ADVERTISEMENT

ಮಹದೇಶ್ವರ ಬೆಟ್ಟ: 6 ವರ್ಷ ಬಳಿಕ ಮಾದಪ್ಪನ ತೆಪ್ಪೋತ್ಸವ

ದೊಡ್ಡಕರೆ ಕಲ್ಯಾಣಿ ಕಾಮಗಾರಿ ಪೂರ್ಣ: ಉತ್ಸವಕ್ಕೆ ಸಿದ್ಧತೆಗಳು ಆರಂಭ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 4:39 IST
Last Updated 27 ಸೆಪ್ಟೆಂಬರ್ 2025, 4:39 IST
2018ರಲ್ಲಿ ಮಲೆ ಮಹದೇಶ್ವರ ದೇವಸ್ಥಾನದ ಕಲ್ಯಾಣಿಯಲ್ಲಿ ನಡೆದ ತೆಪ್ಪೋತ್ಸವ
2018ರಲ್ಲಿ ಮಲೆ ಮಹದೇಶ್ವರ ದೇವಸ್ಥಾನದ ಕಲ್ಯಾಣಿಯಲ್ಲಿ ನಡೆದ ತೆಪ್ಪೋತ್ಸವ   

ಮಹದೇಶ್ವರ ಬೆಟ್ಟ: 6 ವರ್ಷಗಳ ಬಳಿಯ ನಡೆಯುತ್ತಿರುವ ಮಲೆ ಮಾದೇಶ್ವರ ಸ್ವಾಮಿಯ ತೆಪ್ಪೋತ್ಸವಕ್ಕೆ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಪವಿತ್ರ ಧಾರ್ಮಿಕ ಯಾತ್ರಾ ಸ್ಥಳವಾದ ಮಾದಪ್ಪನ ಸನ್ನಿಧಿಯಲ್ಲಿ ನಡೆಯುವ ತೆಪ್ಪೋತ್ಸವ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ. ದಸರಾ, ಕಡೇ ಕಾರ್ತಿಕ ಸೋಮವಾರ, ದೀಪಾವಳಿ ಜಾತ್ರಾ ಮಹೋತ್ಸವ ಸೇರಿದಂತೆ ವರ್ಷದಲ್ಲಿ ನಾಲ್ಕು ಬಾರಿ ತೆಪ್ಪೋತ್ಸವ ನಡೆಯವುದು ಸಂಪ್ರದಾಯ.

ಕ್ಷೇತ್ರದ ದೊಡ್ಡಕೆರೆಯಲ್ಲಿ ನಡೆಯುವ ತೆಪ್ಪೋತ್ಸವದಲ್ಲಿ ವಿದ್ಯುತ್ ದೀಪಾಲಂಕಾರ ಕಣ್ಮನ ಸೆಳೆಯುತ್ತದೆ. ತೆಪ್ಪೋತ್ಸವ ನಡೆಯುವಾಗ ಸಿಡಿ ಮದ್ದುಗಳ ಪ್ರದರ್ಶನವೂ ಜನಾಕರ್ಷಣೆಯಾಗಿದ್ದು, ಸಾವಿರಾರು ಭಕ್ತರು ಹಾಜರಿದ್ದು ಕಣ್ತುಂಬಿಕೊಳ್ಳುತ್ತಾರೆ.

ADVERTISEMENT

ಪ್ರತಿವರ್ಷ ನಡೆಯುತಿದ್ದ ತೆಪ್ಪೋತ್ಸವ ಕಾರ್ಯಕ್ರಮ ಕಲ್ಯಾಣಿ ಅಭಿವೃದ್ಧಿ ಕಾಮಗಾರಿಯ ಪರಿಣಾಮ ಕಳೆದ 6 ವರ್ಷಗಳಿಂದ ನಡೆದಿರಲಿಲ್ಲ. ಇದೀಗ ದಸರಾ ಹಬ್ಬದ ಹೊತ್ತಿಗೆ ಕಾಮಗಾರಿಗಳು ಪೂರ್ಣಗೊಂಡು ತೆಪ್ಪೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿರುವುದು ಭಕ್ತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕ್ಷೇತ್ರದಲ್ಲಿ ನಡೆಯುವ ತೆಪ್ಪೋತ್ಸವ ವೀಕ್ಷಿಸಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಹರಕೆ ತೀರಿಸಲು ಬರುವ ಭಕ್ತರು 7 ದಿನ, 15 ದಿನ, 30 ದಿನ ದೇವಾಲಯದ ಇಕ್ಕೆಲಗಳಲ್ಲಿ ತಂಗಿ ಹರಕೆ ಹಾಗೂ ಕಾಣಿಕೆ ತೀರಿಸಿ ತೆಪ್ಪೋತ್ಸವದಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದರೆ ಹರಕೆ ಸಂಪನ್ನವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಅದರಂತೆ ಪ್ರತಿವರ್ಷ ತೆಪ್ಪೋತ್ಸವ ಹತ್ತಿರವಾಗುವ ಸಮಯಕ್ಕೆ ಬರುವ ಭಕ್ತರು ಹರಕೆ ಸಲ್ಲಿಸಿ ತೆಪ್ಪೋತ್ಸವ ವೀಕ್ಷಿಸಿ ದೇವರ ದರ್ಶನ ಪಡೆದು ಸ್ವಗ್ರಾಮಗಳಿಗೆ ತೆರಳುತ್ತಾರೆ.

ತೆಪ್ಪೋತ್ಸವ ವಿಧಿವಿಧಾನಗಳು: ದೇವಾಲಯದ ಒಳಭಾಗದಲ್ಲಿರುವ ಶಿವ ಪಾರ್ವತಿಯ ಉತ್ಸವ ಮೂರ್ತಿಗಳಿಗೆ ಅಲಂಕಾರ ಮಾಡಿ ಕುದುರೆ ವಾಹನೋತ್ಸವದಲ್ಲಿ ಮೆರವಣಿಗೆ ತಂದು ದೇವಾಲಯದ ಸುತ್ತಲೂ ಪ್ರದಕ್ಷಿಣಿ ಹಾಕಲಾಗುತ್ತದೆ. ಬಳಿಕ ಉತ್ಸವ ಮೂರ್ತಿಗಳನ್ನು ದೊಡ್ಡಕೆರೆಯ ಬಳಿ ತಂದು ಪೂಜೆ ಪುನಸ್ಕಾರಗಳನ್ನು ಮಾಡಿ ತೆಪ್ಪದೊಳಗೆ ಕೂರಿಸಿ ಕಲ್ಯಾಣಿಯೊಳಗೆ ಮೂರು ಪ್ರದಕ್ಷಿಣೆ ಹಾಕಲಾಗುತ್ತದೆ. ಈ ಮೂಲಕ ತೆಪ್ಪೋತ್ಸವ ಸಂಪನ್ನಗೊಳ್ಳಲಿದೆ. 

ತೆಪ್ಪೋತ್ಸವ ನಡೆಯುವ ಕಲ್ಯಾಣಿ

ಕಲ್ಯಾಣಿ ಸುತ್ತಲಿನ ಪ್ರದೇಶ ಸ್ವಚ್ಛ

‘2019ರಿಂದ ತೆಪ್ಪೋತ್ಸವ ನಡೆದಿರಲಿಲ್ಲ ಕಲ್ಯಾಣಿ ಕಾಮಗಾರಿ ಸಂಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ದಸರಾ ಹಬ್ಬದ ಸಂದರ್ಭದಲ್ಲೇ ತೆಪ್ಪೋತ್ಸವ ನಡೆಸಲು ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ. ಕಲ್ಯಾಣಿಯ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುವುದು ಕಾರ್ಯಕ್ರಮ ಜರುಗುವ ಸಂದರ್ಭ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗುವುದು’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.