ಚಿಕ್ಕಬಳ್ಳಾಪುರ: ನಾಡಹಬ್ಬ ಮೈಸೂರು ದಸರಾದ ವಿಜಯದಶಮಿ ಮೆರವಣಿಗೆ (ಜಂಬೂ ಸವಾರಿ) ದಿನವೇ ಮಹಾತ್ಮ ಗಾಂಧಿ ಅವರ ಜಯಂತಿಯೂ ಇದೆ. ಅ.2ರ ಜಂಬೂ ಸವಾರಿ ಮೆರವಣಿಗೆಯಲ್ಲಿ ಪ್ರತಿ ಜಿಲ್ಲೆಯ ಸ್ತಬ್ಧಚಿತ್ರಗಳೂ ಭಾಗವಹಿಸಲಿವೆ.
ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಮಹಾತ್ಮ ಗಾಂಧೀಜಿ ಅವರು ನಂದಿ ಬೆಟ್ಟಕ್ಕೆ ಭೇಟಿ ನೀಡಿದ ವಿಚಾರ ಸ್ತಬ್ಧಚಿತ್ರದ ರೂಪು ಪಡೆಯುತ್ತದೆಯೇ ಎನ್ನುವ ಕುತೂಹಲ ಜಿಲ್ಲೆಯ ಪ್ರಜ್ಞಾವಂತರಲ್ಲಿದೆ.
ಈ ಬಾರಿಯ ದಸರಾ ಉತ್ಸವ ಸೆ.22ರಿಂದ ಅ.2ರವರೆಗೆ ನಿಗದಿಯಾಗಿದೆ. ಅ.2ರಂದೇ ಗಾಂಧಿ ಜಯಂತಿ ಆಗಿರುವ ಕಾರಣ ಮಹಾತ್ಮರಿಗೆ ನಮಿಸುವ ಸ್ತಬ್ಧಚಿತ್ರಗಳಿಗೆ ಆದ್ಯತೆ ನೀಡಲು ಮೈಸೂರು ಜಿಲ್ಲಾಡಳಿತ ಹಾಗೂ ಸ್ತಬ್ಧಚಿತ್ರ ಉಪಸಮಿತಿ ಕ್ರಮವಹಿಸಿದೆ ಎನ್ನುತ್ತವೆ ಮೂಲಗಳು.
ಗಾಂಧೀಜಿ ಅವರು ಭೇಟಿ ಕೊಟ್ಟಿದ್ದ ಅಥವಾ ತಂಗಿದ್ದ ಸ್ಥಳ, ಘಟನೆಗಳು, ಐತಿಹಾಸಿಕ ಯಾತ್ರೆ, ಸಭೆ–ಸಮಾರಂಭವನ್ನು ಬಿಂಬಿಸುವ ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸುವಂತೆ ಜಿಲ್ಲಾಡಳಿತದಿಂದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆಯಾ ಜಿಲ್ಲೆಯ ವಿಶೇಷಗಳೊಂದಿಗೆ ರಾಷ್ಟ್ರಪಿತನನ್ನು ಕಟ್ಟಿಕೊಡುವ ಸನ್ನಿವೇಶವನ್ನು ಸೃಷ್ಟಿಸುವಂತೆ ಕೋರಲಾಗಿದೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಮೂಲಗಳು ತಿಳಿಸುತ್ತವೆ.
ರಾಜ್ಯಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಭೇಟಿ ನೀಡಿದಾಗ ಅತಿ ಹೆಚ್ಚು ಸಮಯ ಕಳೆದಿರುವುದು ತಾಲ್ಲೂಕಿನ ನಂದಿಗಿರಿಧಾಮದಲ್ಲಿ. ನಂದಿಬೆಟ್ಟಕ್ಕೆ ಎರಡು ಬಾರಿ ಭೇಟಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಮತ್ತು ಸ್ತಬ್ಧಚಿತ್ರ ಉಪಸಮಿತಿಯ ಕೋರಿಕೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮತ್ತು ಸ್ತಬ್ಧಚಿತ್ರ ಉಪಸಮಿತಿ ಮನ್ನಣೆ ನೀಡಿ ಗಾಂಧೀಜಿ ಗಿರಿಧಾಮಕ್ಕೆ ಭೇಟಿ ನೀಡಿದ ಸ್ತಬ್ಧಚಿತ್ರಗಳನ್ನು ರೂಪಿಸಲು ನಿಶಾನೆ ತೋರುತ್ತದೆಯೇ ಎನ್ನುವ ಕುತೂಹಲವಿದೆ.
ಎರಡು ಬಾರಿ ‘ನಂದಿ’ಗೆ ಗಾಂಧಿ: ಗಾಂಧೀಜಿ ಗಿರಿಧಾಮದಲ್ಲಿ ಸುದೀರ್ಘವಾಗಿ ತಂಗಿದ್ದಾರೆ. ಕರ್ನಾಟಕದಲ್ಲಿ ಗಾಂಧೀಜಿ ಅವರ ಹೆಜ್ಜೆಗುರುತಿನ ಚರಿತ್ರೆ ಹುಡುಕುವವರಿಗೆ ನಂದಿಬೆಟ್ಟದೊಂದಿಗಿನ ಮಹಾತ್ಮರ ನಂಟಿನ ಅಂಶಗಳು ಗಮನ ಸೆಳೆಯುತ್ತವೆ.
ಮಹಾತ್ಮ ಗಾಂಧಿ ಅವರು 1927ರಲ್ಲಿ ಮೊದಲ ಬಾರಿಗೆ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದರು. 45 ದಿನ ವಾಸ್ತವ್ಯ ಹೂಡಿದ್ದರು. ಮತ್ತೆ 1936ರಲ್ಲಿ ರಾಜ್ಯಕ್ಕೆ ಬಂದ ಅವರು 20 ದಿನ ಗಿರಿಧಾಮದಲ್ಲಿ ನೆಲೆಸಿದ್ದರು. ಹೀಗೆ ಒಟ್ಟು 65 ದಿನ ನಂದಿಬೆಟ್ಟದಲ್ಲಿ ಆರೋಗ್ಯ ಸುಧಾರಿಸಿಕೊಳ್ಳಲು ತಂಗಿದ್ದರು ಎನ್ನುವ ಮಾಹಿತಿ ಇತಿಹಾಸಕಾರ ವೇಮಗಲ್ ಸೋಮಶೇಖರ್ ಅವರ ‘ನಂದಿಗಿರಿಧಾಮದಲ್ಲಿ ಮಹಾತ್ಮ ಗಾಂಧಿ’ ಕೃತಿಯಿಂದ ತಿಳಿದು ಬರುತ್ತದೆ.
1927ರ ಏಪ್ರಿಲ್‌ನಲ್ಲಿ ಖಾದಿ ಪ್ರಚಾರಕ್ಕಾಗಿ ಮಹಾತ್ಮರು ದಕ್ಷಿಣ ಭಾರತ ಪ್ರವಾಸದಲ್ಲಿರುವರು. ಅಂಬೋಲಿಯಲ್ಲಿ ಹವಾಗುಣ ಸರಿ ಹೊಂದದಿದ್ದಾಗ ಸಬರಮತಿ ಆಶ್ರಮಕ್ಕೆ ಹೊರಡಲು ಮುಂದಾಗುವರು. ಈ ವೇಳೆ ಅವರ ಜತೆಯಲ್ಲಿದ್ದವರು ಈಗ ಅಲ್ಲಿ ಬಿಸಿಲು ಹೆಚ್ಚಿದೆ. ಹೋಗುವುದು ಬೇಡ ಎಂದು ಸಲಹೆ ನೀಡುವರು.
ಈ ವೇಳೆ ಸಿ.ರಾಜಗೋಪಾಲಾಚಾರಿ ಅವರು ಮುಂದಿನ ಪ್ರವಾಸ ಮೈಸೂರು ಸಂಸ್ಥಾನದಲ್ಲಿದೆ. ಅಲ್ಲಿನ ಕೋಲಾರ ಜಿಲ್ಲೆಯಲ್ಲಿರುವ ನಂದಿ ಗಿರಿಧಾಮವೇ ಮಹಾತ್ಮರ ವಿಶ್ರಾಂತಿಗೆ ಪ್ರಶಸ್ತ ಸ್ಥಳ ಎಂದು ನಿರ್ಧರಿಸುವರು. ಗಾಂಧೀಜಿ ಅವರು ಅದಕ್ಕೆ ಒಪ್ಪಿಗೆ ಸೂಚಿಸುವರು. ಈ ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರದಲ್ಲಿ ಮಹಾತ್ಮರ ಸ್ವಾಗತಕ್ಕೆ ಸಮಿತಿಗಳು ರಚನೆ ಆಗುತ್ತವೆ.
ಪೂರ್ವ ಸಿದ್ಧತೆಗಾಗಿ ಮಹದೇವ ದೇಸಾಯಿ, ರಾಜಗೋಪಾಲಾಚಾರಿ, ಗಂಗಾಧರ ದೇಶಪಾಂಡೆ ಅವರು ಏಪ್ರಿಲ್ ಎರಡನೇ ವಾರದಲ್ಲಿ ಬೆಂಗಳೂರಿಗೆ ಬಂದು, ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸುದ್ದಿ ತಿಳಿಸುತ್ತಾರೆ. ಬಳಿಕ ಮಹಾರಾಜರು ನಂದಿ ಗಿರಿಧಾಮ ಕನ್ನಿಂಗ್ ಹ್ಯಾಮ್ ಭವನದಲ್ಲಿ ಗಾಂಧೀಜಿ ಅವರ ವಾಸ್ತವ್ಯಕ್ಕೆ ಸಿದ್ಧತೆಗಳನ್ನು ಮಾಡಿಸುವರು.
ಅಂಬೋಲಿಯಿಂದ ಗಾಂಧೀಜಿ ಅವರು ರೈಲಿನ ಮೂಲಕ ಬೆಳಗಾವಿ ಮಾರ್ಗವಾಗಿ ಏಪ್ರಿಲ್ 20ರಂದು ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿಳಿಯುತ್ತಾರೆ. ಅಲ್ಲಿಂದ ನೇರವಾಗಿ ಮೂರು ಕಾರುಗಳಲ್ಲಿ ಪರಿವಾರದವರೊಂದಿಗೆ ನಂದಿ ಬೆಟ್ಟದ ತಪ್ಪಲಿನ ಸುಲ್ತಾನ್ ಪೇಟೆಗೆ ಬರುವರು. ಅಲ್ಲಿ ಚಿಕ್ಕಬಳ್ಳಾಪುರದ ಸ್ವಾಗತ ಸಮಿತಿ ಪದಾಧಿಕಾರಿಗಳು ಅವರನ್ನು ಸಡಗರದಿಂದ ಬರ ಮಾಡಿಕೊಳ್ಳುವರು.
ಎರಡನೇ ಭೇಟಿ: ಗಾಂಧೀಜಿ ಅವರ ಎರಡನೇ ಭೇಟಿಯ ವೇಳೆಗಾಗಲೇ ಬೆಟ್ಟಕ್ಕೆ ವಿದ್ಯುತ್ ಸಂಪರ್ಕ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಿಂದಿನಂತೆಯೇ ಮಹಾತ್ಮರಿಗೆ ಕನ್ನಿಂಗ್ ಹ್ಯಾಂ ಭವನದಲ್ಲಿಯೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಸಲಾಗಿತ್ತು. ಮೇ 31ರಂದು ನಂದಿ ಬೆಟ್ಟದಿಂದ ಹೊರಟ ಗಾಂಧೀಜಿ ಅವರು ಚಿಕ್ಕಬಳ್ಳಾಪುರ, ಚಿಂತಾಮಣಿ, ಕೋಲಾರ, ಬೌರಿಂಗ್‌ಪೇಟೆ ಮಾರ್ಗವಾಗಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು.
ಕನ್ನಿಂಗ್ ಹ್ಯಾಂ ಭವನವಾಯಿತು ಗಾಂಧಿ ಭವನ: ಸ್ವಾತಂತ್ರ್ಯದ ನಂತರ ಗಾಂಧೀಜಿ ಅವರ ಭೇಟಿ ಸ್ಮರಣಾರ್ಥ ನಂದಿಗಿರಿಧಾಮದ ಕನ್ನಿಂಗ್ ಹ್ಯಾಂ ಭವನಕ್ಕೆ ‘ಗಾಂಧಿ ನಿಲಯ’ ಎಂದು ಮರು ನಾಮಕರಣ ಮಾಡಲಾಯಿತು. ಭವನದ ಬಳಿಯೇ ಗಾಂಧೀಜಿ ಅವರ ಪ್ರತಿಮೆ ಸಹ ಸ್ಥಾಪಿಸಲಾಗಿದೆ.
ವೇಮಗಲ್ ಸೋಮಶೇಖರ್ ಅವರ ‘ನಂದಿಗಿರಿಧಾಮದಲ್ಲಿ ಗಾಂಧಿ’ ಕೃತಿಯಲ್ಲಿ ವಿವರ ಮೈಸೂರು ಜಿಲ್ಲಾಡಳಿತ ಪತ್ರ 65 ದಿನ ನಂದಿಬೆಟ್ಟದಲ್ಲಿ ತಂಗಿದ್ದ ರಾಷ್ಟ್ರಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.