ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು–ಬೇಡಗುಳಿ ಸಂಪರ್ಕಿಸುವ ರಸ್ತೆಯಲ್ಲಿ ತಾಯಿ ಹುಲಿಯಿಂದ ಬೇರ್ಪಟ್ಟ ಮೂರು ಹುಲಿ ಮರಿಗಳು ಪತ್ತೆಯಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಭಾನುವಾರ ಬಜೆಬಾವಿ ಅರಣ್ಯ ವ್ಯಾಪ್ತಿಯಲ್ಲಿ ಸಿಬ್ಬಂದಿ ಗಸ್ತು ಮಾಡುವಾಗ ಎರಡು ಹುಲಿಮರಿಗಳು ಪತ್ತೆಯಾಗಿವೆ. ತಾಯಿ ಹುಲಿಯನ್ನು ಪತ್ತೆಹಚ್ಚಲು ಕ್ಯಾಮೆರಾ ಟ್ರಾಪ್ ಅಳವಡಿಸಿ ಕೂಂಬಿಂಗ್ ನಡೆಸುವಾಗ ಮಂಗಳವಾರ ಮತ್ತೊಂದು ಹುಲಿ ಮರಿ ಪತ್ತೆಯಾಗಿದ್ದು ತಾಯಿ ಹುಲಿಯ ಸುಳಿವು ಸಿಕ್ಕಿಲ್ಲ. ಎನ್‌ಟಿಸಿಎ ಮಾರ್ಗಸೂಚಿಯಂತೆ ಬಿಆರ್‌ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ನೇತೃತ್ವದಲ್ಲಿ ಸ್ಟಾಂಡರ್ಡ್ ಟೆಕ್ನಿಕಲ್ ಗೈಡೆನ್ಸ್ ಅಂಡ್ ಮಾನಿಟರಿಂಗ್ ಸಮಿತಿ ರಚಿಸಲಾಗಿದೆ.
ಹುಲಿ ಮರಿಗಳನ್ನು ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದ್ದು ಇಲಾಖೆಯ ಪಶುವೈದ್ಯರು ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ. ಶೀಘ್ರ ತಾಯಿ ಹುಲಿಯನ್ನು ಪತ್ತೆಹಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂಂಬಿಂಗ್
ಎನ್‌ಟಿಸಿಎ ನಾಮ ನಿರ್ದೇಶಿತ ಸದಸ್ಯ ಮಲ್ಲೇಶಪ್ಪ, ಪಶುವೈದ್ಯರಾದ ಡಾ.ಆದರ್ಶ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಹುಲಿಯ ಪತ್ತೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಬೀಮ ಹಾಗೂ ಮಹೇಂದ್ರ ಆನೆಗಳನ್ನು ಕೂಂಬಿಂಗ್‌ಗೆ ಬಳಸಿಕೊಳ್ಳಲಾಗಿದ್ದು ಮೊದಲ ದಿನ ತಾಯಿ ಹುಲಿ ಪತ್ತೆಯಾಗಿಲ್ಲ ಎಂದು ಪುಣಜನೂರು ಎಸಿಎಫ್ ಮಂಜುನಾಥ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.