ADVERTISEMENT

ಮಕ್ಕಳ ಬೆಳವಣಿಗೆ: ಪೋಷಕರು ಶಿಕ್ಷಕರ ಸಮನ್ವಯತೆ ಅಗತ್ಯ: ತಳಗವಾರ ಆನಂದ್

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 7:14 IST
Last Updated 15 ನವೆಂಬರ್ 2025, 7:14 IST
ಚಿಂತಾಮಣಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕ–ಪೋಷಕರ ಮಹಾಸಭೆಯಲ್ಲಿ ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಮಾತನಾಡಿದರು
ಚಿಂತಾಮಣಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕ–ಪೋಷಕರ ಮಹಾಸಭೆಯಲ್ಲಿ ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಮಾತನಾಡಿದರು   

ಚಿಂತಾಮಣಿ: ಶಾಲಾ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯಂದೆ ಪೋಷಕರು ಮತ್ತು ಶಿಕ್ಷಕರ ಸಭೆಯನ್ನು ಶುಕ್ರವಾರ ಆಯೋಜಿಸಲಾಯಿತು. 

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್, ‘ಪೋಷಕರು ಮತ್ತು ಶಿಕ್ಷಕರ ನಡುವಿನ ಸಮನ್ವಯದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಉತ್ತಮವಾಗಿರುತ್ತದೆ’ ಎಂದು ಪ್ರತಿಪಾದಿಸಿದರು. 

ವಿದ್ಯಾರ್ಥಿಗಳಿಗೆ ಪೋಷಕರು ಮೊದಲನೇ ಮಾರ್ಗದರ್ಶಕರಾದರೆ, ಶಿಕ್ಷಕರು ಎರಡನೇ ಮಾರ್ಗದರ್ಶಕರಾಗಿರುತ್ತಾರೆ. ಈ ಇಬ್ಬರ ಸಹಕಾರದಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಮನಸ್ಥಿತಿ ಅರ್ಥಮಾಡಿಕೊಂಡು ಕೆಲಸ ಮಾಡಿದರೆ ವಿದ್ಯಾರ್ಥಿಗಳಲ್ಲಿ ಸಕರಾತ್ಮಕ ಬದಲಾವಣೆ ಕಂಡುಬರುತ್ತದೆ ಎಂದರು. 

ADVERTISEMENT

ನೋಡಲ್ ಶಿಕ್ಷಕ ಫಯಾಜ್ ಅಹ್ಮದ್ ಮಾತನಾಡಿ, ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗುವ ಬಗ್ಗೆ ಪೋಷಕರು ಗಮನಹರಿಸಬೇಕು. ಶಾಲೆಗೆ ನಿಯಮಿತವಾಗಿ ಗೈರು ಹಾಜರಾದರೆ ಪಾಠ-ಪ್ರವಚನಗಳಿಂದ ವಂಚಿತರಾಗುತ್ತಾರೆ. ಇದರಿಂದ ಅವರ ಮುಂದಿನ ವಿದ್ಯಾಭ್ಯಾಸವು ಕುಂಠಿತವಾಗುತ್ತದೆ ಎಂದರು.

ಶಿಕ್ಷಕ ನಂಜುಂಡೇಶ್ವರ ಪಾಠ ಆಧಾರಿತ ಮೌಲ್ಯಾಂಕನದ ಬಗ್ಗೆ, ಶಿಕ್ಷಕ ಭಾಸ್ಕರ್ ಗೌಡ ಎಸ್ಎಸ್ಎಲ್‌ಸಿ ಕಾರ್ಯಚಟುವಟಿಕೆ ಬಗ್ಗೆ ಶಿಕ್ಷಕಿ ಸೌಭಾಗ್ಯಮ್ಮ ಸಮನ್ವಯ ಶಿಕ್ಷಣದ ಬಗ್ಗೆ, ಶಿಕ್ಷಕಿ ಸುಗುಣ ಪೋಕ್ಸೊ ಕಾಯಿದೆ ಬಗ್ಗೆ ವಿಷಯಗಳನ್ನು ಮಂಡಿಸಿದರು. ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಮುಖ್ಯಶಿಕ್ಷಕ ಸುಭಾಷ್ ಚಂದ್ರಬೋಸ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಮುನಿರಾಜು ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.