ADVERTISEMENT

ವೀರಶೈವ-ಲಿಂಗಾಯತ ಒಂದೇ ಎಂದರೆ ಪ್ರತ್ಯೇಕ ಧರ್ಮಕ್ಕೆ ವಿರೋಧವೇಕೆ? ಬಸವಲಿಂಗ ಶ್ರೀ

ವೀರಶೈವ ಪೀಠಾಚಾರ್ಯರ ಹೇಳಿಕೆಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಖಂಡನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 13:32 IST
Last Updated 26 ಜುಲೈ 2025, 13:32 IST
<div class="paragraphs"><p>ಬಸವಲಿಂಗ ಶ್ರೀ,&nbsp;ವೀರಶೈವ ಪೀಠಾಚಾರ್ಯರ ಸಭೆ</p></div>

ಬಸವಲಿಂಗ ಶ್ರೀ, ವೀರಶೈವ ಪೀಠಾಚಾರ್ಯರ ಸಭೆ

   

ಭಾಲ್ಕಿ (ಬೀದರ್‌ ಜಿಲ್ಲೆ): ‘ವೀರಶೈವ ಲಿಂಗಾಯತ ಎರಡೂ ಒಂದೇ. ಸನಾತನ ಹಿಂದೂ ವೀರಶೈವ ಲಿಂಗಾಯತ ಧರ್ಮ ಎಂದು ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಪಂಚಪೀಠದ ಆಚಾರ್ಯರು, ಕೆಲ ರಾಜಕೀಯ ಮುಖಂಡರು ನೀಡಿರುವ ಹೇಳಿಕೆ ಖಂಡನಾರ್ಹವಾದುದು’ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ನಂತರ ಬಸವತತ್ವ ವಿರೋಧಿ ಶಕ್ತಿಗಳು ಒಗ್ಗಟ್ಟಾಗಿ ಆಂತರಿಕ, ಬಹಿರಂಗವಾಗಿ ಅನೇಕ ಕುತಂತ್ರಗಳು ಹೆಣೆಯುವ ಶತ ಪ್ರಯತ್ನಗಳು ಮಾಡುತ್ತಿವೆ ಎಂದು ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿ ಆರೋಪಿಸಿದ್ದಾರೆ.

ADVERTISEMENT

ಬಸವಣ್ಣನವರ ಹೆಸರು ಹೇಳುತ್ತಲೇ ತಮ್ಮ ಗುಪ್ತ ಅಜೆಂಡಾಗಳು ಜಾರಿಗೊಳಿಸುವ ಪ್ರಯತ್ನಗಳು ತೀವ್ರವಾಗಿ ನಡೆಯುತ್ತಿವೆ. ಅದರ ಭಾಗವೇ ವೀರಶೈವ ಪಂಚಾಚಾರ್ಯರ, ಶಿವಾಚಾರ್ಯರ ಶೃಂಗ ಸಮ್ಮೇಳನ ಎಂದು ಹೇಳಿದ್ದಾರೆ.

ವೀರಶೈವ ಲಿಂಗಾಯತ ಎರಡೂ ಒಂದೆಯಾದರೆ ಪ್ರತ್ಯೇಕ ಧರ್ಮಕ್ಕೆ ಪಂಚಪೀಠಗಳು ವಿರೋಧಿಸುತ್ತಿರುವುದು ಏಕೆ? ಬಸವಣ್ಣನವರ ಕುರಿತು ಮಾತನಾಡುವ ಪಂಚಪೀಠಗಳು ಬಸವಣ್ಣನವರಿಗೆ ಗುರು ಎಂದು ಎಂದೂ ಒಪ್ಪಿಕೊಂಡಿಲ್ಲ. ಅವರಿಗೆ ಬಸವತತ್ವದಲ್ಲಿ ನಂಬಿಕೆ ಇಲ್ಲ. ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನದ ಮಾನ್ಯತೆ ಏಕೆ ತಪ್ಪಿಸಿದರು? ಕೇದಾರದ ಸ್ವಾಮೀಜಿ ಪ್ರಧಾನಮಂತ್ರಿಗೆ ಕರೆ ಮಾಡಿ, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡಬಾರದೆಂದು ಹೇಳಿರುವುದು ಏಕೆ? ಶೃಂಗ ಸಮ್ಮೇಳನದ ಆಮಂತ್ರಣ ಪತ್ರಿಕೆ, ವೇದಿಕೆಯಲ್ಲಿ ವಿಶ್ವಗುರು ಬಸವಣ್ಣನವರ ಫೋಟೊ ಏಕೆ ಹಾಕಲಿಲ್ಲ? ಜೊತೆಗೆ ಲಿಂಗಾಯತ ಶಬ್ದ ಏಕೆ ಕೈಬಿಡಲಾಗಿದೆ ಎಂಬುದರ ಬಗ್ಗೆ ಪಂಚಪೀಠಗಳು ಉತ್ತರಿಸಬಹುದೇ ಎಂದು ಕೇಳಿದ್ದಾರೆ.

ವಿಜಯಾನಂದ ಕಾಶಪ್ಪನವರ ಹೇಳಿಕೆಗೆ ಖಂಡನೆ

ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಪಂಚಪೀಠಗಳಿಗೆ ಕೂಡಲಸಂಗಮಕ್ಕೆ ಆಹ್ವಾನ ನೀಡಿ, `ಪಂಚಪೀಠಾಧಿಶರರು ಕೂಡಲಸಂಗಮಕ್ಕೆ ಬಂದು ಆ ಭೂಮಿ ಪಾವನ ಮಾಡಬೇಕು. ಅಲ್ಲಿ ಅಡ್ಡಪಲ್ಲಕಿ ಉತ್ಸವ ಮಾಡಲಿದ್ದೇವೆ ಎಂಬ ಅವರ ಹೇಳಿಕೆ ಖಂಡನೀಯ ಎಂದು ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

ಬಸವಣ್ಣನವರ ನೆಲದಲ್ಲಿ ಬಸವತತ್ವದ ಚಿಂತನೆಗಳು ಜಾರಿಯಾಗಬೇಕೆ ವಿನಃ ಬಸವತತ್ವ ವಿರೋಧಿ ಅಡ್ಡಪಲ್ಲಕಿಗಳಂತಹ ಅಮಾನವೀಯ ಕಾರ್ಯಗಳು ನಡೆಯಬಾರದು. ಒಂದು ವೇಳೆ ವಿಜಯಾನಂದ ಕಾಶಪ್ಪನವರು ಈ ರೀತಿ ಮಾಡಿದರೆ ನಾಡಿನ ಸಮಸ್ತ ಬಸವಭಕ್ತರು, ಪ್ರಗತಿಪರ ಚಿಂತಕರು, ಸಂವಿಧಾನ ಪ್ರೇಮಿಗಳು ಇದನ್ನು ಒಗ್ಗಟ್ಟಿನಿಂದ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಬಸವಸಂಸ್ಕತಿಯ ಜಾಗೃತಿಯ ಭಯದಿಂದ ಪಂಚಪೀಠಗಳು ಒಗ್ಗಟ್ಟಾಗಿವೆ. ಬಸವ ಪರಂಪರೆಯ ಮಠಾಧೀಶರ ಒಗ್ಗಟ್ಟಿನಿಂದ ಭಯಭೀತಗೊಂಡ ಪಂಚಪೀಠಗಳು ಶೃಂಗ ಸಮ್ಮೇಳನ ಮಾಡಿವೆ ವಿನಃ ಇದರ ಹಿಂದೆ ಸಮಾಜದ ಹಿತ, ಸಮಾಜದ ಒಗ್ಗಟ್ಟಿನ ಯಾವ ಉದ್ದೇಶವು ಸ್ಪಷ್ಟವಾಗಿ ಕಂಡಿಲ್ಲ. ಜನಮನದಲ್ಲಿ ಬಸವಪ್ರಜ್ಞೆ ಬೆಳೆದರೆ ನಮ್ಮ ಪೀಠ ಮತ್ತು ಮಠಗಳು ಮೂಲೆ ಗುಂಪು ಆಗುತ್ತವೆ ಎಂಬ ಭಯ ಪಂಚಪೀಠಗಳಿಗೆ ಕಾಡುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.