ಬೀದರ್‌ನಲ್ಲಿ ಸಚಿವರ ಸಭೆ
ಬೀದರ್: ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯ (ಬಿಎಸ್‌ಎಸ್‌ಕೆ) ಪುನಶ್ಚೇತನಕ್ಕೆ ಮುಖ್ಯಮಂತ್ರಿ ಬಳಿ ನಿಯೋಗ ತೆರಳಲು ಬೆಂಗಳೂರಿನಲ್ಲಿ ಗುರುವಾರ ನಡೆದ ಸಚಿವರ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಯಿತು.
ದುರಾಡಳಿತದ ಫಲವಾಗಿ ಕಾರ್ಮಿಕರ ವೇತನ ಹಾಗೂ ವಿವಿಧ ಬ್ಯಾಂಕ್ ಗಳ ಸುಮಾರು ₹430 ಕೋಟಿಗೂ ಅಧಿಕ ಬಾಕಿ ಉಳಿಸಿಕೊಂಡು ಪ್ರಸ್ತುತ ಸ್ಥಗಿತಗೊಂಡಿರುವ ಬಿಎಸ್‌ಎಸ್‌ಕೆಯಲ್ಲಿ ಕಳೆದ 10 ವರ್ಷಗಳಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಪರಿಸರ, ಅರಣ್ಯ ಖಾತೆ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ಒತ್ತಾಯಿಸಿದರು.
ಈಶ್ವರ ಬಿ. ಖಂಡ್ರೆ ಮಾತನಾಡಿ, ಈ ಹಿಂದೆಯೂ ಬಿಎಸ್ಎಸ್‌ಕೆ ಅವ್ಯವಹಾರದ ಬಗ್ಗೆ ತನಿಖೆಗೆ ಆದೇಶ ಆಗಿದೆ. ಆದರೆ, ತಾರ್ಕಿಕ ಅಂತ್ಯ ಕಂಡಿಲ್ಲ. ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಕಾರ್ಖಾನೆಯು ಡಿಸಿಸಿ ಬ್ಯಾಂಕ್ ನಿಂದ ₹115 ಕೋಟಿ ಸಾಲ ಪಡೆದಿದೆ. ಬಡ್ಡಿ ಸೇರಿ ₹233 ಕೋಟಿ ಬಾಕಿ ಪಾವತಿಸಬೇಕಿದೆ. ಕಾರ್ಖಾನೆ ಮತ್ತು ಡಿಸಿಸಿ ಬ್ಯಾಂಕ್ ಎರಡೂ ರೈತರಿಗೆ ಸೇರಿವೆ. ಬೆಟ್ಟದಷ್ಟು ಸಾಲದ ಹೊರೆ ಇದ್ದು, ಸಕ್ಕರೆ ಕಾರ್ಖಾನೆ ಮುಚ್ಚಿದೆ. ಬ್ಯಾಂಕ್ ಕೂಡ ಚೇತರಿಸಿಕೊಳ್ಳದಂತಾಗಿದೆ. ಈ ನಿಟ್ಟಿನಲ್ಲಿ ಕಾರ್ಖಾನೆಯ ಪುನಶ್ಚೇತನ ಕುರಿತಂತೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಬೇಕು ಎಂದು ಸಲಹೆ ನೀಡಿದರು.
ಸಚಿವ ರಹೀಂ ಖಾನ್ ಮಾತನಾಡಿ, ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ಮಾಡಿದವರ ವಿರುದ್ಧ ಕ್ರಮ ಆಗದಿದ್ದರೆ ಮತ್ತೆ ಅವರೇ ಚುನಾಯಿಸಿ ಬಂದು ಕಾರ್ಖಾನೆಯನ್ನು ನಾಶ ಮಾಡುತ್ತಾರೆ. ಈ ಬಗ್ಗೆ ತನಿಖೆ ಆಗಿ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಆಗಬೇಕು ಎಂದರು.
ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಬೀದರ್ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಸಹಕಾರಿ ಸಕ್ಕರೆ ಕಾರ್ಖಾನೆ ಪುನಾರಂಭಕ್ಕಾಗಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ, ಕಾರ್ಖಾನೆಯ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಶಾಸಕರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ, ಚಂದ್ರಶೇಖರ ಪಾಟೀಲ, ಎಂ.ಜಿ. ಮುಳೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ್ ಖಂಡ್ರೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಮಾಜಿ ಸಚಿವರೂ ಆದ ಕಾಂಗ್ರೆಸ್ ಮುಖಂಡ ರಾಜಶೇಖರ ಪಾಟೀಲ ಪಾಲ್ಗೊಂಡಿದ್ದರು.
ಒಟಿಎಸ್ ಯೋಜನೆಯಡಿ ಬ್ಯಾಂಕ್ ಗಳ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಮತ್ತು ಖಾಸಗಿಯವರಿಗೆ ಗುತ್ತಿಗೆ ನೀಡಿ ಸಕ್ಕರೆ ಕಾರ್ಖಾನೆ ಪುನಾರರಂಭ ಮಾಡುವುದರ ಬಗ್ಗೆ ಪರಿಶೀಲಿಸಬೇಕಿದೆ.––ಶಿವಾನಂದ ಪಾಟೀಲ, ಸಕ್ಕರೆ ಸಚಿವ
ಕಾರ್ಖಾನೆಯ ಸ್ವಾಧೀನದಲ್ಲಿರುವ 173 ಎಕರೆ ಜಮೀನಿನ ಪೈಕಿ ಕಾರ್ಖಾನೆಗೆ ಬೇಕಾದಷ್ಟು ಜಾಗ ಇಟ್ಟುಕೊಂಡು ಭಾಗಶಃ ಮಾರಾಟ ಮಾಡಿ, ಬ್ಯಾಂಕ್ ಗಳ ಸಾಲ ತೀರಿಸಿ, ಯಂತ್ರೋಪಕರಣಗಳಿಗೆ ಹೊಸ ಸಾಲ ಪಡೆದು ಕಾರ್ಖಾನೆ ಆರಂಭಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು.–ಕೆ.ಎನ್. ರಾಜಣ್ಣ, ಸಹಕಾರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.