ADVERTISEMENT

ಮಲೆ ಮಹದೇಶ್ವರ ವನ್ಯಧಾಮ: ರುದ್ರನಿಗೆ ಮನಸೋತ ಸಫಾರಿಗರು

ಎಲ್ಲರ ಆಕರ್ಷಿಸುತ್ತಿರುವ ಆನೆ; ಎರಡು ಸಫಾರಿ ವಲಯಗಳಲ್ಲಿ ದರ್ಶನ

ಬಿ.ಬಸವರಾಜು
Published 6 ನವೆಂಬರ್ 2025, 5:26 IST
Last Updated 6 ನವೆಂಬರ್ 2025, 5:26 IST
ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿರುವ ಸಫಾರಿಯಲ್ಲಿ ಪ್ರವಾಸಿಗರಿಗೆ ಕಾಣಸಿಗುವ ಕಾಡಾನೆ ‘ರುದ್ರ’ 
ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿರುವ ಸಫಾರಿಯಲ್ಲಿ ಪ್ರವಾಸಿಗರಿಗೆ ಕಾಣಸಿಗುವ ಕಾಡಾನೆ ‘ರುದ್ರ’    

ಹನೂರು: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಆರಂಭವಾಗಿರುವ ಸಫಾರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪ್ರಾಣಿಗಳನ್ನು ಕಂಡು ಪ್ರವಾಸಿಗರು ಪುಳಕಿತರಾಗುತ್ತಿದ್ದಾರೆ. ಸಫಾರಿಯಲ್ಲಿ ‘ರುದ್ರ’ (ಕಾಡಾನೆ) ದರ್ಶನ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಮಲೆ ಮಹದೇಶ್ವರ ವನ್ಯಧಾಮದಲ್ಲಿರುವ ವಿಶೇಷ ಪ್ರಾಣಿ ಹಾಗೂ ಸಸ್ಯ ಪ್ರಬೇಧಗಳನ್ನು ಜನರು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಹನೂರು ತಾಲ್ಲೂಕಿನ ಪಿ.ಜಿ ಪಾಳ್ಯ ವನ್ಯಜೀವಿ ವಲಯ ವ್ಯಾಪ್ತಿಯ ಲೊಕ್ಕನಹಳ್ಳಿ ಹಾಗೂ ಹನೂರು ಬಫರ್ ವಲಯದ ಅಜ್ಜಿಪುರದಲ್ಲಿ ಸಫಾರಿ ಆರಂಭಿಸಲಾಗಿದೆ.

ಸಫಾರಿ ಆರಂಭದಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಜಿಲ್ಲೆ , ಹೊರ ಜಿಲ್ಲೆಗಳಿಂದಲೂ ಪ್ರವಾಸಿಗರು ನಿರಂತರ ಭೇಟಿ ನೀಡುತ್ತಿದ್ದಾರೆ. ಇಲ್ಲಿ ಪ್ರತಿ ನಿತ್ಯ ನಾಲ್ಕು ಸುತ್ತಿನ ಸಫಾರಿ ನಡೆಯುತ್ತಿದ್ದು, ರಜಾ ದಿನ ಹಾಗೂ ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಮಲೆ ಮಹದೇಶ್ವರನ ದರ್ಶನಕ್ಕೆ ಬರುವ ಭಕ್ತರು, ಪ್ರವಾಸಿಗರು ಅಜ್ಜಿಪುರದಲ್ಲಿರುವ ಸಫಾರಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಹಾಗೆಯೇ ಲೊಕ್ಕನಹಳ್ಳಿಯಲಿರುವ ಸಫಾರಿಗೆ ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ.

ADVERTISEMENT

ಸಫಾರಿಯಲ್ಲಿ ಪ್ರಮುಖವಾಗಿ ಜಿಂಕೆ, ಕಡವೆ, ಹುಲಿ, ಚಿರತೆ ಹಾಗೂ ಆನೆಗಳು ದರ್ಶನ ಕೊಡುತ್ತಿವೆ. ಇವುಗಳ ಪೈಕಿ ಕಾಎಆನೆ ರುದ್ರನ ದರ್ಶನ ಎಲ್ಲರ ಗಮನ ಸೆಳೆಯುತ್ತಿದೆ.

‘ಪಿ.ಜಿ ಪಾಳ್ಯ ವನ್ಯಜೀವಿ ವಲಯ ಹಾಗೂ ಹನೂರು ಬಫರ್ ವಲಯದ ಅಜ್ಜಿಪುರ ಸಫಾರಿ ವಲಯದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಆನೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ‘ರುದ್ರ’ ಎಂಬ ಹೆಸರಿಟ್ಟಿದ್ದು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಪ್ರವಾಸಿಗರ ಪಾಲಿಗೆ ಅಚ್ಚುಮೆಚ್ಚಾಗಿದ್ದಾನೆ. ದಷ್ಟಪುಷ್ಟ ದೇಹ, ಚೂಪಾದ ಆಕರ್ಷಕ ದಂತಗಳು, ಭವ್ಯವಾದ ಮೈಕಟ್ಟು ಹಾಗೂ ಸೌಮ್ಯ ಸ್ವಭಾವ ರುದ್ರನ ಗುಣ ಲಕ್ಷಣಗಳು. ಒಮ್ಮೆ ರುದ್ರನ ದರ್ಶನ ಪಡೆದವರು ಮತ್ತೊಮ್ಮೆ ಬಂದಾಗಲೂ ರುದ್ರನನ್ನು ನೋಡಲು ಹಾತೊರೆಯುತ್ತಾರೆ’ ಎನ್ನುತ್ತಾರೆ ಸಫಾರಿ ಸಿಬ್ಬಂದಿ.

‘ಸಫಾರಿ ಮಾಡುವಾಗ ವಾಹನದ ಶಬ್ದ ಕೇಳಿದಾಕ್ಷಣ ಎಷ್ಟೇ ದೂರದಲ್ಲಿದ್ದರೂ ಸಮೀಪಕ್ಕೆ ಬಂದು ನಿಲ್ಲುತ್ತಾನೆ. ಕೆಲವೊಮ್ಮೆ ತಾಸು ಕಳೆದರೂ ದಾರಿ ಬಿಟ್ಟು ಕದಲುವುದಿಲ್ಲ. ಕೆಲವು ಸಂದರ್ಭದಲ್ಲಿ ರಾತ್ರಿಯವರೆಗೆ ಕಾದು ನಂತರ ಸಫಾರಿಯಿಂದ ಮರಳಿದ ಘಟನೆಗಳು ನಡೆದಿವೆ. ರುದ್ರನಿಗೆ ಕಿರಿಕಿರಿ ನೀಡದಿದ್ದರೆ ಎಷ್ಟು ಹೊತ್ತಾದರೂ ಕಣ್ತುಂಬಿಕೊಳ್ಳಬಹುದು’ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

‘ಸಮೀಪ ಬಂದರೂ ಅಪಾಯ ಮಾಡಿಲ್ಲ’

ಒಮ್ಮೊಮ್ಮೆ ಅಜ್ಜಿಪುರ ಸಫಾರಿಯಲ್ಲಿ ಕಾಣಿಸಿಕೊಳ್ಳುವ ರುದ್ರ ಮತ್ತೊಮ್ಮೆ ಲೊಕ್ಕನಹಳ್ಳಿ ಸಫಾರಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮನರಂಜನೆ ನೀಡುತ್ತಿದೆ. ಕೆಲವು ಸಲ ಸಫಾರಿ ಹಾದಿಯಲ್ಲಿ ವಾಹನಗಳ ಎದುರಿಗೇ ಬಂದು ನಿಲ್ಲುವ  ಮೂಲಕ ಎಲ್ಲರಿಗೂ ದಿಗಿಲು ಹುಟ್ಟಿಸುತ್ತಾನೆ. ಆದರೆ ಇದುವರೆಗೂ  ಯಾರಿಗೂ ತೊಂದರೆ ಮಾಡಿಲ್ಲ. ಪ್ರವಾಸಿಗರನ್ನು ಕಂಡರೆ ಒಂದೇಕಡೆ ನಿಂತು ದರ್ಶನ ನೀಡುತ್ತಾನೆ. ಜೀಪ್ ಬಳಿ ಬಂದರೂ ಅಪಾಯ ಮಾಡುವುದಿಲ್ಲ ಆದರೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ದೂರದಿಂದಲೇ ರುದ್ರನ ದರ್ಶನ ಮಾಡಿಸುತ್ತೇವೆ ಎನ್ನುತ್ತಾರೆ ಸಫಾರಿ ಜೀಪ್ ಚಾಲಕರು.

ಎರಡು ಸಫಾರಿ ಕೇಂದ್ರಗಳಿಗೂ ಎರಡರಿಂದ ಮೂರು ಬಾರಿ ಹೋಗಿದ್ದೇನೆ. ಹೋದಾಗಲೆಲ್ಲ ರುದ್ರ ಕಾಣಿಸಿಕೊಳ್ಳುತ್ತಾನೆ. ಸಫಾರಿಯ ಕೇಂದ್ರ ಬಿಂದುವಾಗಿರುವ ರುದ್ರ ಆನೆ ಬಹಳ ಸೌಮ್ಯ ಸ್ವಭಾವದ ಪ್ರಾಣಿ.
–ಶ್ರೀಧರ್ ಕಾಮಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.