ಸಾಂದರ್ಭಿಕ ಚಿತ್ರ
ಬೀದರ್: 2024–25ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶುಕ್ರವಾರ ಘೋಷಣೆಯಾಗಿದ್ದು, ರಾಜ್ಯದ ಫಲಿತಾಂಶದ ಪಟ್ಟಿಯಲ್ಲಿ ಬೀದರ್ ಜಿಲ್ಲೆಯ ಸ್ಥಾನ ಪಲ್ಲಟವಾಗಿದೆ. ಆದರೆ, ಒಟ್ಟಾರೆ ಫಲಿತಾಂಶ ಕುಸಿದಿದೆ.
ಬೀದರ್ ಜಿಲ್ಲೆಗೆ ಒಟ್ಟು 52.30ರಷ್ಟು ಫಲಿತಾಂಶ ಬಂದಿದ್ದು, ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ 31ನೇ ಸ್ಥಾನ ಪಡೆದಿದೆ. 2024ನೇ ಸಾಲಿನಲ್ಲಿ ಶೇ 62.25ರಷ್ಟು ಒಟ್ಟು ಫಲಿತಾಂಶ ಬಂದಿತ್ತು. ಹಿಂದಿನ ಸಾಲಿಗೆ ಹೋಲಿಸಿದರೆ ಶೇ 10ರಷ್ಟು ಫಲಿತಾಂಶ ಕುಸಿದಿದೆ. ಆದರೂ ಎರಡು ಸ್ಥಾನ ಜಿಗಿತ ಕಂಡಿದೆ. 2023ನೇ ಸಾಲಿನಲ್ಲಿ 34ನೇ ಸ್ಥಾನ ಗಳಿಸಿದ್ದ ಜಿಲ್ಲೆಗೆ ಒಟ್ಟು ಶೇ 77.89ರಷ್ಟು ಫಲಿತಾಂಶ ಲಭಿಸಿತ್ತು. ಕಳೆದ ಮೂರು ವರ್ಷಗಳಿಂದ ಜಿಲ್ಲೆ ಮೇಲ್ಮುಖವಾಗಿ ಚಲಿಸುತ್ತಿದೆ. ಆದರೆ, ಸತತವಾಗಿ ಫಲಿತಾಂಶ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕುಸಿಯುತ್ತಲೇ ಹೋಗುತ್ತಿದ್ದು, ಇದು ಕಳವಳಕ್ಕೆ ಕಾರಣವಾಗಿದೆ.
ಇಡೀ ಕಲ್ಯಾಣ ಕರ್ನಾಟಕದಲ್ಲಿ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ವಿಜಯನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಬಳ್ಳಾರಿ ಜಿಲ್ಲೆಯಿದೆ. ಇನ್ನು, ವಿಭಾಗೀಯ ಕೇಂದ್ರವೂ ಆಗಿರುವ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಬೀದರ್ ಜಿಲ್ಲೆಯಲ್ಲಿ ಪರೀಕ್ಷೆಗೆ ಒಟ್ಟು 24,187 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 12,651 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕುಸಿತಕ್ಕೆ ಕಾರಣವೇನು?: ಸತತ ಮೂರು ವರ್ಷಗಳಿಂದ ಜಿಲ್ಲೆಯ ಫಲಿತಾಂಶ ಕುಸಿತ ಕಾಣುತ್ತಿರುವುದಕ್ಕೆ ಶಿಕ್ಷಣ ವಲಯದಲ್ಲಿ ನಿರಾಸೆ ಮೂಡಿದೆ. ಅದರಲ್ಲೂ ವೆಬ್‌ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸಲು ಆರಂಭಿಸಿದ ನಂತರ ಫಲಿತಾಂಶ ಗಣನೀಯವಾಗಿ ಕುಸಿಯುತ್ತ ಹೋಗುತ್ತಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿತ್ತು. ಆದರೆ, ಅದಕ್ಕೆ ಫಲ ಸಿಕ್ಕಿಲ್ಲ. ನಿಗದಿತ ಕಾಲಾವಧಿಯಲ್ಲಿ ಪಾಠಗಳನ್ನು ಮುಗಿಸಿ, ರಿವಿಷನ್ ಮಾಡಿಸಲಾಗಿತ್ತು. ಫಲಿತಾಂಶದಲ್ಲಿ ಹಿಂದಿರುವ ಶಾಲೆಗಳು, ಕಲಿಕೆಯಲ್ಲಿ ಹಿಂದೆ ಇದ್ದ ಮಕ್ಕಳನ್ನು ಗುರುತಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಕಾರ್ಯಾಗಾರ ನಡೆಸಿ, ವಿಶೇಷ ತರಗತಿಗಳನ್ನು ನಡೆಸಲಾಗಿತ್ತು. ಆದರೂ ಒಟ್ಟಾರೆ ಫಲಿತಾಂಶ ಸುಧಾರಣೆ ಕಂಡಿಲ್ಲ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.
‘ಇತರೆ ಜಿಲ್ಲೆಗಳಲ್ಲಿ ಸಿಗುವ ಸೌಕರ್ಯಗಳು ನಮ್ಮ ಜಿಲ್ಲೆಯಲ್ಲೂ ಸಿಗುತ್ತಿವೆ. ಒಂದೇ ಪಠ್ಯಕ್ರಮ, ಉತ್ತಮ ಶಿಕ್ಷಕರೂ ಇದ್ದಾರೆ. ಆದರೆ, ಫಲಿತಾಂಶವೇಕೆ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನಹರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಶಿಕ್ಷಣ ವಲಯದ ಹಲವರ ಅಭಿಪ್ರಾಯವಾಗಿದೆ.
ಈ ಸಂಬಂಧ ಡಿಡಿಪಿಐ ಸಲೀಂ ಪಾಶಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ಎಲ್ಲ ರೀತಿಯ ಪ್ರಯತ್ನಗಳ ಹೊರತಾಗಿಯೂ ಫಲಿತಾಂಶ ಕುಸಿದಿದೆ. ಇದಕ್ಕೆ ಕಾರಣ ಗೊತ್ತಿಲ್ಲ. ಇದರ ಕಾರಣ ತಿಳಿದು, ಸರಿಪಡಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.
ಭಾಲ್ಕಿ ಪಟ್ಟಣದ ಸೇವಂತ್ ಡೇ ಅಡ್ವೆಂಟಿಸ್ಟ್ ಪ್ರೌಢಶಾಲೆಯ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿನಿ ಶ್ರೀಜಾ ಪಾಟೀಲ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 99.25ರಷ್ಟು ಅಂಕ ಗಳಿಸಿ ಜಿಲ್ಲೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಕನ್ನಡ ಗಣಿತ ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳಲ್ಲಿ ಪೂರ್ಣ ಅಂಕ ಪಡೆದಿದ್ದಾರೆ. ವಿದ್ಯಾರ್ಥಿನಿಯ ಪೋಷಕರಾದ ನಂದರಾಜ ಪಾಟೀಲ ಮತ್ತು ತಾಯಿ ಸುಪ್ರಿಯಾ ಎನ್. ಪಾಟೀಲ ವೈದ್ಯರಾಗಿದ್ದಾರೆ. ಇವರು ಮೂಲತಃ ಭಾಲ್ಕಿಯವರು. ಮಗಳ ಸಾಧನೆಗೆ ಪೋಷಕರು ಹಾಗೂ ಶಾಲೆಯ ಪ್ರಾಂಶುಪಾಲರು ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.