ADVERTISEMENT

ಬೀದರ್: ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ಅಧಿಕಾರಿಗಳ ಅಮಾನತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 5:15 IST
Last Updated 9 ಸೆಪ್ಟೆಂಬರ್ 2025, 5:15 IST
ಪವನ್‌ ಗೊಂಡಾ
ಪವನ್‌ ಗೊಂಡಾ   

ಬೀದರ್‌: ‘ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಪರಿಶಿಷ್ಟ ಪಂಗಡ (ಎಸ್‌ಟಿ) ಕೋಟಾದಡಿ ಆರನೇ ತರಗತಿಗೆ ನಡೆಸಿದ ಪ್ರಸಕ್ತ ಸಾಲಿನ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಹಣ ಪಡೆದವರಿಗೆ ಸೀಟುಗಳನ್ನು ಕೊಡಲಾಗಿದೆ’ ಎಂದು ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಸಂಘದ ಜಿಲ್ಲಾ ಉಪಾಧ್ಯಕ್ಷ ಪವನಗೊಂಡ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ, ಡಯಟ್‌ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಅಭ್ಯರ್ಥಿಗಳ ಆಯ್ಕೆಗೆ ಪ್ರವೇಶ ಪರೀಕ್ಷೆ ನಡೆಸಿ, ಜೂನ್‌ 10ರಂದು ಮೊದಲ ಪಟ್ಟಿ ಪ್ರಕಟಿಸಲಾಗಿತ್ತು. ದಾಖಲಾತಿಗಳ ಪರಿಶೀಲನೆ ನಂತರ ವಿದ್ಯಾರ್ಥಿಗಳು ಭಾಲ್ಕಿ ತಾಲ್ಲೂಕಿನ ಕರಡ್ಯಾಳ ಗುರುಕುಲಕ್ಕೆ ಹೋಗಿ ಎಸ್‌ಟಿ ಕೋಟಾದಡಿ ಪ್ರವೇಶ ಕೂಡ ಪಡೆದುಕೊಂಡಿದ್ದರು. ನಾಲ್ಕು ದಿನ ವಿದ್ಯಾರ್ಥಿಗಳು ತರಗತಿಗೂ ಹಾಜರಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಆದರೆ, ಕರಡ್ಯಾಳ ಗುರುಕುಲದವರು ವಿದ್ಯಾರ್ಥಿಗಳ ಪೋಷಕರನ್ನು ಶಾಲೆಗೆ ಕರೆಸಿಕೊಂಡು, ಮಕ್ಕಳನ್ನು ಅವರೊಂದಿಗೆ ಕಳಿಸಿದ್ದಾರೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೋಷಕರಿಗೆ ತಿಳಿಸಿದ್ದಾರೆ. 19 ಜನ ವಿದ್ಯಾರ್ಥಿಗಳ ಪರಿಸ್ಥಿತಿ ಸರಿಯಿಲ್ಲ. ತಂದೆ ಇಲ್ಲದ ಕಾರಣ ಅವರನ್ನು ಅವರ ತಾಯಂದಿರೇ ನೋಡಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.

ADVERTISEMENT

ಇದರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ, ಧರಣಿ ಕೂಡ ನಡೆಸಲಾಗಿದೆ. ಆನಂತರ ಪುನಃ ಪ್ರವೇಶ ಪರೀಕ್ಷೆ ನಡೆಸಿದ್ದಾರೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಯಟ್‌ ಅಧಿಕಾರಿಗಳು ಸೇರಿಕೊಂಡು ಹಣ ಪಡೆದು ಅನರ್ಹ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಕೊಟ್ಟು ಅರ್ಹತೆ ಸಿಗುವಂತೆ ಮಾಡಿದ್ದಾರೆ. ಪರೀಕ್ಷೆಯ ಒಎಂಆರ್‌ ಶೀಟ್‌ ಕೇಳಿದರೆ ಕೊಡಲು ನಿರಾಕರಿಸುತ್ತಿದ್ದಾರೆ. ಬಡ ಹಾಗೂ ಅರ್ಹ ವಿದ್ಯಾರ್ಥಿಗಳನ್ನು ವಂಚಿಸಿ, ಹಣ ಪಡೆದವರಿಗೆ ಎಸ್‌ಟಿ ಕೋಟಾದಡಿ ಸೀಟು ಕೊಡಿಸಲಾಗಿದೆ. ಕರಡ್ಯಾಳ ಗುರುಕುಲ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭಿನ್ನ ರೀತಿಯ ಮಾಹಿತಿ ಕೊಡುತ್ತಿದ್ದಾರೆ. ಎಲ್ಲರನ್ನೂ ಒಳಗೊಂಡಂತೆ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಗೆ ಬರುತ್ತದೆ. ಶಾಲೆಗೆ ನೋಟಿಸ್‌ ಕೊಟ್ಟು, ಎಫ್‌ಐಆರ್‌ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಅಧ್ಯಕ್ಷ ಪ್ರದೀಪ್‌ ಬೇಂದ್ರೆ, ಪ್ರಮುಖರಾದ ಕನಕದಾಸ, ಸುಧಾಕರ್‌, ಬಸವರಾಜ, ಸುವರ್ಣಾ, ರವಿರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.