ADVERTISEMENT

ವ್ಹೀಲಿ: ಚಿಕ್ಕಬಳ್ಳಾಪುರದಲ್ಲಿ ನಾಲ್ಕೂವರೆ ವರ್ಷದಲ್ಲಿ 19 ಪ್ರಕರಣ

ಡಿ.ಎಂ.ಕುರ್ಕೆ ಪ್ರಶಾಂತ
Published 15 ಮೇ 2025, 6:57 IST
Last Updated 15 ಮೇ 2025, 6:57 IST
ವ್ಹೀಲಿಂಗ್‌ ಮಾಡುತ್ತ ಕರ್ಕಶ ಶಬ್ದ ಹೊರಹುಮ್ಮಿಸುತ್ತಿದ್ದ ಬೈಕ್‌ಗಳ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದು ಚಿಕ್ಕಬಳ್ಳಾಪುರದಲ್ಲಿ ನಾಶಗೊಳಿಸಿದ ಪೊಲೀಸರು (ಸಂಗ್ರಹ ಚಿತ್ರ)
ವ್ಹೀಲಿಂಗ್‌ ಮಾಡುತ್ತ ಕರ್ಕಶ ಶಬ್ದ ಹೊರಹುಮ್ಮಿಸುತ್ತಿದ್ದ ಬೈಕ್‌ಗಳ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದು ಚಿಕ್ಕಬಳ್ಳಾಪುರದಲ್ಲಿ ನಾಶಗೊಳಿಸಿದ ಪೊಲೀಸರು (ಸಂಗ್ರಹ ಚಿತ್ರ)   

ಚಿಕ್ಕಬಳ್ಳಾಪುರ: ಬುರ್ ಬುರ್ ಎಂದು ಸದ್ದು ಮಾಡುತ್ತ ಒಂದು ಚಕ್ರ ಮೇಲೆತ್ತಿ ಮತ್ತೊಂದು ಚಕ್ರದಲ್ಲಿ ವ್ಹೀಲಿ ಮಾಡುತ್ತ ಹೆದ್ದಾರಿಗಳಲ್ಲಿ ಯುವಕರು ಸಾಗುತ್ತಿದ್ದರೆ ಬಸ್‌, ಕಾರುಗಳಲ್ಲಿ ಪ್ರಯಾಣಿಸುವವರು, ‘ಈ ಹುಡುಗರಿಗೆ ಏನಾಗಿದೆಯೊ, ಸಾಯುವುದಕ್ಕೆ ಹೀಗೆ ಆಡುತ್ತವೆ’ ಎಂದು ಶಪಿಸುತ್ತಲೇ ಮುನ್ನಡೆಯುವರು. 

ಹೌದು, ಚಿಕ್ಕಬಳ್ಳಾಪುರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 44 ಸೇರಿದಂತೆ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಈ ಬೈಕ್ ವ್ಹೀಲಿ ನಡೆಸುವವರು ಕಂಡುಬರುತ್ತಾರೆ. ಅಷ್ಟೇಕೆ ಕೆಲವು ವೇಳೆ ರಾತ್ರಿ ನಗರದ ಒಳಗೂ ವ್ಹೀಲಿ ನಡೆಸುತ್ತಾರೆ.

ಬೈಕ್ ವ್ಹೀಲಿಗೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳು ದಾಖಲಾದರೆ ಬಹಳಷ್ಟು ಪ್ರಕರಣಗಳು ದಾಖಲಾಗುತ್ತಿಲ್ಲ. ಕಾರಣ ಪೊಲೀಸರು ಇದ್ದಾರೆ ಎನ್ನುವುದನ್ನು ತಿಳಿದ ತಕ್ಷಣವೇ ಯುವಕರು ಈ ವ್ಹೀಲಿ ನಿಲ್ಲಿಸುತ್ತಾರೆ. ಅಲ್ಲದೆ ಸಾರ್ವಜನಿಕರು ಸಹ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು ಕಡಿಮೆ. ಪೊಲೀಸರು ತಮಗೆ ದೊರೆತ ಮಾಹಿತಿ ಅಥವಾ ವಿಡಿಯೊ ಆಧರಿಸಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.

ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬೈಕ್ ವ್ಹೀಲಿಗೆ ಸಂಬಂಧಿಸಿದಂತೆ ಒಟ್ಟು 19 ಪ್ರಕರಣಗಳು ದಾಖಲಾಗಿವೆ. 28 ಆರೋಪಿಗಳು ಈ ಪ್ರಕರಣಗಳಲ್ಲಿ ಇದ್ದಾರೆ. 

ಸಂಚಾರ ಪೊಲೀಸರು ಸೇರಿದಂತೆ ಜಿಲ್ಲೆಯ ಪೊಲೀಸ್ ಇಲಾಖೆ ವ್ಹೀಲಿ ಮಾಡುವವರ ಮೇಲೆ ಕಣ್ಣಿಟ್ಟಿದೆ. ಆಗಾಗ್ಗೆ ತಮಗೆ ದೊರೆಯುವ ಮಾಹಿತಿ ಆಧರಿಸಿ ವ್ಹೀಲಿ ನಡೆಸುವವರ ಮೇಲೆ ಕಾರ್ಯಾಚರಣೆ ಸಹ ನಡೆಸುತ್ತದೆ. ಇತ್ತೀಚೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಜಿಲ್ಲೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದರು. 

ಆ ಸಭೆಯಲ್ಲಿ ಬೈಕ್ ವ್ಹೀಲಿ ವಿಚಾರವೂ ಪ್ರಮುಖವಾಗಿ ಚರ್ಚೆಗೆ ಬಂದಿತ್ತು. ಈ ಬಗ್ಗೆ ಶಾಲಾ, ಕಾಲೇಜುಗಳಲ್ಲಿ ಪೊಲೀಸರು ಜಾಗೃತಿ ಸಹ ಮೂಡಿಸಿದ್ದಾರೆ. ಹೀಗಿದ್ದರೂ ಜಿಲ್ಲೆಯಲ್ಲಿ ಮಾತ್ರ ವ್ಹೀಲಿಂಗ್ ಪ್ರಕರಣಗಳು ದಾಖಲಾಗುತ್ತಲೇ ಇವೆ.

2025ರ ಜನವರಿಯಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ಬೈಕ್ ವ್ಹೀಲಿಗೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ. ಇದು ಜಿಲ್ಲೆಯಲ್ಲಿ ಈ ವರ್ಷ ದಾಖಲಾಗಿರುವ ಮೊದಲ ಪ್ರಕರಣವಾಗಿದೆ. 2024ನೇ ಸಾಲಿನಲ್ಲಿ ಪೊಲೀಸರು ವ್ಹೀಲಿಗೆ ಸಂಬಂಧಿಸಿದಂತೆ 13 ಮಂದಿಯನ್ನು ವಶಕ್ಕೆ ಪಡೆದಿದ್ದರು. 

ಚಿಕ್ಕಬಳ್ಳಾಪುರ ಬೆಂಗಳೂರಿಗೆ ಸಮೀಪವಿದೆ. ಪ್ರಸಿದ್ಧ ನಂದಿ ಗಿರಿಧಾಮ, ಈಶಾ ಯೋಗ ಕೇಂದ್ರಕ್ಕೆ ಬರುವ ಪ್ರವಾಸಿಗರಲ್ಲಿ ಕೆಲವರು ವ್ಹೀಲಿ ನಡೆಸುವರು. ಹೀಗೆ ಅಪಾಯಕ್ಕೆ ಆಹ್ವಾನಿಸುವ ವ್ಹೀಲಿ ಪ್ರಕರಣಗಳು ಜಿಲ್ಲೆಯಲ್ಲಿ ಆಗಾಗ್ಗೆ ವರದಿ ಆಗುತ್ತಲೇ ಇವೆ.

ಸೈಲೆನ್ಸರ್ ನಾಶ: ನಗರ ಸೇರಿದಂತೆ ಬೈಪಾಸ್ ರಸ್ತೆಗಳಲ್ಲಿ ಬೈಕ್ ವ್ಹೀಲಿ ಮಾಡುತ್ತ ಕರ್ಕಶ ಶಬ್ದ ಹೊರ ಹೊಮ್ಮಿಸುತ್ತಿದ್ದ ಬೈಕ್‌ಗಳ ಸೈಲೆನ್ಸರ್‌ಗಳನ್ನು ಕಿತ್ತು ಅವುಗಳನ್ನು ಪೊಲೀಸರು ನಾಶಗೊಳಿಸಿದ್ದರು. 

ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವೃತ್ತದಲ್ಲಿ ಜೆಸಿಬಿ ಮೂಲಕ ಸೈಲೆನ್ಸರ್‌ಗಳನ್ನು ನಾಶಪಡಿಸಲಾಗಿತ್ತಯ. ‌ಬೈಕ್ ವ್ಹೀಲಿ ಮಾಡುತ್ತ ಕರ್ಕಶ ಶಬ್ದವನ್ನು ಕೆಲವರು ಹೊರ ಹುಮ್ಮಿಸುತ್ತಿದ್ದರು. ಇದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸಿದ್ದರು. 

ಬೈಕ್ ವ್ಹೀಲಿ ಬಗ್ಗೆ ದೂರಗಳು ಸಹ ಹೆಚ್ಚಾಗಿದ್ದವು. ಕಾರ್ಯಾಚರಣೆಗೆ ಇಳಿದ ಪೊಲೀಸರು ವ್ಹೀಲಿ ಮಾಡುತ್ತಿದ್ದ ಬೈಕ್‌ಗಳನ್ನು ವಶಕ್ಕೆ ಪಡೆದು ಸೈಲೆನ್ಸರ್‌ಗಳನ್ನು ಕಿತ್ತು ಹಾಕಿದ್ದರು. 

‘ಸಾರ್ವಜನಿಕರು ಮಾಹಿತಿ ನೀಡಿ’
ಬೈಕ್ ವ್ಹೀಲಿಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಬಂಧಿತರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಬೈಕ್ ವ್ಹೀಲಿ ಮಾಡುತ್ತಿರುವುದು ಕಂಡು ಬಂದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮನವಿ ಮಾಡಿದ್ದಾರೆ. ಬೈಕ್ ವ್ಹೀಲಿನಿಂದ ಅಪಘಾತಗಳು ಸಂಭವಿಸುತ್ತವೆ. ಸಾರ್ವಜನಿಕರಿಗೆ ವಾಹನಗಳ ಸವಾರರಿಗೆ ತೊಂದರೆ ಆಗುತ್ತದೆ. ಇಂತಹ ಚಟುವಟಿಕೆಗಳನ್ನು ಮಟ್ಟ ಹಾಕಲಾಗುವುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.