
ಚಿಕ್ಕಮಗಳೂರು: ಕ್ರಿಸ್ ಮಸ್ ಮತ್ತು ವರ್ಷಾಂತ್ಯಕ್ಕೆ ಬರುವ ಪ್ರವಾಸಿಗರಿಗಾಗಿ ಆಯೋಜಿಸಿದ್ದ ಹೆಲಿ ಟೂರಿಸಂಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ತಾತ್ಕಾಲಿಕ ತಡೆ ನೀಡಿದೆ.
ಎ.ಯೋಗೇಶ್ವರನ್ ಮತ್ತು ಬಿ. ಪೂಂಗಳಲಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮಂಡಳಿ, ಮಧ್ಯಂತರ ಆದೇಶ ಹೊರಡಿಸಿದೆ.
ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಸಾಲು, ಕಳಸ ಮತ್ತು ಮೂಡಿಗೆರೆ ಸುತ್ತಮುತ್ತ ಹೆಲಿಕಾಪ್ಟರ್ ಹಾರಾಟ ನಡೆಸಿ ಪ್ರವಾಸಿಗರಿಗೆ ಆಗಸದಿಂದ ಗಿರಿಗಳ ದರ್ಶನ ಮಾಡಿಸಲು ಜಿಲ್ಲಾ ಪ್ರವಾಸೋದ್ಯಮ ಸಮಿತಿ ಮುಂದಾಗಿದೆ. ಮುಳ್ಳಯ್ತನಗಿರಿಗೆ ಹೊಂದಿಕೊಂಡಂತೆ ಭದ್ರಾ ವನ್ಯಜೀವಿ ಪ್ರದೇಶ ಇದೆ. ಕಳಸ ಮತ್ತು ಮೂಡಿಗೆರೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಹೊಂದಿಕೊಂಡಿವೆ. ಹೆಲಿ ಟೂರಿಸಂ ನಡೆಸಿದರೆ ವನ್ಯಜೀವಿಗಳ ಆವಾಸಕ್ಕೆ ತೊಂದರೆಯಾಗಲಿದೆ. ಅದರಲ್ಲೂ ಪಕ್ಷಿಗಳು ಗೂಡು ಕಟ್ಟುವ ಸಮಯ ಆಗಿರುವುದರಿಂದ ಹೆಲಿಕಾಪ್ಟರ್ ಹಾರಾಟದ ಶಬ್ಧ ತೊಂದರೆ ಉಂಟು ಮಾಡಲಿದೆ. ಪರಿಸರ ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಹೆಲಿ ಟೂರಿಸಂಗೆ ಅವಕಾಶ ನೀಡಬಾರದು ಎಂದು ಅರ್ಜಿದಾರರು ವಾದ ಮಂಡಿಸಿದ್ದಾರೆ.
ಪ್ರತಿವಾದಿ ವಕೀಲರು ವಿವರಣೆ ನೀಡಲು ಸಮಯ ಕೇಳಿದರು. ವಿಚಾರಣೆ ನಡೆಸಿದ ನ್ಯಾಯಮಂಡಳಿ, ಪರಿಸರ ಸೂಕ್ಷ್ಮ ವಿಷಯ ಆಗಿರುವುದರಿಂದ ಮಧ್ಯಂತರ ಆದೇಶ ನೀಡಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಮುಳ್ಳಯ್ಯನಗಿರಿ ಮೇಲ್ಭಾಗದಲ್ಲಿ ಹೆಲಿಕಾಪ್ಟರ್ ಹಾರಾಟ ನಡೆಸಬಾರದು. ಚಿಕ್ಕಮಗಳೂರು ನಗರದಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡಲಾಗುವುದು ಎಂದು ವಿವರಿಸಿದೆ. ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ಶನಿವಾರ ಮೂಡಿಗೆರೆಯಲ್ಲಿ ಹೆಲಿ ಟೂರಿಸಂ ಉದ್ಘಾಟನಾ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿತ್ತು. ಸದ್ಯಕ್ಕೆ ಎಲ್ಲಾ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿದೆ.