ADVERTISEMENT

ಚಿಕ್ಕಬಳ್ಳಾಪುರ | ಪ್ರವಾಸಿ ತಾಣ, ದೇಗುಲಗಳತ್ತ ಜನರು

ಹೊಸ ವರ್ಷದ ಸಂಭ್ರಮಾಚರಣೆ; ಈಶಾ ಯೋಗ ಕೇಂದ್ರದಲ್ಲಿ ಜನದಟ್ಟಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 6:41 IST
Last Updated 2 ಜನವರಿ 2026, 6:41 IST
ನಂದಿಬೆಟ್ಟದಲ್ಲಿ ಗುರುವಾರ ಟಿಕೆಟ್‌ಗಾಗಿ ಸಾಲುಗಟ್ಟಿದ್ದ ಪ್ರವಾಸಿಗರು
ನಂದಿಬೆಟ್ಟದಲ್ಲಿ ಗುರುವಾರ ಟಿಕೆಟ್‌ಗಾಗಿ ಸಾಲುಗಟ್ಟಿದ್ದ ಪ್ರವಾಸಿಗರು   

ಚಿಕ್ಕಬಳ್ಳಾಪುರ: ಹೊಸ ವರ್ಷದ ಮೊದಲ ದಿನವಾದ ಗುರುವಾರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಪ್ರಮುಖ ದೇವಾಲಯಗಳಲ್ಲಿ ಜನದಟ್ಟಣೆ ಕಂಡುಬಂದಿತು.  

ನಂದಿ ಬೆಟ್ಟ ಪ್ರವೇಶಕ್ಕೆ ಬೆಳಿಗ್ಗೆ 10ರವರೆಗೆ ನಿಷೇಧವಿತ್ತು. ಪ್ರವೇಶ ಮುಕ್ತವಾದ ತಕ್ಷಣ ಪ್ರವಾಸಿಗರು ಗಿರಿಧಾಮಕ್ಕೆ ಭೇಟಿ ನೀಡಿದ್ದರು. 

ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯ, ಸುಲ್ತಾನ್‌ಪೇಟೆ ಸಮೀಪದ ಕಣಿವೆ ಬಸವಣ್ಣ ದೇವಾಲಯ ಸೇರಿದಂತೆ ನಗರದ ಅನೇಕ ದೇವಾಲಯಗಳಲ್ಲಿ ಜನರು ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಗೋಚರಿಸಿತು.

ADVERTISEMENT

ಹೊಸ ವರ್ಷಾಚರಣೆ ಪ್ರಯುಕ್ತ ಪೊಲೀಸ್ ಇಲಾಖೆ ನಂದಿಬೆಟ್ಟ, ಸ್ಕಂದಗಿರಿ ಮತ್ತು ಗುಡಿಬಂಡೆಯ ಆವಲಬೆಟ್ಟಕ್ಕೆ ಜನವರಿ 1ರ ಬೆಳಿಗ್ಗೆ 10ರವರೆಗೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿತ್ತು. ಜತೆಗೆ ಈ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರ ಓಡಾಟ ನಿರ್ಬಂಧಿಸಲು ಚೆಕ್‌ ಪೋಸ್ಟ್‌ಗಳನ್ನು ತೆರೆದಿತ್ತು.

ಆದರೆ ಹೊಸ ಸಂವತ್ಸರದ ಸೂರ್ಯೋದಯ ನೋಡುವ ಕಾತುರದಿಂದ ನೂರಾರು ವಾಹನಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬಂದಿತ್ತು.  

ಹೊಸ ವರ್ಷಾಚರಣೆ ವೇಳೆ ನಡೆಯುವ ಅವಘಡಗಳನ್ನು ಹಾಗೂ ಅನೈತಿಕ ಚಟುವಟಿಕೆ ನಿಯಂತ್ರಿಸುವ ಉದ್ದೇಶದಿಂದ ಪೊಲೀಸರು ನಂದಿಬೆಟ್ಟ ಸುತ್ತ ಪಹರೆ ಹಾಕಿದ್ದರು.  

ಮತ್ತೊಂದೆಡೆ ಆವಲಗುರ್ಕಿಯ ಈಶಾ ಯೋಗ ಕೇಂದ್ರಕ್ಕೆ ಭಕ್ತರು ಮತ್ತು ಪ್ರವಾಸಿಗರ ದಂಡು ದೊಡ್ಡ ಮಟ್ಟದಲ್ಲಿ ಹರಿದು ಬಂದಿತ್ತು. 

ಹೊಸ ವರ್ಷಾಚರಣೆ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ  ಭರ್ಜರಿ ಮದ್ಯ ಮಾರಾಟ ನಡೆದಿದೆ. ಎಂಆರ್‌ಪಿ ಅಂಗಡಿಗಳಲ್ಲಿ ಜೋರು ವ್ಯಾಪಾರವಾಗಿದ್ದರೆ, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಮಾಮೂಲಿ ದಿನಕ್ಕಿಂತ ಹೆಚ್ಚು ವ್ಯಾಪಾರ ನಡೆಯಿತು. 

ಈಶಾ ಯೋಗ ಕೇಂದ್ರದಲ್ಲಿ ಪ್ರವಾಸಿಗರ ದಟ್ಟಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.