
ಕಡೂರು: ‘ಪಟ್ಟಣದ ಹೊರವಲಯದ ಬಡಾವಣೆಗಳು ಮಿತಿ ಮೀರಿ ಬೆಳೆಯುತ್ತಿದ್ದು, ಪಟ್ಟಣವೂ ತನ್ನ ವ್ಯಾಪ್ತಿಯನ್ನು ಪಂಚಾಯಿತಿಗಳ ಗಡಿವರೆಗೂ ವಿಸ್ತರಿಸಿಕೊಂಡಿದೆ. ಇವುಗಳ ಅಭಿವೃದ್ಧಿಗೆ ತಮ್ಮ ಇತಿಮಿತಿಯಲ್ಲಿ ಶ್ರಮಿಸುವುದಾಗಿ’ ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಕಡೂರು ಪುರಸಭೆ ವ್ಯಾಪ್ತಿಯ 8ನೇ ವಾರ್ಡ್‌ನಿಂದ ಹರುವನಹಳ್ಳಿ ಮತ್ತು ದೊಂಬರಹಳ್ಳಿ ಸಂಪರ್ಕ ಕಲ್ಪಿಸುವ ನೂತನ ರಸ್ತೆ ಮತ್ತು ಹೊನ್ನುಭೋಗಿ ಬೀರಲಿಂಗೇಶ್ವರ ಸ್ವಾಮಿ ಸಂಚಾರಿ ಕುಡಿಯುವ ನೀರಿನ ಘಟಕವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣದ 8ನೇ ವಾರ್ಡ್‌ನಲ್ಲಿರುವ ವೆಂಕಟೇಶ್ವರ ನಗರ, ವಿದ್ಯಾನಗರ, 1ನೇ ವಾರ್ಡ್, 5ನೇ ವಾರ್ಡ್, ಮಾರುತಿ ಬಡಾವಣೆ ಮತ್ತು ಬಿಜಿಎಸ್ ಬಡಾವಣೆಗಳು ಏರುಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಇವುಗಳ ವ್ಯಾಪ್ತಿ ಪಟ್ಟಣವನ್ನೂ ಮೀರಿ ಬೆಳೆದಿದ್ದು, ಈ ಪ್ರದೇಶಗಳು ಪಂಚಾಯಿತಿಗಳ ವ್ಯಾಪ್ತಿಗೆ ಬರುತ್ತವೆ. ಇಲ್ಲಿ ಮೂಲಸೌಕರ್ಯ ಕಲ್ಪಿಸುವುದು ಪಂಚಾಯಿತಿಗಳಿಗೆ ಅಸಾಧ್ಯವಾಗಿದ್ದು, ಪುರಸಭೆ ಮತ್ತು ಶಾಸಕರ ಅನುದಾನಗಳಲ್ಲಿ ಹಂತಹಂತವಾಗಿ ಅಭಿವೃದ್ಧಿ ಗೊಳಿಸಲಾಗುವುದು. ಈಗಾಗಲೇ ವೆಂಕಟೇಶ್ವರ ನಗರಕ್ಕೆ ₹1 ಕೋಟಿ ಮತ್ತು ಮಾರುತಿ ಬಡಾವಣೆಗೆ ₹1.20 ಕೋಟಿ ಅನುದಾನ ನೀಡಿ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಪಟ್ಟಣದ ಒಳಭಾಗದಲ್ಲಿ ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪ ಮತ್ತು ರಸ್ತೆ ನಿರ್ಮಾಣ ವಿಷಯಗಳಲ್ಲಿ ಪುರಸಭೆಯನ್ನು ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಅವರ ಅವಧಿ ಮುಕ್ತಾಯವಾದರೂ ಪ್ರಭಾರಿ ಅಧ್ಯಕ್ಷರೆಂದೇ ಭಾವಿಸಿ ಪಟ್ಟಣದ ಏಳಿಗೆಗೆ ಅವರು ಮುಂದೆಯೂ ಕೈಜೋಡಿಸಲಿ. ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ‘ನೂತನ ಬಡಾವಣೆಗಳು ಮೂಲಸೌಕರ್ಯವಿಲ್ಲದೆ ನರಳಲು ವಿದ್ಯಾವಂತರ ಆತುರವೇ ಕಾರಣವಾಗಿದೆ. ಹಣದಾಸೆಗೆ ದಲ್ಲಾಳಿಗಳು, ಭೂ ಮಾಲೀಕರು ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡಿರುತ್ತಾರೆ. ಮೂಲ ಸೌಕರ್ಯಗಳು ಇದ್ದರೆ ಮಾತ್ರ ನಿವೇಶನ ಖರೀದಿಸಲು ಮುಂದಾಗಿ, ಇಲ್ಲದಿದ್ದರೆ ಇ-ಸ್ವತ್ತು, ಬೀದಿದೀಪ, ನೀರು, ಚರಂಡಿ ಮೊದಲಾದ ಸೌಲಭ್ಯಗಳು ಲಭಿಸುವುದು ಕಷ್ಟವಾಗಲಿದೆ. ನೀವು ಖರೀದಿಸಿದ ನಿವೇಶನಗಳು, ಮನೆಗಳಿಗೆ ಮಾತ್ರ ಮಾಲೀಕರಾಗಿ, ಒತ್ತುವರಿ ಮೂಲಕ ಸಾರ್ವಜನಿಕ ಆಸ್ತಿ ಲಪಟಾಯಿಸಲು ಮುಂದಾಗದಿರಿ. ಕಾನೂನು ಉಲ್ಲಂಘಿಸಿದರೆ ಕಚೇರಿ, ನ್ಯಾಯಾಲಯಗಳಿಗೆ ಅಲೆಯುವುದು ತಪ್ಪುವುದಿಲ್ಲ. ನೂತನ ಬಡಾವಣೆಗಳಲ್ಲಿ 30 ಅಡಿ ರಸ್ತೆ ಇದ್ದರೆ ಮಾತ್ರ ವಾಹನ ನಿಲುಗಡೆ, ಸಂಚಾರಕ್ಕೆ ಅನುಕೂಲವಾಗುತ್ತದೆ. ಒಟ್ಟಾರೆ ಕಾನೂನು ಪಾಲಿಸಿ. ಶಾಸಕರು ವೆಂಕಟೇಶ್ವರ ನಗರಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ಅಂತೆಯೇ ರಾಜಕಾಲುವೆ ನಿರ್ಮಾಣ ಮತ್ತಿತರ ಕಾರ್ಯಗಳಿಗೆ ಅನುದಾನ ತರಲು ಒತ್ತು ನೀಡಲಿ ಎಂದು ಮನವಿ ಮಾಡಿ, ಸಾರ್ವಜನಿಕ ಕೆಲಸ ಮಾಡಲು ಅಧ್ಯಕ್ಷರೇ ಆಗಬೇಕಿಲ್ಲ, ಜನಪರ ಕಾಳಜಿ ಇದ್ದರೆ ಸಾಕು’ ಎಂದರು.
ಆಹಾರ ಇಲಾಖೆಯ ನಿವೃತ್ತ ವ್ಯವಸ್ಥಾಪಕ ಜಿ.ತಿಮ್ಮಯ್ಯ, ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸ್ಥಾಪಿಸಿರುವ ಹೊನ್ನುಭೋಗಿ ಬೀರಲಿಂಗೇಶ್ವರ ಸ್ವಾಮಿ ಸಂಚಾರಿ ನೀರಿನ ಘಟಕವನ್ನು ಉದ್ಘಾಟಿಸಿದ ಶ್ರೀನಿವಾಸ್ ಅವರು, ಘಟಕವು ಶುದ್ಧ ನೀರು ಪೂರೈಕೆ ಮೂಲಕ ಜನರ ಆರೋಗ್ಯ ಕಾಪಾಡಲು ನೆರವಾಗಲಿ ಎಂದು ನುಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಯರದಕೆರೆ ಎಂ.ರಾಜಪ್ಪ ಮಾತನಾಡಿ, ಮನುಷ್ಯನಿಗೆ ಶುದ್ಧ ಕುಡಿಯುವ ನೀರು, ಗಾಳಿ, ಬೆಳಕಿನ ಅವಶ್ಯಕತೆ ಇದ್ದು ನಿವೃತ್ತಿ ನಂತರ ಮನೆಬಾಗಿಲಿಗೆ ಸಂಚಾರಿ ನೀರಿನ ಘಟಕ ಸ್ಥಾಪಿಸಿ ಸಾರ್ವಜನಿಕ ಸೇವೆಗೆ ಮುಂದಾಗಿದ್ದು ಶ್ಲಾಘನೀಯ. ಸರ್ಕಾರಿ ನೌಕರರು ನಿವೃತ್ತಿಯ ನಂತರ ಇಂತಹ ಚಟುವಟಿಕೆಗಳಲ್ಲಿ ಮುಂದಾಗಲಿ ಎಂದು ಆಶಿಸಿದರು.
ಸಭೆಯಲ್ಲಿ ಚಲನಚಿತ್ರ ನಟ ಕಡೂರು ಧರ್ಮಣ್ಣ, ರಂಗ ಕಲಾವಿದ ಚಂದ್ರಮೂರ್ತಿ, ಕೆ.ಆರ್.ರವಿ, ಕೆ.ಎನ್.ಲೋಕನಾಥ್, ರೇವಣ್ಣ, ಧರ್ಮಣ್ಣ, ಗಿರಿರಾಜ್, ಓಂಕಾರ್ ಯರದಕೆರೆ, ಗುರುರಾಜ ಹಾಲ್ಮಠ್, ಮಲ್ಲಿಕಾರ್ಜುನ್ ಇದ್ದರು.
‘ವಾಹನಗಳ ಮಾಲೀಕರು ಪೊಲೀಸರೊಂದಿಗೆ ಸಹಕರಿಸಿ’
ಕಡೂರು ಪಟ್ಟಣದ ಸಂಗೊಳ್ಳಿರಾಯಣ್ಣ ವೃತ್ತದಿಂದ ದೇವರಾಜ ಅರಸು ರಸ್ತೆ ಮೂಲಕ ಅಗ್ನಿಶಾಮಕ ಠಾಣೆವರೆಗೆ ₹10 ಕೋಟಿ ವೆಚ್ಚದಲ್ಲಿ ರಾಜಕಾಲುವೆ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರದ ಅನುಮತಿಗೆ ಕಳಿಸಿದೆ. ಎಪಿಎಂಸಿ ಮುಂಭಾಗದಿಂದ ಬನಶಂಕರಿ ಕಲ್ಯಾಣ ಮಂದಿರದವರೆಗೆ ಮತ್ತು ಬೀರೂರು ಪಟ್ಟಣದ ತರಳಬಾಳು ಕಲ್ಯಾಣ ಮಂದಿರದಿಂದ ಪತ್ರೆ ಕಲ್ಯಾಣ ಮಂದಿರದವರೆಗೆ ಡಬಲ್‌ರೋಡ್ ಅನ್ನು ಡಿವೈಡರ್ ಮತ್ತು ವಿದ್ಯುದ್ದೀಪ ಅಳವಡಿಸಿ ₹39 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಟೆಂಡರ್ ಕರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಜನವರಿಯಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಪಟ್ಟಣದ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು ವಾಹನಗಳ ಮಾಲೀಕರು ಪೊಲೀಸರೊಂದಿಗೆ ಸಹಕರಿಸಿ ನಿಲುಗಡೆ ಮತ್ತಿತರ ಕ್ರಮಕ್ಕೆ ಕೈಜೋಡಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.