ಬಸವಲಿಂಗ ಪಟ್ಟದ್ದೇವರು, ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ
ಭಾಲ್ಕಿ (ಬೀದರ್ ಜಿಲ್ಲೆ): ಬಸವಕಲ್ಯಾಣದಲ್ಲಿ ನಡೆಯುತ್ತಿರುವ ದಸರಾ ದರ್ಬಾರ ಕಾರ್ಯಕ್ರಮದಲ್ಲಿ ರಂಭಾಪುರಿ ಶ್ರೀಗಳು ತ್ರಿಪುರಾಂತಕ ಕೆರೆಯ ಹೆಸರನ್ನು ಬದಲಾಯಿಸಬೇಕು ಎಂಬ ಹೇಳಿಕೆಗೆ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಖಂಡಿಸಿದ್ದಾರೆ.
ತ್ರಿಪುರಾಂತಕ ಕೆರೆ 12ನೇ ಶತಮಾನದ ಬಸವಾದಿ ಶರಣರ ಚರಿತ್ರೆಯಲ್ಲಿ, ವಚನಗಳಲ್ಲಿ ಅತ್ಯಂತ ಮಹತ್ವ ಪಡೆದಿದೆ. ಕೆಲವು ಶರಣರ ವಚನಗಳ ಹಾಗೂ ವಚನಾಂಕಿತಗಳಲ್ಲಿ ತ್ರಿಪುರಾಂತಕ ಕೆರೆಯ ಹೆಸರನ್ನು ಉಲ್ಲೇಖಿಸಲಾಗಿದೆ. ಶರಣರ ಚರಿತ್ರೆಗೆ ತ್ರಿಪುರಾಂತಕ ಕೆರೆಗೆ ಅವಿನಾಭಾವ ಸಂಬಂಧವಿದೆ. ಹೀಗಿರುವಾಗ ರಂಭಾಪುರಿ ಶ್ರೀಗಳು ತ್ರಿಪುರಾಂತಕ ಕೆರೆಯ ಹೆಸರು ಬದಲಾಯಿಸುವ ಸಲಹೆ ನೀಡುವ ಮೂಲಕ ಶರಣರ ನಿಜಚರಿತ್ರೆಯನ್ನು ತಿರುಚುವ ಹುನ್ನಾರ ನಡೆಸುತ್ತಿರುವುದು ವಿಷಾದನೀಯ ಎಂದು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶರಣರ ಇತಿಹಾಸ ತಿರುಚುವ ಕಾರ್ಯಗಳನ್ನು ಯಾರೂ ಮಾಡಬಾರದು. ಶರಣರ ಸತ್ಯ ಚರಿತ್ರೆಗೆ ಯಾರಾದರೂ ಕೈ ಹಾಕಿದರೆ ಅದರ ಪ್ರತಿಫಲವನ್ನು ಅವರೇ ಅನುಭವಿಸುತ್ತಾರೆ ಎಂಬುದು ಮರೆಯಬಾರದು ಎಂದು ಹೇಳಿದರು.
ಲಿಂಗಾಯತ ಧರ್ಮ, ವೀರಶೈವ ಪಂಗಡ: ರಂಭಾಪುರಿ ಶ್ರೀಗಳು ವೀರಶೈವ ಲಿಂಗಾಯತ ಎರಡು ಒಂದೇ ಎಂದು ಹೇಳುತ್ತಾ ಪ್ರತ್ಯೇಕ ಧರ್ಮದ ಪ್ರತಿಪಾದನೆ ಮಾಡುತ್ತಿರುವವರಲ್ಲಿ ಅರೇಜ್ಞಾನ ಇದೆ ಎಂದು ನುಡಿದಿರುವುದು ಖಂಡನೀಯವಾದದ್ದು.
ಬಸವಾದಿ ಶರಣರ ವಚನಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಅನೇಕ ಸಾಹಿತಿಗಳು, ಸಂಶೋಧಕರು, ಮಠಾಧೀಶರು, ಸರ್ಕಾರದ ದಾಖಲೆಗಳನ್ನು ಲಿಂಗಾಯತ ಪ್ರತ್ಯೇಕ ಧರ್ಮವೆಂದು ಸಾಕ್ಷಿ ನೀಡುತ್ತವೆ.
ಎರಡೂ ಒಂದೇ ಎನ್ನುವ ಶ್ರೀಗಳು ಪ್ರತ್ಯೇಕ ಧರ್ಮದ ಹೋರಾಟವನ್ನು ಬೆಂಬಲಿಸಬೇಕೆ ವಿನಃ ಅದನ್ನು ವಿರೋಧಿಸಬಾರದು. ವೀರಶೈವ ಲಿಂಗಾಯತ ಧರ್ಮದ ಒಂದು ಉಪಪಂಗಡ. ಹಾಗಾಗಿ ಲಿಂಗಾಯತರಲ್ಲಿ ವೀರಶೈವ ಇದೆ. ಆದರೆ ವೀರಶೈವವೇ ಪ್ರಧಾನವಲ್ಲವೆಂಬುದು ಪೂಜ್ಯರು ಗಮನಿಸಬೇಕು. ಈ ಮುಂಚೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಯಾಕೆ ತಿರಸ್ಕರಿಸಿದೆ ಎಂಬುದು ಶ್ರೀಗಳು ತಿಳಿದುಕೊಳ್ಳಬೇಕು ಎಂದರು.
ಲಿಂಗಾಯತ ಸಮಾಜದ ಅಖಂಡತೆಗಾಗಿ ಮತ್ತು ಈ ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ಲಿಂಗಾಯತ ಧರ್ಮ ಅಲ್ಪಸಂಖ್ಯಾತ ಮಾನ್ಯತೆಯ ಹೋರಾಟವನ್ನು ಬೆಂಬಲಿಸಬೇಕು ಬಸವಲಿಂಗ ಪಟ್ಟದ್ದೇವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.