ADVERTISEMENT

ಕಡೂರು | ಜಾನಪದದಲ್ಲಿದೆ ಬದುಕಿನ ಪಾಠ: ಲೋಕೇಶ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:21 IST
Last Updated 8 ಡಿಸೆಂಬರ್ 2025, 6:21 IST
ಕಡೂರು ತಾಲ್ಲೂಕು ಗರ್ಜೆ ಗ್ರಾಮದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ 5ನೇ ಜನಪದ ಸಮ್ಮೇಳನವನ್ನು ಚಟ್ನಳ್ಳಿ ಮಹೇಶ್‌ ಉದ್ಘಾಟಿಸಿದರು. ಜಿ.ಬಿ.ಸುರೇಶ್‌, ಗಿರೀಶ್‌, ಬಸಪ್ಪ, ಎಚ್‌.ಸಿ.ಲೋಕೇಶ್‌, ನೇತ್ರಾವತಿ, ಹರೀಶ್‌ ಭಾಗವಹಿಸಿದ್ದರು
ಕಡೂರು ತಾಲ್ಲೂಕು ಗರ್ಜೆ ಗ್ರಾಮದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ 5ನೇ ಜನಪದ ಸಮ್ಮೇಳನವನ್ನು ಚಟ್ನಳ್ಳಿ ಮಹೇಶ್‌ ಉದ್ಘಾಟಿಸಿದರು. ಜಿ.ಬಿ.ಸುರೇಶ್‌, ಗಿರೀಶ್‌, ಬಸಪ್ಪ, ಎಚ್‌.ಸಿ.ಲೋಕೇಶ್‌, ನೇತ್ರಾವತಿ, ಹರೀಶ್‌ ಭಾಗವಹಿಸಿದ್ದರು   

ಕಡೂರು: ‘ಜನಪದ ಸಾಹಿತ್ಯದಲ್ಲಿ ಮನುಷ್ಯನ ಬದುಕಿನ ಪಾಠ ಅಡಗಿದ್ದು, ಯುವಜನರ ಮೂಲಕ ಜನಪದವನ್ನು ಲೋಕಕ್ಕೆ ವಿಸ್ತರಿಸಬೇಕಾದ ಅಗತ್ಯವಿದೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಚ್.ಸಿ. ಲೋಕೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಗರ್ಜೆ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಭಾನುವಾರ ನಡೆದ ಕಡೂರು ತಾಲ್ಲೂಕು ಮಟ್ಟದ ಜಾನಪದ ಸಮ್ಮೇಳನದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು.

ಗ್ರಾಮೀಣ ಪ್ರದೇಶಗಳ ಬದುಕಿನ ಸಾರವೇ ಜಾನಪದ ಸಾಹಿತ್ಯದ ಮೂಲವಾಗಿದೆ. ಜನಪದ ಸಾಹಿತ್ಯದಲ್ಲಿ ಪ್ರಕೃತಿಗೆ, ಕಾಯಕಕ್ಕೆ ಪೂರಕವಾದ ಹಾಗೂ ಜೀವನಕ್ಕೆ ಮೂಲ ಶಿಕ್ಷಣದ ಪಾಠವಿದೆ. ಮನುಷ್ಯನ ಅರಿವನ್ನು ವಿಸ್ತರಿಸಲು ಈ ಸಂಸ್ಕೃತಿ ಪೂರಕವಾಗಿದೆ. ನಮ್ಮ ಹಿರಿಯರು ಜಾನಪದದ ಮೂಲಕ ಬದುಕಿನ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಿದ್ದಾರೆ. ಆಧುನಿಕತೆಯ ಧಾವಂತದಲ್ಲಿ ಜನಪದವು ಮಸುಕಾಗುತ್ತಿದ್ದು, ನಿರ್ಲಕ್ಷಿಸಿದರೆ ಮರೆಯಾಗುವ, ಸಂಸ್ಕೃತಿಯ ನಶಿಸುವಿಕೆಗೆ ಕೊಡಲಿ ಪೆಟ್ಟು ನೀಡುವ ಅಪಾಯವೂ ಇದೆ. ಆದ್ದರಿಂದ ಯುವಪೀಳಿಗೆಗೆ ಜಾನಪದ ಸಾಹಿತ್ಯದ ಮೌಲ್ಯಗಳನ್ನು ತಿಳಿಸುವುದರ ಜೊತೆಗೆ ನೆಲದ ಮೂಲವನ್ನು ಉಳಿಸುವ ಕಾರ್ಯಕ್ಕೆ ಒತ್ತುಕೊಡಬೇಕಿದೆ. ಈ ವಿಷಯವಾಗಿ ಜಾನಪದ ಪರಿಷತ್ ಘಟಕವು ಕ್ರಿಯಾಶೀಲವಾಗಿ ಹೆಚ್ಚು ತೊಡಗಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ADVERTISEMENT

ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ ಸುರೇಶ್ ಮಾತನಾಡಿ, ಪರಿಷತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗ್ರಾಮೀಣ ಭಾರತದ ಜಾನಪದ ಕಲೆಗಳನ್ನು ಪ್ರತಿಬಿಂಬಿಸುವ ಪ್ರಮುಖ ಅಂಗವಾಗಿದೆ. ಇದು ವಿಶ್ವ ಸಂಸ್ಥೆಯಿಂದ ಮನ್ನಣೆ ಪಡೆದಿರುವುದು ದೇಶಕ್ಕೆ ಮತ್ತು ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ. ಕರ್ನಾಟಕ ಜಾನಪದ ಪರಿಷತ್ತು ಎಲ್ಲಾ ಹಂತದಲ್ಲೂ ಯುವ ಸಮೂಹಕ್ಕೆ ಜಾನಪದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಆಚಾರ–ವಿಚಾರ, ಆಹಾರ ಪದ್ಧತಿ, ವೇಷಭೂಷಣ ಮುಂತಾದವುಗಳನ್ನು ಪರಿಚಯಿಸಿ ಭಾರತೀಯ ಸಂಸ್ಕೃತಿಯನ್ನು ಕಾಪಾಡಲು ಆದ್ಯತೆ ನೀಡುತ್ತಿದೆ ಎಂದರು.

ಸಮ್ಮೇಳನದ ಅಧ್ಯಕ್ಷ ಗಿರೀಶ್ ಮಾತನಾಡಿ, 20 ವರ್ಷಗಳಿಂದ ಸತತವಾಗಿ ಹರಿಕಥೆ ಮತ್ತು ಭಜನೆ, ರಂಗಭೂಮಿ ಕಾರ್ಯಕ್ರಮಗಳ ಮೂಲಕ ಹಲವಾರು ಸಾರ್ವಜನಿಕ ವೇದಿಕೆಗಳಲ್ಲಿ ಜಾನಪದ ಕಲಾ ಸೇವೆಯನ್ನು ಸಲ್ಲಿಸುತ್ತಿರುವುದಕ್ಕೆ ಸಂದ ಗೌರವ ಇದಾಗಿದ್ದು, ಜನಪದ ಲೋಕದೊಂದಿಗೆ ಬಾಳುತ್ತಿರುವುದು ತೃಪ್ತಿ ತಂದಿದೆ. ಆದರೆ, ಇದನ್ನು ನಿರಂತರವಾಗಿ ಉಳಿಸಲು ಎಲ್ಲರ ಸಹಕಾರವೂ ಅಗತ್ಯವಿದ್ದು, ಪಟ್ಟಣ ಪ್ರದೇಶಗಳಲ್ಲಿ ಅಸ್ತಿತ್ವ ಕಂಡುಕೊಂಡಿರುವ ಹಳ್ಳಿಗರು ತಮ್ಮ ಮೂಲ ಸಂಸ್ಕೃತಿ ಮರೆಯದಿರಲಿ ಎಂದು ಆಶಿಸಿದರು.

ಜಾನಪದ ಧ್ವಜಾರೋಹಣದೊಂದಿಗೆ ಸಮ್ಮೇಳನದ ಮೆರವಣಿಗೆ ಆರಂಭಿಸಲಾಯಿತು. ವೀರಗಾಸೆ, ಡೊಳ್ಳು, ಪೂಜಾ ಕುಣಿತ, ಕೋಲಾಟ, ಸೋಮನ ಕುಣಿತ, ವಿವಿಧ ಜಾನಪದ ಕಲಾತಂಡಗಳು ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಸಮ್ಮೇಳನದ ಅಧ್ಯಕ್ಷರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವೇದಿಕೆಯವರೆಗೆ ಕರೆತರಲಾಯಿತು. ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ 30ಕ್ಕೂ ಹೆಚ್ಚು ಕಲಾತಂಡಗಳು ಸಂಸ್ಕೃತಿಯ ಪ್ರದರ್ಶನ ನಡೆಸಿದವು.

ಜಾನಪದ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ್ವರ ಆಚಾರ್, ಸಾಹಿತಿ ಹೊಸೂರು ಪುಟ್ಟರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್, ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಯರದಕೆರೆ ರಾಜಪ್ಪ, ಚಿಕ್ಕನಲ್ಲೂರು ಜಯಣ್ಣ, ಗಾಯತ್ರಮ್ಮ, ಮಾಳೇನಹಳ್ಳಿ ಬಸಪ್ಪ, ಜಿ.ಪಿ. ಮರುಳಪ್ಪ, ಮಲ್ಲಿಕಾರ್ಜುನ, ನೇತ್ರಾವತಿ, ಜ್ಯೋತಿ ರಾಜಪ್ಪ, ಧನಂಜಯ, ಗುರುಮೂರ್ತಿ, ಪಾಂಡುಕುಮಾರ್ ಇದ್ದರು.

ಕಡೂರು ತಾಲ್ಲೂಕು ಗರ್ಜೆ ಗ್ರಾಮದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ 5ನೇ ಜನಪದ ಸಮ್ಮೇಳನದಲ್ಲಿ ಕೋಲಾಟ ಸೋಮನ ಕುಣಿತ ವೀರಗಾಸೆ ತಂಡಗಳು ಮೆರವಣಿಗೆಯಲ್ಲಿ ಪ್ರದರ್ಶನ ನೀಡಿದವು

ಕಲೆ ಸಾಹಿತ್ಯಗಳ ಅಡಿಪಾಯವೇ ಜಾನಪದ ‘ಜನಪದಕ್ಕೆ ವಿವಿಧ ಜಾತಿ ಸಮುದಾಯ ಬುಡಕಟ್ಟು ಜನಾಂಗಗಳನ್ನು ಒಂದುಗೂಡಿಸುವ ಶಕ್ತಿ ಇದೆ. ಜಾನಪದವು ಗ್ರಾಮೀಣ ಭಾರತದ ಜೀವಂತ ಮತ್ತು ಶಾಶ್ವತ ಕಲೆಯಾಗಿದ್ದು ಗ್ರಾಮಗಳ ಬದುಕಿನ ಸೊಗಡು ಮೋಕ್ಷ ನೀಡುವ ಶಕ್ತಿಯನ್ನೂ ಹೊಂದಿದೆ. ನಮ್ಮ ದೇಶದಲ್ಲಿ ಪ್ರಚಲಿತವಿರುವ ಎಲ್ಲಾ ರೀತಿಯ ಸಂಗೀತ ಕಲೆಗಳ ಮತ್ತು ಸಾಹಿತ್ಯಗಳ ಅಡಿಪಾಯವೇ ಜಾನಪದವಾಗಿದ್ದು ಜನ ಸಮುದಾಯಗಳು ಪ್ರೀತಿ–ವಿಶ್ವಾಸ ಐಕ್ಯತೆಯಿಂದ ಹಾಗೂ ಸಹಕಾರ ಹೊಂದಾಣಿಕೆ ಮನೋಭಾವದಿಂದ ಬದುಕಿ ಬಾಳಲು ಅನಾದಿಕಾಲದಿಂದಲೂ ಜಾನಪದದ ಸಾಂಗತ್ಯವಿದೆ ಮತ್ತು ಕಲೆಗಳು ಸ್ಫೂರ್ತಿ ನೀಡಿವೆ’ ಎಂದು ಸಮ್ಮೇಳನ ಉದ್ಘಾಟಿಸಿದ ಚಟ್ನಳ್ಳಿ ಮಹೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.