ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಭಾನುವಾರ ನಡೆಯಿತು. ಪದವಿ ಮತ್ತು ಸ್ನಾತಕೋತ್ತರದ 154 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಸಮಾಜ ಸೇವೆ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ ಜಯಚಂದ್ರ, ವೈದ್ಯಕೀಯ ಕ್ಷೇತ್ರದ ಸೇವೆಗಾಗಿ ಹೃದಯ ತಜ್ಞ ಪ್ರೊ.ಆಫ್ಕಾಸೆಂಡಿಯೋಸ್, ಶಿಕ್ಷಣ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ದರ್ಶನ್ ಶೇಖರ್, ವ್ಯವಹಾರ ಮತ್ತು ತತ್ವಜ್ಞಾನ ಕ್ಷೇತ್ರದಲ್ಲಿ ಅಮೆರಿಕದ ಹಾರ್ಡ್ ಕೆಫೆ ಸಂಸ್ಥಾಪಕ ಐಸಾಕ್ ಟೈಗ್ರೀಟ್, ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಡಾ. ಲಕ್ಷ್ಮಿಪ್ರಸಾದ್, ಸಂಗೀತ ಕ್ಷೇತ್ರದಲ್ಲಿ ಡಿಮಿಟ್ರೀಸ್ ಲಾಂಬ್ರಿಯೋನಸ್ ಮತ್ತು ಕ್ರೀಡಾಕ್ಷೇತ್ರದ ಸಾಧನೆಗಾಗಿ ಒಲಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ ಉಷಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಪಿ.ಟಿ ಉಷಾ ಹೊರತುಪಡಿಸಿ ಉಳಿದ ಸಾಧಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗೋಕುಲ ಪ್ರಿಯ, ಸತ್ಯನಾರಾಯಣ, ಕೌಶಿಕ್, ಸಾಯಿ ಪ್ರಸಾದ್, ಶ್ವೇತಾ ಮತ್ತು ಪಿ.ಚಿದಂಬರ ಅವರಿಗೆ ಸಂಶೋಧನೆಗಾಗಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ದಿವ್ಯಶ್ರೀ, ಭಾರತಿ, ಸಾಯಿ ಯಶಸ್ವಿ, ಸಾಕ್ಷಿ, ಸಿದ್ದರಾಮ ನಾಗೂರ್, ಬಾಬು, ಅಮೃತ ಕಲಾಲ್ ಮತ್ತಿತರರಿಗೆ ಸ್ನಾತಕೋತ್ತರ ಪದವಿಯಲ್ಲಿ ಸಾಧಿಸಿದ ಅಭ್ಯುದಯಕ್ಕೆ ಸುವರ್ಣ ಪದಕ ಪಡೆದರು. ಪದವಿಯಲ್ಲಿನ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಸುವರ್ಣ ಪದಕ ಪುರಸ್ಕಾರ ನೀಡಲಾಯಿತು.
ಘಟಿಕೋತ್ಸವಕ್ಕೆ ಮುಖ್ಯ ಅಥಿಯಾಗಿದ್ದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ, ಸತತ ಪರಿಶ್ರಮ, ಅರ್ಪಣಾ ಮನೋಭಾವದಿಂದ ಸಾಧಿಸಿದ ಸಾಧನೆಯು ಜೀವಿತಕ್ಕೆ ಮಾದರಿ. ಮಾನವೀಯ ಸೇವೆಯ ಮೂಲಕ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯವು ಪರಿವರ್ತನೆಯ ಶಿಕ್ಷಣವನ್ನು ನೀಡಿ ಮನುಕುಲವನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿಸಿದರು.
ವಿಜ್ಞಾನ, ವೈದ್ಯಕೀಯ ವಿಜ್ಞಾನ, ಅಧ್ಯಾತ್ಮ ಹೀಗೆ ಶಿಕ್ಷಣದ ಅನೇಕ ಮಜಲುಗಳಲ್ಲಿ ಶ್ಲಾಘನೀಯ ಕೆಲಸವನ್ನು ವಿಶ್ವವಿದ್ಯಾಲಯ ಮಾಡುತ್ತಿದೆ. ನೆಮ್ಮದಿಯ ಬದುಕಿಗೆ ಎಲ್ಲಾ ರೀತಿಯ ಜ್ಞಾನ ವಿಜ್ಞಾನವನ್ನು ವಿಶ್ವವಿದ್ಯಾಲಯ ಒದಗಿಸುತ್ತಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎನ್ ನರಸಿಂಹ ಮೂರ್ತಿ, ಶಿಕ್ಷಣದಲ್ಲಿ ಆತ್ಮ ಶಿಕ್ಷಣ ಕೊರತೆ ಎಲ್ಲಾ ಸಮಸ್ಯೆಗಳಿಗೂ ಮೂಲ. ಸಮಸ್ಯೆ ಮುಕ್ತವಾದ ಶಿಕ್ಷಣವನ್ನು ನಮ್ಮ ವಿಶ್ವವಿದ್ಯಾಲಯವು ನೀಡುತ್ತದೆ. ಪ್ರಾಚೀನ ಭಾರತದ ಗುರುಕುಲ ಶಿಕ್ಷಣವು ಈ ವಿಶ್ವವಿದ್ಯಾಲಯದಲ್ಲಿ ಲಭ್ಯವಿದೆ ಎಂದರು.
ಆಧುನಿಕ ವಿಜ್ಞಾನ ಮತ್ತು ಪುರಾತನ ವಿವೇಕದ ಸಾರವನ್ನು ವಿಶ್ವವಿದ್ಯಾಲಯ ಬೋಧಿಸುತ್ತದೆ. ಶಿಕ್ಷಣದ ಜೊತೆಗೆ ಜೀವಿತೋದ್ದೇಶಕ್ಕೆ ಅನುಕೂಲ ಆಗುವ ಪಾರಮಾರ್ಥಿಕ ಶಿಕ್ಷಣ ವಿಶ್ವವಿದ್ಯಾಲಯದ ವೈಶಿಷ್ಟ್ಯ ಎಂದು ತಿಳಿಸಿದರು.
ಘಟಿಕೋತ್ಸವ ವೇದಿಕೆಯಲ್ಲಿ ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸಿ. ಶ್ರೀನಿವಾಸ್, ವಿಶ್ವವಿದ್ಯಾಲಯದ ಕುಲಪತಿ ಡಾ. ಶ್ರೀಕಂಠ ಮೂರ್ತಿ, ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಪ್ರೊ. ಜೆ. ಶಶಿಧರ ಪ್ರಸಾದ್ ಪಾಲ್ಗೊಂಡಿದ್ದರು.
‘ವಿದ್ಯಾರ್ಥಿಗಳು ಬೆಳಗಿದರೆ; ವಿವಿ ಪ್ರಕಾರ’
ಘಟಿಕೋತ್ಸವದ ಸಾನ್ನಿಧ್ಯವಹಿಸಿದ್ದ ವಿಶ್ವವಿದ್ಯಾಲಯದ ಸಂಸ್ಥಾಪಕ ಸದ್ಗುರು ಮಧುಸೂಧನ ಸಾಯಿ ಅವರು ವಿದ್ಯಾರ್ಥಿಗಳು ಬೆಳಗಿದರೆ ಅವರಿಗೆ ವಿದ್ಯಾದಾನ ನೀಡುವ ವಿಶ್ವವಿದ್ಯಾಲಯ ಪ್ರಕಾಶಿಸಿದಂತೆ ಎಂದರು. ಸಾಧನೆಯ ಮುಂದೆ ಯಾರೂ ಹೆಚ್ಚು ಕಡಿಮೆ ಇಲ್ಲ. ಭಗವಂತನ ಮುಂದೆ ಎಲ್ಲರೂ ಸಮಾನರು. ತಾರತಮ್ಯದ ವಿಚಾರ ಸದಾ ಗೌಣವಾಗಿರುತ್ತದೆ. ಇಡೀ ಪ್ರಪಂಚವೇ ಒಂದು ಸಮಾಜ. ಅದುವೇ ವಸುದೈವ ಕುಟುಂಬಕಂ. ಹೀಗಾಗಿ ಒಂದೇ ಕುಟುಂಬಕ್ಕೆ ಸೇರಿದ ಎಲ್ಲರೂ ಸಂತೋಷದಿಂದ ಬಾಳುವಂತಾಗಲಿ ಎಂದು ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.