ಗೋಪಾಲಗೌಡ ಕಲ್ವಮಂಜಲಿ
ಚಿಕ್ಕಬಳ್ಳಾಪುರ: ನಗರದ ಕನ್ನಡ ಭವನದಲ್ಲಿ ಮಂಗಳವಾರ (ಮೇ 27) ಚಾಲನೆ ದೊರೆಯುವ ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನದಲ್ಲಿ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಇದ್ದಾರೆ.
ಸಹಕಾರ ಅಭಿವೃದ್ಧಿ ಅಧಿಕಾರಿಯಾಗಿ ನಿವೃತ್ತರಾದ ಗೋಪಾಲಗೌಡ ಜಿಲ್ಲೆಯ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. 1976ರಲ್ಲಿ ‘ನಮ್ಮ ಊರಿಗೆ ದ್ರೌಪದಿ’ ಕವನ ಸಂಕಲದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟರು. ಕವನ ಸಂಕಲನ, ಕಥಾ ಸಂಕಲನ, ಜಾನಪದ ಕಥಾ ಸಂಕಲನ, ನಾಟಕಗಳು, ಕಾದಂಬರಿ, ಸಂಪಾದಿತ ಕೃತಿ ಸೇರಿದಂತೆ ಒಟ್ಟು 29 ಕೃತಿಗಳು ಲೇಖನಿಯಿಂದ ಮೂಡಿವೆ.
ಚಿಕ್ಕಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ 1991ರಿಂದ 2001ರವರೆಗೆ ಕೆಲಸ ಮಾಡಿದ್ದಾರೆ. 2001–2007ರವರೆಗೆ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಯಾಗಿದ್ದರು. 2014ರ ಫೆ.1ರಂದು ನಡೆದ ಚಿಕ್ಕಬಳ್ಳಾಪುರ ತಾಲ್ಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದರು. 11 ವರ್ಷಗಳ ನಂತರ ಜಿಲ್ಲಾ ಸಮ್ಮೇಳನದ ಅಧ್ಯಕ್ಷತೆವಹಿಸುತ್ತಿದ್ದಾರೆ.
ಕೋಲಾರದಲ್ಲಿ ಬೇರುಗಳು ಇದ್ದರೂ ಸಾಹಿತ್ಯದಲ್ಲಿ ವೃಕ್ಷವಾಗಲು ಚಿಕ್ಕಬಳ್ಳಾಪುರ ಕಾರಣ ಎಂದು ಈ ನೆಲದ ಬಗ್ಗೆ ಪೀತಿಯ ಮಾತನಾಡುವರು ಗೋಪಾಲಗೌಡರು.
ಸಮ್ಮೇಳನದ ಅಧ್ಯಕ್ಷತೆವಹಿಸಿರುವ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.
ಈಗಲೂ ನೀವು ಕ್ಷೇತ್ರ ಅಧ್ಯಯನ, ಬರವಣಿಗೆಯಲ್ಲಿ ಸಕ್ರಿಯವಾಗಿದ್ದೀರಿ. ಈಗ ಯಾವ ವಿಚಾರವಾಗಿ ನಿಮ್ಮ ಬರವಣಿಗೆ ಸಾಗಿದೆ?
ಚಿಕ್ಕಬಳ್ಳಾಪುರ ಜಿಲ್ಲೆಯ ಬೈರವ ಮತ್ತು ಕರಗದಮ್ಮ ದೇವಾಲಯಗಳ ಬಗ್ಗೆ ಅಧ್ಯಯನ ನಡೆಸಿ ಪುಸ್ತಕ ಬರೆಯಬೇಕಾಗಿದೆ. ಕಳೆದ ಮೂರು ತಿಂಗಳಲ್ಲಿ 40ಕ್ಕೂ ಹೆಚ್ಚು ದೇಗುಲಗಳಿಗೆ ಭೇಟಿ ನೀಡಿದ್ದೇನೆ. ಕ್ಷೇತ್ರಾಧ್ಯಯನ ನಡೆಸುತ್ತಿದ್ದೇನೆ. ಈ ಪುಸ್ತಕಗಳು ಕೆಲವೇ ತಿಂಗಳಲ್ಲಿ ಲೋಕಾರ್ಪಣೆಯಾಗಲಿವೆ.
ಈ ಹಿಂದೆ ತಾಲ್ಲೂಕು ಸಮ್ಮೇಳನದ ಅಧ್ಯಕ್ಷರಾಗಿದ್ದಿರಿ. ಈಗ ಜಿಲ್ಲಾ ಸಮ್ಮೇಳನದ ಅಧ್ಯಕ್ಷತೆವಹಿಸುತ್ತಿದ್ದೀರಿ...
ನೀವೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕು ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ ಹಾಗೂ ಎಲ್ಲ ಪದಾಧಿಕಾರಿಗಳು ಕೇಳಿಕೊಂಡರು. ಕಸಾಪ ಸದಸ್ಯರೆಲ್ಲ ನನ್ನ ದಶಕಗಳ ಸ್ನೇಹಿತರು. ಎಲ್ಲರ ಕೋರಿಕೆ ಒಪ್ಪಿದೆ. 1976ರಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದು ನೆಲೆ ನಿಂತವನು ನಾನು. ಬೇರು ಕೋಲಾರವಾದರೂ ಸಾಹಿತ್ಯದ ಮೂಲಕ ವೃಕ್ಷವಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ.
ಭಾಷೆ ವಿಚಾರವಾಗಿ ರಾಜ್ಯದ ಹಲವು ಕಡೆ ಆಗಾಗ್ಗೆ ತಗಾದೆಗಳು ಜರುಗುತ್ತಿವೆ. ದ್ವಿಭಾಷಿಕ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಭಾಷಾ ಸಾಮರಸ್ಯವಿದೆ. ಇದು ಯಾವ ರೀತಿ ಮಾದರಿಯಾದುದು?
ಕನ್ನಡ ಮತ್ತು ತೆಲುಗಿನ ಭಾಷಾ ಸಾಮರಸ್ಯಕ್ಕೆ ಈ ಭಾಗದಲ್ಲಿ ಶತಮಾನಗಳ ಇತಿಹಾಸವಿದೆ. ಈ ಎರಡೂ ಭಾಷೆಗಳ ನಡುವೆ ಕೊಡುಕೊಳ್ಳುವಿಕೆಯೂ ಇದೆ. ಈ ಕೊಡುಕೊಳ್ಳುವಿಕೆ ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೂ ಕಾರಣವಾಗಿದೆ. ಭಾಷೆಯ ವಿಚಾರವಾಗಿ ರಾಜ್ಯದ ಹಲವು ಕಡೆಗಳಲ್ಲಿ ಗಲಾಟೆಗಳು ಸಂಭವಿಸುತ್ತಿವೆ. ಆದರೆ ನಮ್ಮಲ್ಲಿ ಪರಸ್ಪರ ಸಾಮರಸ್ಯವಿದೆ.
‘ಸಿರಿ ಭೂವಲಯ’ ಕೃತಿಯ ಕರ್ತೃ ಕುಮುದೇಂದು ಮುನಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಯಲುವಳ್ಳಿಯವರು. ಇಡುಗೂರಿನ ರುದ್ರ ಕವಿ, ಗೂಳೂರಿನ ಜಚನಿ, ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ನಂದಿ ತಿಮ್ಮನ್ನ, ಕೈವಾರ ತಾತಯ್ಯ, ವೀರಬ್ರಹ್ಮಯ್ಯ ಹೀಗೆ ಅನೇಕ ಮಹತ್ವದ ಕವಿಗಳು ಅಂದು ಇಂದು ಜಿಲ್ಲೆಯಲ್ಲಿ ಇದ್ದಾರೆ. ಆಧುನಿಕ ಕನ್ನಡ ಸಾಹಿತ್ಯಕ್ಕೂ ಜಿಲ್ಲೆಯ ಸಾಹಿತಿಗಳು ದೊಡ್ಡ ಕೊಡುಗೆ ನೀಡಿದ್ದಾರೆ.
ಜಿಲ್ಲೆಯ ಗಡಿಭಾಗಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ಆಶಾದಾಯವಾಗಿಲ್ಲ. ಈ ಬಗ್ಗೆ ಸಮ್ಮೇಳನಾಧ್ಯಕ್ಷರಾಗಿ ಏನು ಹೇಳುವಿರಿ?
ನಮ್ಮ ಮೊಮ್ಮಕ್ಕಳು ಕನ್ನಡ ಮಾತನಾಡುತ್ತಿಲ್ಲ. ಕಾನ್ವೆಂಟ್‌ಗಳಲ್ಲಿ ಕನ್ನಡದ ಓದು, ಬರಹ ಇಲ್ಲ. ಕನ್ನಡ ಅನ್ನದ ಭಾಷೆಯಲ್ಲ ಎನ್ನುವ ಮಟ್ಟಕ್ಕೆ ಬಂದಿದೆ. ಪಂಚತಾರಾ ಹೋಟೆಲ್‌ಗಳಲ್ಲಿ ಭದ್ರತೆ ಕೆಲಸ ಬೇಕು ಎಂದರೂ ಆಂಗ್ಲಭಾಷೆ ಬೇಕು ಎನ್ನುವ ಮಟ್ಟದಲ್ಲಿ ಇದ್ದೇವೆ. ಆದ್ದರಿಂದ ಸರ್ಕಾರಗಳು ಕನ್ನಡವನ್ನು ಅನ್ನದ ಭಾಷೆಯಾಗಿ ನೋಡಬೇಕು. ರಾಜ್ಯದಲ್ಲಿ ಮಂಜೂರಾಗಿರುವ ಹುದ್ದೆಗಳ ಪೈಕಿ 2.76 ಲಕ್ಷ ಉದ್ಯೋಗಗಳು ಖಾಲಿ ಇವೆ. ಈ ಹುದ್ದೆಗಳ ಭರ್ತಿಗೆ ಕ್ರಮವಹಿಸಬೇಕು.
ಹಾಜರಾತಿ ಇಲ್ಲ ಎನ್ನುವ ಕಾರಣದಿಂದ ಕನ್ನಡ ಶಾಲೆಗಳನ್ನು ಮುಚ್ಚುವ ಬದಲು ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು. ಮಕ್ಕಳ ದಾಖಲಾತಿಗೆ ಪ್ರೋತ್ಸಾಹದ ಕ್ರಮ ಅನುಸರಿಸಬೇಕು.
ನೀರಾವರಿ ವಿಚಾರದಲ್ಲಿ ಜಿಲ್ಲೆಯಲ್ಲಿ ಹಲವು ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ಬಗ್ಗೆ ಏನು ಹೇಳುವಿರಿ?
ಎಚ್.ಎನ್.ವ್ಯಾಲಿ ನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸಿದ್ದಾರೆ. ಇದರಿಂದ ಅಂತರ್ಜಲ ಹೆಚ್ಚಿದೆ. ಆದರೆ ಎರಡು ಹಂತದಲ್ಲಿ ಶುದ್ಧೀಕರಣ ಆಗುತ್ತಿದೆ. ಇದನ್ನು ಮೂರು ಹಂತದಲ್ಲಿ ಶುದ್ಧೀಕರಿಸದಿದ್ದರೆ ಭವಿಷ್ಯದಲ್ಲಿ ದುಷ್ಪರಿಣಾಮ ಎದುರಾಗಲಿದೆ. ಜಿಲ್ಲೆಗೆ ಶುದ್ಧ ನೀರು ಹರಿಸಬೇಕು.
ಜಿಲ್ಲೆಯ ರೈತರು ಕಷ್ಟಜೀವಿಗಳು. ದೊರೆಯುವ ಅಲ್ಪನೀರಿನಲ್ಲಿ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ನೀರು ಕೊಟ್ಟರೆ ರಾಜ್ಯಕ್ಕೆ ಅನ್ನ ನೀಡುವ ಶಕ್ತಿ ಇಲ್ಲಿನ ರೈತರಿಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನವಹಿಸಬೇಕು.
ಜಿಲ್ಲೆಯಲ್ಲಿ ಜೀವ ನದಿಗಳು ಇಲ್ಲ. ಮಳೆಗಾಲದಲ್ಲಿ ನದಿಗಳು ತುಂಬಿ ಹರಿದು ನೀರು ಆಂಧ್ರಕ್ಕೆ ಹೋಗುತ್ತಿದೆ. ಮಳೆಗಾಲದಲ್ಲಿ ನದಿಗಳು ತುಂಬಿ ಹರಿದಾಗ ಆ ನೀರನ್ನು ಸಂಗ್ರಹಿಸಲು ಅಣೆಕಟ್ಟೆ ಜಿಲ್ಲೆಗೆ ಅಗತ್ಯವಿದೆ. ಎತ್ತಿನಹೊಳೆ ನೀರಾವರಿ ಯೋಜನೆ ಶೀಘ್ರ ಅನುಷ್ಠಾನವಾದರೆ ಜನರಿಗೆ ಅನುಕೂಲ.
‘ಪ್ರಜಾವಾಣಿಯಲ್ಲಿ ಆರು ತಿಂಗಳು ಕೆಲಸ’
1976ರಲ್ಲಿ ಪತ್ರಿಕೋದ್ಯಮದ ಡಿಪ್ಲೊಮ ಪೂರ್ಣಗೊಳಿಸಿದೆ. ನಮ್ಮ ಚಿಕ್ಕಪ್ಪ ಅರ್ಜುನ್ ದೇವ್ ಅವರು ಆಗ ‘ಪ್ರಜಾವಾಣಿ’ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮೂಲಕ ‘ಪ್ರಜಾವಾಣಿ’ ಸೇರಿದೆ. ಆರು ತಿಂಗಳು ಕೆಲಸ ಮಾಡಿದೆ. ನಂತರ ಸರ್ಕಾರಿ ಕೆಲಸ ದೊರೆತ ಕಾರಣ ಪತ್ರಿಕೆಯ ಉದ್ಯೋಗ ತೊರೆಯಬೇಕಾಯಿತು. ಇಂದಿನವರೆಗೂ ‘ಪ್ರಜಾವಾಣಿ’ ನನ್ನ ನೆಚ್ಚಿನ ಪತ್ರಿಕೆ. ಅಂದಿನಿಂದಲೂ ಪತ್ರಿಕೆಯ ಓದುಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.