ADVERTISEMENT

ಚಿಕ್ಕಮಗಳೂರು | ದಂತಭಾಗ್ಯ ಯೋಜನೆ ಬಡವರಿಗೆ ಆಸರೆ: ಎಚ್.ಡಿ.ತಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:43 IST
Last Updated 20 ಜನವರಿ 2026, 2:43 IST
ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ದಂತ ಜೋಡಣೆ ಶಿಬಿರವನ್ನು ಶಾಸಕ ಎಚ್‌.ಡಿ.ತಮ್ಮಯ್ಯ ಉದ್ಘಾಟಿಸಿದರು
ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ದಂತ ಜೋಡಣೆ ಶಿಬಿರವನ್ನು ಶಾಸಕ ಎಚ್‌.ಡಿ.ತಮ್ಮಯ್ಯ ಉದ್ಘಾಟಿಸಿದರು   

ಚಿಕ್ಕಮಗಳೂರು: ಬಡವರಿಗಾಗಿ 2016ರಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ದಂತಭಾಗ್ಯ ಯೋಜನೆ ಇಂದು ಅನೇಕ ಬಡವರಿಗೆ ಆಸರೆಯಾಗಿದೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,  ಜಿಲ್ಲಾ ಆಸ್ಪತ್ರೆ,  ನಿಟ್ಟೆ ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜು ಆಶ್ರಯದಲ್ಲಿ ಭಾನುವಾರ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಉಚಿತ ದಂತ ಜೋಡಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

60 ವರ್ಷ ಮೇಲ್ಪಟ್ಟ ವಯೋಮಾನದವರಿಗೆ 2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ದಂತಭಾಗ್ಯ ಯೋಜನೆ ತಂದರು. ಬಿಪಿಎಲ್ ಕಾರ್ಡ್ ಹೊಂದಿರುವ 60 ವರ್ಷ ಮೇಲ್ಪಟ್ಟವರು ಈ ಯೋಜನೆ ಲಾಭ ಪಡೆಯಬಹುದಿತ್ತು. ಈಗ ವಯೋಮಾನದ ಮಿತಿಯನ್ನು 45 ವರ್ಷಕ್ಕೆ ಇಳಿಸಿದ್ದು ಇದರಿಂದ ಸಾಕಷ್ಟು ಬಡವರಿಗೆ ಅನುಕೂಲ ಆಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದಂತ ಜೋಡಣೆಗೆ ₹60-70 ಸಾವಿರ ಪಾವತಿಸಬೇಕು. ಇಲ್ಲಿ ಉಚಿತವಾಗಿ ಸೌಲಭ್ಯ ನೀಡುತ್ತಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.

ADVERTISEMENT

ಜಿಲ್ಲಾಸ್ಪತ್ರೆ ದಂತ ರೋಗ ವೈದ್ಯಾಧಿಕಾರಿ ಡಾ.ಪ್ರೇಮ್‌ಕುಮಾರ್ ಮಾತನಾಡಿ, ರಾಜ್ಯ ಸರ್ಕಾರವು ಜಾರಿಗೆ ತಂದ ದಂತಭಾಗ್ಯ ಯೋಜನೆಯ ಭಾಗವಾಗಿ ಉಚಿತ ಕೃತಕ ದಂತಪಂಕ್ತಿ ಜೋಡಣಾ ಶಿಬಿರ ಆಯೋಜಿಸಲಾಗಿದೆ. 3 ಹಲ್ಲುಗಳಿಗಿಂತ ಹೆಚ್ಚು ಹಲ್ಲುಗಳು ಹೋಗಿದ್ದರೆ ಅಂತವರು ಈ ಯೋಜನೆ ಲಾಭ ಪಡೆಯಬಹುದು ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಹಲ್ಲುಗಳ ಜೋಡಣೆ ಹಾಕಿಸಿಕೊಳ್ಳಲು ಬಡಜನರಿಗೆ ಹೆಚ್ಚು ಹಣ ವ್ಯಯಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದಂತಭಾಗ್ಯ ಯೋಜನೆ ಮೂಲಕ ಹಲ್ಲುಸೆಟ್ಟು ಕಟ್ಟಿಸಿಕೊಳ್ಳಲು ಅನುಕೂಲ ಕಲ್ಪಿಸಿರುವುದು ತುಂಬಾ ಜನರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮಲ್ಲಿ ಡಿಎಚ್‌ಒ ಡಾ. ಅಶ್ವತ್‌ಬಾಬು, ಉಪಕಾರ್ಯದರ್ಶಿ–2 ಚಂದ್ರಶೇಖರ ಸಾಲಿಮಠ, ನಿಟ್ಟೆ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನ ಡಾ.ಚೇತನ ಹೆಗ್ಡೆ, ವಿವಿಧ ತಾಲ್ಲೂಕಿನ ದಂತವೈದ್ಯರು, ಅಧಿಕಾರಿ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.