ADVERTISEMENT

ಸಂಸದ ಡಾ.ಕೆ. ಸುಧಾಕರ್ ಸೇರಿ ಹಲವರು ಕಾಂಗ್ರೆಸ್‌ಗೆ: ಕೆ.ಎಚ್.ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2025, 14:32 IST
Last Updated 8 ಫೆಬ್ರುವರಿ 2025, 14:32 IST
ಕೆ.ಎಚ್.ಮುನಿಯಪ್ಪ
ಕೆ.ಎಚ್.ಮುನಿಯಪ್ಪ   

ಚಿಂತಾಮಣಿ: ‘ಸಂಸದ ಡಾ.ಕೆ.ಸುಧಾಕರ್ ಅಷ್ಟೇ ಅಲ್ಲ ಬೇರೆಯವರೂ ಕಾಂಗ್ರೆಸ್ ಪಕ್ಷಕ್ಕೆ ಬರಬೇಕು ಎನ್ನುತ್ತಿದ್ದಾರೆ. ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಮತ್ತು ರಾಜ್ಯ ಅಧ್ಯಕ್ಷರು ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದರು.

ನಗರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಶನಿವಾರ ಪಾಲ್ಗೊಂಡಿದ್ದ ಸಚಿವರಿಗೆ, ‘ಡಾ.ಕೆ.ಸುಧಾಕರ್ ಅವರು ಕಾಂಗ್ರೆಸ್ ಸೇರುವರಾ’ ಎಂದು ಪ್ರಶ್ನಿಸಿದ್ದಕ್ಕೆ ಈ ಉತ್ತರ ನೀಡಿದರು.

‘ಕಾಂಗ್ರೆಸ್ ಸಮುದ್ರ ಇದ್ದಂತೆ. ಪಕ್ಷಕ್ಕೆ ಯಾರನ್ನೂ ಬರಬೇಡಿ ಎಂದು ಹೇಳಲು ಆಗುವುದಿಲ್ಲ. ಪಕ್ಷ ಕಟ್ಟಬೇಕಾಗುತ್ತದೆ. ಕೇವಲ ಸುಧಾಕರ್ ಅಷ್ಟೇ ಅಲ್ಲ ಬೇರೆಯವರೂ ಬರಬೇಕು ಎನ್ನುತ್ತಿದ್ದಾರೆ. ಸಾಮಾನ್ಯವಾಗಿ ಯಾರೇ ಬಂದರೂ ಪಕ್ಷಕ್ಕೆ ಕರೆದುಕೊಳ್ಳುತ್ತೇವೆ. ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನ ಆಗುತ್ತದೆ’ ಎಂದರು.

ADVERTISEMENT

ಸಂಸದ ಡಾ.ಕೆ.ಸುಧಾಕರ್ ಕಾಂಗ್ರೆಸ್ ಸೇರುತ್ತಾರೆಯೇ ಇಲ್ಲವೆ ಎನ್ನುವ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ.

ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆಯ ಬಗ್ಗೆ ಸಂಸದ ಡಾ.ಕೆ.ಸುಧಾಕರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಹೈಕಮಾಂಡ್‌ಗೆ ದೂರು ಸಹ ನೀಡಿದ್ದಾರೆ.

ಮತ್ತೊಂದು ಕಡೆ ಗೌರಿಬಿದನೂರು ತಾಲ್ಲೂಕಿನ ಹೊಸೂರಿನಲ್ಲಿ ಇತ್ತೀಚೆಗೆ ನಡೆದ ಗಾಂಧಿವಾದಿ ಎಚ್‌.ನರಸಿಂಹಯ್ಯ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ. ಅವರ ಈ ಮಾತುಗಳು ನಾನಾ ರೀತಿಯ ರಾಜಕೀಯ ವಿಶ್ಲೇಷಣೆಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.