ಚಿಕ್ಕಬಳ್ಳಾಪುರ: ಮಧ್ಯಾಹ್ನದ ಉಪಾಹಾರ ಯೋಜನೆಯಡಿ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಆಹಾರವು ಸರ್ಕಾರ ನಿಗದಿಪಡಿಸಿರುವ ಮೆನು ಪ್ರಕಾರವೇ ನೀಡಬೇಕು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್.ಕೃಷ್ಣ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಶಿಡ್ಲಘಟ್ಟ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆ, ಅಂಗನವಾಡಿ ಕೇಂದ್ರ, ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದ ವೇಳೆ ಅಲ್ಲಿನ ಕುಂದು ಕೊರತೆಗಳ ಕುರಿತು ಮಾತನಾಡಿದರು.
ರಾಜ್ಯ ಆಹಾರ ಆಯೋಗದ ಸದಸ್ಯರು ಸೆ.15 ರಿಂದ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಸರ್ಕಾರಿ ವಸತಿ ಶಾಲೆಗಳು, ಅಂಗನವಾಡಿಗಳು, ಆಸ್ಪತ್ರೆಗಳು, ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ನ್ಯಾಯಬೆಲೆ ಅಂಗಡಿಗಳು, ಸರ್ಕಾರಿ ಉಗ್ರಾಣಗಳು ಹಾಗೂ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಸರ್ಕಾರಿ ಸೇವೆಗಳ ಬಗ್ಗೆ ವೀಕ್ಷಿಸಿದ್ದೇವೆ. ಅಲ್ಲಿನ ಸಮಸ್ಯೆಗಳನ್ನು, ಕುಂದು ಕೊರತೆಗಳನ್ನು ನಿವಾರಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ಸೆ. 18 ರಂದು ಜಿಲ್ಲಾಡಳಿತ ಭವನದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ಮಾಡಿ ಸೂಚನೆ ನೀಡಲಿದ್ದೇವೆ. ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸೇವೆಗಳು ಜನರಿಗೆ ತಲುಪಬೇಕು. ಯಾವುದೇ ವ್ಯಕ್ತಿ ಹಸಿವಿನಿಂದ ಬಳಲಬಾರದು ಎಂದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿಗೆ ತರಲಾಗಿದೆ. ಆದರೆ ಜಿಲ್ಲೆಯಲ್ಲಿ ಮಧ್ಯಾಹ್ನದ ಉಪಾಹಾರ ಯೋಜನೆಯ ಆಹಾರ ವಿತರಣೆ ಸೇರಿದಂತೆ ಸರ್ಕಾರದ ವಿವಿಧ ವಸತಿ ಶಾಲೆಗಳಲ್ಲಿ ಮೆನು ಚಾರ್ಟ್ ಪ್ರಕಾರ ಆಹಾರ ವಿತರಣೆ ಆಗುತ್ತಿಲ್ಲ ಎಂದು ಹೇಳಿದರು.
ಯಾವ ತರಕಾರಿ, ಪದಾರ್ಥದ ಬೆಲೆಗಳು ಕಡಿಮೆ ಇರುತ್ತದೆಯೊ ಅದಕ್ಕೆ ಪೂರಕವಾಗಿ ಅಡುಗೆ ತಯಾರಿಸಿ ನೀಡಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬಿಸಿ ನೀರಿನ ವ್ಯವಸ್ಥೆ ಇಲ್ಲ. ಊಟದ ಕೋಣೆ ಇಲ್ಲ, ಶೌಚಾಲಯದಲ್ಲಿ ಸ್ವಚ್ಚತೆ ಕಾಪಾಡಿಲ್ಲ. ವಸತಿ ಶಾಲೆಗಳಲ್ಲಿ ಗ್ರಂಥಾಲಯಗಳಿಲ್ಲ ಈ ಎಲ್ಲ ಸಮಸ್ಯೆಗಳು ನಿವಾರಣೆ ಆಗಬೇಕು ಎಂದು ಸೂಚಿಸಿದ್ದೇವೆ ಎಂದು ತಿಳಿಸಿದರು.
ಗೌರಿಬಿದನೂರು ತಾಲ್ಲೂಕಿನ ತೊಂಡಬಾವಿಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದಾಗ ನಿಗದಿತ ವೇಳೆಯಲ್ಲಿ ಅಂಗಡಿ ತೆರೆದಿರಲಿಲ್ಲ. ಆಹಾರ ಸಂಗ್ರಹಣೆಗೂ ಹಾಗೂ ಮಾರಾಟಕ್ಕೂ ತಾಳೆ ಆಗುತ್ತಿಲ್ಲ. ಇದನ್ನು ಸರಿಪಡಿಸಿ ಕೊಳ್ಳಲು ಎಚ್ಚರಿಕೆ ನೀಡಲಾಗಿದೆ ಎಂದರು.
ಅಯೋಗ ಜಿಲ್ಲೆಯ ಪ್ರವಾಸ ವೇಳೆ ಗಮನಿಸಿರುವ ಎಲ್ಲಾ ಅಂಶಗಳ ಬಗ್ಗೆ ಗುರುವಾರದ ಸಭೆಯಲ್ಲಿ ಗಮನಸೆಳೆದು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು ಎಂದು ತಿಳಿಸಿದರು.
ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾಜ್, ಮಾರುತಿ ಎಂ. ದೊಡ್ಡಲಿಂಗಣ್ಣವರ, ಎ. ರೋಹಿಣಿ ಪ್ರಿಯ, ಕೆ.ಎಸ್. ವಿಜಯಲಕ್ಷ್ಮಿ, ಸದಸ್ಯ ಕಾರ್ಯದರ್ಶಿ ಸುಜಾತ ಡಿ. ಹೊಸಮನಿ, ಶಿಡ್ಲಘಟ್ಟ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಮೂರ್ತಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ಕೆಳಗಿನಮನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.