ADVERTISEMENT

ಚಿಕ್ಕಬಳ್ಳಾಪುರದ ಅಲೀಪುರಕ್ಕೂ ಇರಾನ್‌ಗೂ ಇದೆ ದಶಕದ ನಂಟು

ಡಿ.ಎಂ.ಕುರ್ಕೆ ಪ್ರಶಾಂತ
Published 2 ಮಾರ್ಚ್ 2026, 5:53 IST
Last Updated 2 ಮಾರ್ಚ್ 2026, 5:53 IST
ಅಲೀಪುರದ ನೋಟ
ಅಲೀಪುರದ ನೋಟ   

ಚಿಕ್ಕಬಳ್ಳಾಪುರ: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದಾಗ ಅಲ್ಲಿನ ಬೆಳವಣಿಗೆಗಳ ಬಗ್ಗೆ ಹೆಚ್ಚು ಗಮನ ನೀಡುವುದು ಮತ್ತು ಇರಾನ್‌ಗೆ ಮಿಡಿಯುತ್ತದೆ ಗೌರಿಬಿದನೂರು ತಾಲ್ಲೂಕಿನ ಅಲೀಪುರ.

ಎಲ್ಲಿಯ ಅಲೀಪುರ ಎಲ್ಲಿಯ ಇರಾನ್. ಆದರೆ ಈ ಪಟ್ಟಣಕ್ಕೂ ಮತ್ತು ಇರಾನ್‌ಗೂ ಹಲವು ದಶಕಗಳ ಸಂಬಂಧವಿದೆ. ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಸಾವಿಗೆ ಇಲ್ಲಿನ ಪ್ರತಿ ಮನೆಗಳಲ್ಲಿಯೂ ಜನರು ಮರುಗಿದ್ದಾರೆ. ಈ ಹಿಂದೆ ತಮ್ಮೂರಿಗೆ ಅಯಾತೊಲ್ಲಾ ಅಲಿ ಖಮೇನಿ ಅವರು ಬಂದ ಕ್ಷಣಗಳನ್ನು ಸ್ಮರಿಸುತ್ತಿದ್ದಾರೆ. 

ಈ ಎಲ್ಲ ಕಾರಣದಿಂದಲೇ ರಾಜ್ಯದಲ್ಲಿ ಅಲೀಪುರ ಸುದ್ದಿ ಆಗುತ್ತಿದೆ. ಖಮೇನಿ ಅವರ ಹತ್ಯೆಯನ್ನು ‘ನಮ್ಮ ಧರ್ಮಗುರುವಿನ ಹತ್ಯೆಯಲ್ಲ; ಬಲಿದಾನ’ ಎಂದು ಇಲ್ಲಿನ ಜನರು ಬಣ್ಣಿಸುತ್ತಿದ್ದಾರೆ. 

ADVERTISEMENT

ಪಟ್ಟಣ ಪಂಚಾಯಿತಿ ಎನಿಸಿರುವ ಅಲೀಪುರದಲ್ಲಿ 25 ಸಾವಿರ ಶಿಯಾ ಮುಸ್ಲಿಮರು ಇದ್ದಾರೆ. ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಶಿಯಾ ಮುಸ್ಲಿಮರು ನೆಲೆಸಿರುವ ಪಟ್ಟಣವಿದು. ಖಮೇನಿ ಇಲ್ಲಿನ ಶಿಯಾ ಮುಸ್ಲಿಮರಿಗೂ ಪರಮೋಚ್ಚ ಧರ್ಮಗುರು.

ಶಿಕ್ಷಣ, ಧಾರ್ಮಿಕ ಶಿಕ್ಷಣ, ಧಾರ್ಮಿಕ ಪ್ರವಾಸದ ಕಾರಣಕ್ಕೆ ಅಲೀಪುರದ ಶಿಯಾ ಮುಸ್ಲಿಮರು ಪ್ರಮುಖವಾಗಿ ಇರಾನ್‌ಗೆ ತೆರಳುವರು. ಅಯಾತೊಲ್ಲಾ ಅಲಿ ಖಮೇನಿ ಗುರು ಅಯಾತೊಲ್ಲಾ ಇಮಾಮ್ ಖಮೇನಿ ಅವರ ಹೆಸರಿನಲ್ಲಿ ಗ್ರಾಮದಲ್ಲಿ ಆಸ್ಪತ್ರೆ ಸಹ ಇದೆ.  

ಈ ಆಸ್ಪತ್ರೆಯ ಕಟ್ಟಡದ ಮೇಲೆ ಅಯಾತೊಲ್ಲಾ ಇಮಾಮ್ ಖಮೇನಿ ಅವರ ದೊಡ್ಡ ಚಿತ್ರವಿದೆ. ಅಯಾತೊಲ್ಲಾ ಅಲಿ ಖಮೇನಿ ಅವರ ಭೇಟಿ, ಇರಾನ್ ಜೊತೆಗಿನ ನಂಟಿನ ಕಾರಣ ಅಲೀಪುರ ಗ್ರಾಮವು ರಾಜ್ಯದ ಗಮನ ಸೆಳೆದಿದೆ.

ಆದರೆ ಈ ಗ್ರಾಮದ ಬಗ್ಗೆ ಮಾಹಿತಿ ಹೆಕ್ಕಿದರೆ ನಾನಾ ಸ್ವಾರಸ್ಯದ ಅಂಶಗಳು ತೆರೆದುಕೊಳ್ಳುತ್ತದೆ.

ಪಟ್ಟಣ ಪಂಚಾಯಿತಿಯಾಗಿರುವ ಅಲೀಪುರದಲ್ಲಿ ಇಂದಿಗೂ ಒಂದು ಮದ್ಯದ ಅಂಗಡಿ, ಚಿತ್ರಮಂದಿರ, ಪೊಲೀಸ್ ಠಾಣೆ ಇಲ್ಲ. ಇಲ್ಲಿ ನಡೆಯುವ ಮೊಹರಂ ರಾಜ್ಯದಲ್ಲಿ ಪ್ರಸಿದ್ಧವಾದುದು.

ದೊಡ್ಡಹಳ್ಳಿಗಳಲ್ಲಿ ಸಾಮಾನ್ಯವಾಗಿ ಮದ್ಯದ ಅಂಗಡಿಗಳು ಆರಂಭವಾಗುತ್ತವೆ. ಆದರೆ ಅಲೀಪುರವು ವೇಗವಾಗಿ ಬೆಳೆಯುತ್ತಿದ್ದರೂ ಮದ್ಯದ ಅಂಗಡಿಗಳ ಆರಂಭಕ್ಕೆ ಅವಕಾಶ ನೀಡಿಲ್ಲ.

ಪೊಲೀಸ್ ಠಾಣೆಯೂ ಇಲ್ಲ: ಗ್ರಾಮದ ಬಹುತೇಕ ಮಂದಿ ಇರಾನ್, ಅರಬ್ ದೇಶಗಳು ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಜೊತೆ ವ್ಯಾಪಾರ, ವಹಿವಾಟು, ಶಿಕ್ಷಣದ ಕಾರಣಕ್ಕೆ ಸಂಪರ್ಕ ಹೊಂದಿದ್ದಾರೆ. ಗ್ರಾಮದ ಕೆಲವರು ಹರಳುಗಳ ವ್ಯಾಪಾರ ಸಹ ನಡೆಸುವರು. ದೊಡ್ಡ ವಹಿವಾಟು ನಡೆದರೂ ಪೊಲೀಸ್ ಠಾಣೆ ಇಲ್ಲ. ಪಕ್ಕದ ಮಂಚೇನಹಳ್ಳಿ ಠಾಣೆ ವ್ಯಾಪ್ತಿಗೆ ಅಲೀಪುರ ಒಳಪಡುತ್ತದೆ.

ಏನೇ ಸಮಸ್ಯೆಗಳು ಬಂದರೂ ಅಂಜುಮನ್‌ ಜಾಫರಿಯಾ ಸಂಸ್ಥೆಯ ನೇತೃತ್ವದಲ್ಲಿ ಪರಿಹರಿಸಲಾಗುತ್ತದೆ. ಅಲೀಪುರದಲ್ಲಿ ಅಂಜುಮನ್ ಎ ಜಾಫರಿಯಾ ಸಮಿತಿಯ ಸಾರಥ್ಯದಲ್ಲಿ ಗ್ರಾಮಕ್ಕೆ ಪ್ರತ್ಯೇಕವಾದ ‘ಅಲಿ ಟಿವಿ’ ಎನ್ನುವ ಕೇಬಲ್ ಚಾನಲ್ ಸಹ ಇದೆ.

ಪ್ರಭಾವಿಗಳ ಭೇಟಿ: ಅಯಾತೊಲ್ಲಾ ಅಲಿ ಖಮೇನಿ ಅವರಷ್ಟೇ ಅಲ್ಲ ದೇಶ, ವಿದೇಶದ ಪ್ರಭಾವಿ ನಾಯಕರೂ ಅಲೀಪುರಕ್ಕೆ ಭೇಟಿ ನೀಡಿದ್ದಾರೆ.

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಗೃಹ ಸಚಿವ ಡಾ.ಜಿ.ಪರಮೇಶ್ವರ ಸೇರಿದಂತೆ ರಾಜ್ಯದ ಕಾಂಗ್ರೆಸ್, ಜೆಡಿಎಸ್‌ನ ಪ್ರಮುಖ ನಾಯಕರು ಇಲ್ಲಿ ನಡೆದ ವಿವಾಹಗಳಲ್ಲಿ ಭಾಗಿಯಾಗಿದ್ದಾರೆ.  

2018ರಲ್ಲಿ ನಡೆದ ಗ್ರಾಮದ ನೋಬೆಲ್ ಶಾಲೆಯಲ್ಲಿ ನಡೆದ ಏಕತಾ ದಿನಾಚರಣೆಯಲ್ಲಿ ಥಾಯ್ಲೆಂಡ್‌ ಮಾಜಿ ಉಪ ಪ್ರಧಾನಿ ಡಾ.ಸೋಂತಿ ಬೂನ್ಯಾರತ್‌ಗಲಿನ್‌ ಭಾಗಿಯಾಗಿದ್ದರು. ಡಬ್ಲ್ಯು ಡಬ್ಲ್ಯು ಇ ಸೂಪರ್ ಸ್ಟಾರ್ ಕುಸ್ತಿ ಪಟು ‘ದಿ ಗ್ರೇಟ್ ಖಲಿ’ 2021ರ ಮಾರ್ಚ್‌ನಲ್ಲಿ ಗ್ರಾಮದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ‘ದಿ ಗ್ರೇಟ್ ಖಲಿ’ ನೋಡಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಅಂದು ಸೇರಿದ್ದರು.

ಹೀಗೆ ಇರಾನ್‌ನಲ್ಲಿ ಸಂಘರ್ಷ ನಡೆಯುತ್ತಿರುವ ಈ ಹೊತ್ತಿನಲ್ಲಿ ಗೌರಿಬಿದನೂರು ತಾಲ್ಲೂಕಿನ ಅಲೀಪುರದ ಜನರ ಮನ ಆ ದೇಶದ ಪರವಾಗಿ ಮಿಡಿಯುತ್ತಿದೆ. 

ಕೋವಿಡ್‌ನಲ್ಲಿಯೂ ಗಮನ ಸೆಳೆದಿದ್ದ ಗ್ರಾಮ

2020ರ ಕೋವಿಡ್ ವೇಳೆಯೂ ಅಲೀಪುರ ಗಮನ ಸೆಳೆದಿತ್ತು. ಈ ಗ್ರಾಮದಲ್ಲಿ ಪರೀಕ್ಷೆಗೆ ಒಳಪಟ್ಟವರಲ್ಲಿ ಒಂದೇ ದಿನ 55 ಮಂದಿಗೆ ಸೋಂಕು ತಗುಲಿತ್ತು. ಆಗಲೂ ವಿದೇಶಗಳಿಂದ ಗ್ರಾಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿದ್ದರು. ಹೀಗೆ ಬಂದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಗೌರಿಬಿದನೂರು ತಾಲ್ಲೂಕಿನಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬಂದ ಗ್ರಾಮವೂ ಇದೇ ಆಗಿತ್ತು.  

ಸಹಾಯವಾಣಿ ಆರಂಭ

ಚಿಕ್ಕಬಳ್ಳಾಪುರ: ಯುದ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಮಧ್ಯ ಪ್ರಾಚ್ಯ ದೇಶಗಳಲ್ಲಿ  ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಜನರ ನೆರವಿಗೆ ಧಾವಿಸಲು ಜಿಲ್ಲಾಡಳಿತ ಸಹಾಯವಾಣಿ ಆರಂಭಿಸಿದೆ. ಅಲೀಪುರದ 120ಕ್ಕೂ ಹೆಚ್ಚು ಜನರು ಇರಾನ್‌ನಲ್ಲಿ ನೆಲೆಸಿದ್ದಾರೆ.  ಚಿಕ್ಕಬಳ್ಳಾಪುರ ಜಿಲ್ಲೆಯ ನಿವಾಸಿಗಳು ಯುದ್ಧಪೀಡಿತ ಮಧ್ಯ ಪ್ರಾಚ್ಯ ದೇಶಗಳಲ್ಲಿ ಸಿಲುಕಿದ್ದಾರೆ. ಅವರ ರಕ್ಷಣೆ ಮತ್ತು ಯೋಗ ಕ್ಷೇಮದ ದೃಷ್ಟಿಯಿಂದ ಮುಂದಿನ ಅಗತ್ಯ ಕ್ರಮಕ್ಕಾಗಿ ಸಂಬಂಧಪಟ್ಟವರು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಜಿಲ್ಲಾಡಳಿತ ಕೋರಿದೆ.

ಕರೆ ಮಾಡಿದವರ ಹೆಸರು ವಿದೇಶಕ್ಕೆ ತೆರಳಿದವರ ಹೆಸರು ವಯಸ್ಸು ತಂದೆ ಗಂಡನ ಹೆಸರು ಪಾಸ್‌ಪೋರ್ಟ್ ಸಂಖ್ಯೆ ವಿದೇಶಕ್ಕೆ ತೆರಳಿದವರ ಮೊಬೈಲ್ ಸಂಖ್ಯೆ (ಭಾರತ ಮತ್ತು ವಿದೇಶ) ಪ್ರಸ್ತುತ ಅವರ ಸ್ಥಿತಿ ಯಾವ ದೇಶಕ್ಕೆ ತೆರಳಿದ್ದಾರೆ ಪ್ರಸ್ತುತ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಬೇಕು.  ಸಹಾಯಕವಾಣಿ 08156–277002 ಕರೆ ಮೂಲಕ ಅಥವಾ 9591178093 9845531026ಗೆ ವಾಟ್ಸ್‌ಆ್ಯಪ್ ಸಂದೇಶದ ಮೂಲಕ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಪ್ರಭು ಕೋರಿದ್ದಾರೆ.

ಬೆಳ್ಳಿಕುಂಟೆ ಅಲೀಪುರವಾಯಿತು

ಅಲೀಪುರದ ಮೂಲ ಹೆಸರು ಬೆಳ್ಳಿಕುಂಟೆ. ಈ ಹಿಂದೆ ಬಿಜಾಪುರ ಆದಿಲ್‌ಶಾಹಿಗಳ ಅವಧಿಯಲ್ಲಿ ಅಲ್ಲಿನ ಜನರು ಇಲ್ಲಿಗೆ ವಲಸೆ ಬಂದರು. ಮುಸ್ಲಿಮರ ಸಂಖ್ಯೆ ಹೆಚ್ಚಿದಂತೆ ಬೆಳ್ಳುಕುಂಟೆ ಅಲೀಪುರವಾಗಿ ರೂಪಾಂತರವಾಯಿತು.

ಅಲೀಪುರದಲ್ಲಿರುವ ಇರಾನ್‌ ಧಾರ್ಮಿಕ ಗುರು ಅಯಾತೊಲ್ಲಾ ಇಮಾಮ್ ಖಮೇನಿ ಹೆಸರಿನ ಆಸ್ಪತ್ರೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.