರ್ 2025, 6:30 IST
Last Updated 14 ಸೆಪ್ಟೆಂಬರ್ 2025, 6:30 IST
ಬೀದರ್ ತಾಲ್ಲೂಕಿನ ಗೌಸಪುರದ ಅಂಗನವಾಡಿ ಮುಂಭಾಗದ ತೆರೆದ ಬಾವಿಗೆ ಕಬ್ಬಿಣದ ಜಾಲರಿ ಅಳವಡಿಸಿರುವುದು 
ಬೀದರ್ ತಾಲ್ಲೂಕಿನ ಗೌಸಪುರದ ಅಂಗನವಾಡಿ ಮುಂಭಾಗದ ತೆರೆದ ಬಾವಿಗೆ ಕಬ್ಬಿಣದ ಜಾಲರಿ ಅಳವಡಿಸಿರುವುದು    

ಜನವಾಡ: ಬೀದರ್ ತಾಲ್ಲೂಕಿನ ಬರೂರು ಗ್ರಾಮ ಪಂಚಾಯಿತಿಯು ಸಾರ್ವಜನಿಕರ ಸುರಕ್ಷತೆಗಾಗಿ ತೆರೆದ ಬಾವಿಗಳಿಗೆ ಕಬ್ಬಿಣದ ಜಾಲರಿ ಅಳವಡಿಸಿ ಗಮನ ಸೆಳೆದಿದೆ.

ಜನ- ಜಾನುವಾರುಗಳಿಗೆ ಅಪಾಯ ಆಗುವುದನ್ನು ತಪ್ಪಿಸಲು ಬರೂರು ಗ್ರಾಮದ ಐದು ಹಾಗೂ ಗೌಸಪುರದ ಒಂದು ತೆರೆದ ಬಾವಿಗೆ ಜಾಲರಿ ಹಾಕಲಾಗಿದೆ. ಅಂಗನವಾಡಿ ಹತ್ತಿರದ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ತೆರೆದ ಬಾವಿಗಳಿಗೆ ಜಾಲರಿ ಅಳವಡಿಸಿದ ಕಾರಣ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ದೂರವಾಗಿದೆ. ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರಲ್ಲಿ ಇದ್ದ ಆತಂಕವೂ ನಿವಾರಣೆಯಾಗಿದೆ.

ಪಂಚಾಯಿತಿಯ 15ನೇ ಹಣಕಾಸು ನಿಧಿಯ ಅನುದಾನದಲ್ಲಿ ಒಂದು ತಿಂಗಳ ಹಿಂದೆ ಜನ ಬಳಸದ ಆರು ತೆರೆದ ಬಾವಿಗಳಿಗೆ ತಲಾ ₹60 ಸಾವಿರ ವೆಚ್ಚದಲ್ಲಿ ಕಬ್ಬಿಣದ ಜಾಲರಿ ಅಳವಡಿಸಲಾಗಿದೆ ಎಂದು ಬರೂರು ಪಿಡಿಒ ಗೀತಾ ಕೆ. ಸಜ್ಜನ್ ತಿಳಿಸಿದರು.

ADVERTISEMENT

‘ಗೌಸಪುರ ಹಾಗೂ ಬರೂರದಲ್ಲಿ ಅಪಾಯಕ್ಕೆ ಎಡೆಮಾಡಿಕೊಡುವ ತೆರೆದ ಬಾವಿಗಳಿರುವುದು ಗಮನಕ್ಕೆ ಬಂದಿತ್ತು. ನಂತರ ಅಪಾಯ ತಪ್ಪಿಸಲು ಕಬ್ಬಿಣದ ಜಾಲರಿ ಹಾಕುವ ಯೋಚನೆ ಹೊಳೆಯಿತು. ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದಾಗ ಸದಸ್ಯರು ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದರು’ ಎಂದರು.

ಗೌಸಪುರದಲ್ಲಿ ಅಂಗನವಾಡಿ ಮುಂಭಾಗದಲ್ಲೇ ತೆರೆದ ಬಾವಿ ಇರುವ ಕಾರಣ ಹಿಂದೆ ಅಂಗನವಾಡಿ ತೆರೆಯುತ್ತಿರಲಿಲ್ಲ. ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಕೂಡಿಸಲಾಗುತ್ತಿತ್ತು. ಬಾವಿಗೆ ಕಬ್ಬಿಣದ ಜಾಲರಿ ಅಳವಡಿಸಿದ ನಂತರ ಅಂಗನವಾಡಿ ತೆರೆಯಲಾಗುತ್ತಿದೆ. ಬರೂರದಲ್ಲಿ ಸಾರ್ವಜನಿಕರು ರಾತ್ರಿ ವೇಳೆಯೂ ನಿರ್ಭಯದಿಂದ ಓಡಾಡುವಂತಾಗಿದೆ.

‘ಬರೂರದಲ್ಲಿ ಕೆಲ ವರ್ಷಗಳ ಹಿಂದೆ ತೆರೆದ ಬಾವಿಗೆ ಬಿದ್ದು ಬಾಲಕ ಮೃತಪಟ್ಟ ಘಟನೆ ನಡೆದಿತ್ತು. ಸುರಕ್ಷತಾ ಕ್ರಮವಾಗಿ ಬಾವಿಗಳಿಗೆ ಜಾಲರಿ ಅಳವಡಿಸಿದ್ದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿನ ತೆರೆದ ಬಾವಿಗಳಿಗೆ ಎತ್ತರದ ಸುರಕ್ಷತಾ ಗೋಡೆಗಳಿರಲಿಲ್ಲ. ಹೀಗಾಗಿ ಮಕ್ಕಳು ಇಣುಕಿ ನೋಡಿದರೆ ಅಪಾಯ ಸಂಭವಿಸುವ ಹಾಗೂ ರಾತ್ರಿ ಅಪರಿಚಿತರು ಗೊತ್ತಾಗದೆ ಬೀಳುವ ಸಾಧ್ಯತೆ ಇತ್ತು’ ಎಂದು ತಿಳಿಸುತ್ತಾರೆ ಬರೂರು ಗ್ರಾಮದ ವಿಲಾಸ್ ರೆಡ್ಡಿ. 

ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ತೆರೆದ ಬಾವಿಗಳಿಗೆ ಕಬ್ಬಿಣದ ಜಾಲರಿ ಅಳವಡಿಸಿದ್ದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ
ವಿಲಾಸ್ ರೆಡ್ಡಿ ಬರೂರು ಗ್ರಾಮಸ್ಥ
ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಪಂಚಾಯಿತಿ ಚುನಾಯಿತಿ ಪ್ರತಿನಿಧಿಗಳ ಸಹಕಾರದೊಂದಿಗೆ ತೆರೆದ ಬಾವಿಗಳಿಗೆ ಕಬ್ಬಿಣದ ಜಾಲರಿ ಅಳವಡಿಸಲಾಗಿದೆ
ಗೀತಾ ಕೆ. ಸಜ್ಜನ್ ಬರೂರು ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.