ಶಿಡ್ಲಘಟ್ಟ: ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತರೊಬ್ಬರ ಮೆಕ್ಕೆಜೋಳದ ತೋಟದಲ್ಲಿ ಡ್ರೋನ್ ಮೂಲಕ ಔಷಧ ಸಿಂಪಡಣೆಯ ಪ್ರಾಯೋಗಿಕ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಯಿತು.
ಕ್ರಿಮಿನಾಶಕ ಮತ್ತು ರಸಾಯನಿಕ ಗೊಬ್ಬರವನ್ನು ತುಂಬಿಕೊಂಡು ಹೊಲದ ಮೇಲೆ ಹಾರುವ ಡ್ರೋನ್ ಬೆಲೆಯು ಇಷ್ಟು ದಿನಗಳ ಕಾಲ ರೈತರ ಕೈಗೆಟುವಂತಿರಲಿಲ್ಲ. ಇದೇ ಕಾರಣಕ್ಕೆ ರೈತರಿಗೆ ಕೈಗೆಟುಕುವ ದರದಲ್ಲಿ ಡ್ರೋನ್ ಸೇವೆ ಒದಗಿಸಲು ಖಾಸಗಿ ಸಂಸ್ಥೆಯೊಂದು ಮುಂದಾಗಿದೆ.
ಡ್ರೋನ್ ಮೂಲಕ ಔಷಧಿ ಸಿಂಪಡಣೆಯು ನಿಖರ ಪ್ರಮಾಣದಲ್ಲಿ ಕೀಟನಾಶಕ, ಶಿಲೀಂಧ್ರನಾಶಕ ಅಥವಾ ಎಲೆ ಪೋಷಕ ದ್ರಾವಣಗಳನ್ನು ಬೆಳೆಗಳ ಮೇಲೆ ಸಿಂಪಡಿಸುವಆಧುನಿಕ ತಂತ್ರಜ್ಞಾನವಾಗಿದೆ. ಇದು ಔಷಧಿ ಮತ್ತು ನೀರಿನ ವ್ಯರ್ಥ ಕಡಿಮೆ ಮಾಡುತ್ತದೆ. ಕಾರ್ಮಿಕರ ಕೊರತೆ ನೀಗಿಸುತ್ತದೆ. ರೈತರು ವಿಷಕಾರಿ ರಾಸಾಯನಿಕಗಳಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಪ್ರದೇಶಕ್ಕೆ ಸಿಂಪಡಣೆ ಮಾಡಲು ಸಾಧ್ಯವಾಗುವುದರಿಂದ ಸಮಯ ಉಳಿತಾಯವಾಗುತ್ತದೆ.
ರಿಮೋಟ್ ನಿಯಂತ್ರಣದಲ್ಲಿ ಒಂದು ಬಾರಿಗೆ 15 ನಿಮಿಷ ಹಾರಾಡಬಲ್ಲ ಡ್ರೋನ್ ಟ್ಯಾಂಕ್‌ನಲ್ಲಿ 10 ಲೀಟರ್ ಔಷಧಿ ತುಂಬಿಸಬಹುದು. ಎಂಟು ನಿಮಿಷಗಳಲ್ಲಿ ಒಂದು ಎಕರೆ ಪ್ರದೇಶದಲ್ಲಿ ಔಷಧಿ ಸಿಂಪಡಿಸಬಹುದು. ಒಂದು ಎಕರೆಗೆ ಬೇಕಾಗುವ ಔಷಧಿಯನ್ನು ಒಮ್ಮೆಗೆ ಸಿದ್ಧಪಡಿಸಿಕೊಂಡು ದೂರದಲ್ಲಿ ನಿಂತು ಡ್ರೋನ್ ನಿಯಂತ್ರಣ ಮಾಡಿಕೊಂಡೇ ಔಷಧಿ ಸಿಂಪಡಿಸಬಹುದು.
ಔಷಧಿ ಸಿಂಪಡಣೆಗೆ ಕಾರ್ಮಿಕರು ಸಿಗದ ಕಾಲದಲ್ಲಿ ಡ್ರೋನ್ ಅತ್ಯಂತ ಸಹಕಾರಿಯಾಗಿದೆ. ಎತ್ತರದ ಬೆಳೆಗಳಾದ ಅಡಿಕೆ, ತೆಂಗುಗಳಿಗೆ ರೈತರು ಕೆಳಗೆ ನಿಂತು ಔಷಧಿ ಸಿಂಪಡಿಸಲಾಗದು. ಇಂತಹ ಸಂದರ್ಭಗಳಲ್ಲಿ ಡ್ರೋನ್ ಸಹಕಾರಿ. ಕೇಂದ್ರ ಸರ್ಕಾರವು ‘ಕಿಸಾನ್ ಡ್ರೋನ್’ ಯೋಜನೆ ಜಾರಿಗೆ ತಂದಿದ್ದು, ಕೃಷಿ ಕ್ಷೇತ್ರದಲ್ಲಿ ಡ್ರೋನ್‌ಗಳ ಬಳಕೆ ಉತ್ತೇಜಿಸುತ್ತಿದೆ.
‘ಡ್ರೋನ್ ಬಳಕೆಯಿಂದ ಲಾಭದಾಯಕ ಕೃಷಿ ನಡೆಸಲು ಸಾಧ್ಯ. ಕಡಿಮೆ ನೀರಿನ ಬಳಕೆ ಹಾಗೂ ಅಧಿಕ ಔಷಧಿ ಇದರ ವಿಶೇಷತೆ. ಒಂದು ದಿನಕ್ಕೆ 40 ಎಕರೆ ಬೆಳೆಗೆ ಔಷಧಿ ಸಿಂಪಡಿಸಬಹುದು. ಒಂದು ಎಕರೆಗೆ ₹600 ಗಳಂತೆ ಸಿಂಪಡಣೆ ದರ ನಿಗದಿಪಡಿಸಿದ್ದೇವೆ. ಕನಿಷ್ಠ ಹತ್ತು ಎಕರೆ ಇದ್ದಲ್ಲಿ ನಾವೇ ಬಂದು ಸೇವೆ ಒದಗಿಸುತ್ತೇವೆ’ ಎಂದು ಗಾಯಿತ್ರಿ ಮೈಕ್ರೊ ಎಲಿಮೆಂಟ್ಸ್ ಅಂಡ್ ಕೆಮಿಕಲ್ಸ್ ಕಂಪನಿಯ ಸುರೇಶ್ ಭಟ್ ವಿವರಿಸಿದರು.
‘ನಾವೀಗ ಮೋಟಾರಿಗೆ ಔಷಧಿ ಸಿಂಪಡಿಸುವವರಿಗೂ ಹಣ ನೀಡಬೇಕು. ಡ್ರೋನ್ ಸೇವೆ ರೈತರಿಗೆ ಕೈಗೆಟಕುವ ದರದಲ್ಲಿ ಸಿಗುವುದಾದರೆ ಅನುಕೂಲಕರ’ ಎಂದು ರೈತ ಮುನೀಂದ್ರ ಹೇಳಿದರು.
ಡ್ರೋನ್ ಪ್ರಾಯೋಗಿಕ ಪರೀಕ್ಷೆ ವೇಳೆ ಸಿದ್ದಪ್ಪ ಕಂಬೋಜಿ, ರಾಹುಲ್ ಭಾಸ್ಕರ್, ವಿಜಯ ಭಾಸ್ಕರ್, ಬಾಲಕೃಷ್ಣ, ಲಕ್ಷ್ಮಿ ಕೃಪ ಟ್ರೇಡರ್ಸ್‌ನ ನಂಜುಂಡರೆಡ್ಡಿ, ರೈತರಾದ ತ್ಯಾಗರಾಜ್, ರೆಡ್ಡಿ, ಹರೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.