ಅಮಾನತು
ಗೌರಿಬಿದನೂರು: ವರ್ಗಾವಣೆಗಾಗಿ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿದ ಆರೋಪದ ಮೇಲೆ ತಾಲ್ಲೂಕಿನ ಇಡಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಲ್ತಾನ್ ಅಜೀಜ್ ಎಸ್. ಅವರನ್ನು ಕೆಲಸದಿಂದ ಅಮಾತು ಗೊಳಿಸಲಾಗಿದೆ.
ಸರ್ಕಾರಕ್ಕೆ ಸುಳ್ಳು ಮಾಹಿತಿ ಮತ್ತು ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿ ವರ್ಗಾವಣೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸದರಿ ನೌಕರರನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ಅಮಾನತುಗೊಳಿಸಲಾಗಿದೆ. ಅಮಾನತಿನ ಅವಧಿಯಲ್ಲಿ ಜೀವನಾಧಾರ ಭತ್ಯೆ ಪಡೆಯಲು ಅರ್ಹ ಇರುತ್ತಾರೆ. ಮೇಲಧಿಕಾರಿಗಳ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶಿಸಿದ್ದಾರೆ.
‘ನನ್ನ ಪತ್ನಿ ಮೃತಪಟ್ಟಿದ್ದಾರೆ. ಆರು ವರ್ಷದ ಮಗಳು ಇದ್ದಾಳೆ. ಮರು ವಿವಾಹ ಆಗಿಲ್ಲ’ ಎಂದು ಸುಲ್ತಾನ್ ಅಜೀಜ್ ದೃಢೀಕರಿಸಿ ಏಕಪೋಷಕರ ಪ್ರವರ್ಗದ ಅಡಿಯಲ್ಲಿ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳೊಂದಿಗೆ ದಾಖಲೆಗಳನ್ನೂ ಅಡಕಗೊಳಿಸಿದ್ದರು. ಈ ಅರ್ಜಿಯನ್ನು ಅನುಮೋದಿಸಲಾಗಿತ್ತು. ಸೆ.4ರಂದು ನಡೆದ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ ಸುಲ್ತಾನ್ ಅಜೀಜ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ದೊಡ್ಡಹುಲ್ಲೂರು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡಿದ್ದರು.
ಸುಲ್ತಾನ್ ಅಜೀಜ್ ನೀಡಿರುವ ಮಾಹಿತಿ ಸುಳ್ಳಾಗಿದೆ. ಅವರು ಎರಡನೇ ವಿವಾಹವಾಗಿದ್ದಾರೆ. ಇವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳುವಂತೆ ಸುಲ್ತಾನ್ ಅಜೀಜ್ ಅವರ ಅತ್ತೆ (ಮೃತ ಪತ್ನಿಯ ತಾಯಿ) ಜಿ.ಪಂ ಸಿಇಒ ಅವರಿಗೆ ದೂರು ನೀಡಿದ್ದರು. ಎರಡನೇ ಪತ್ನಿ ಎನ್ನಲಾದ ಮಹಿಳೆಯ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಪುಸ್ತಕ, ಆಧಾರ್, ಪಡಿತರ ಚೀಟಿಯ ದಾಖಲೆಗಳನ್ನೂ ದೂರಿನೊಂದಿಗೆ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.