ADVERTISEMENT

7 ವರ್ಷಗಳ ಬಳಿಕ ಅಪ್ಪನ ಮಡಿಲು ಸೇರಿದ ಮಗ; 2018ರಲ್ಲಿ ತಾಯಿಯೊಂದಿಗೆ ನಾಪತ್ತೆ

ಬಾಲಕನ ಪತ್ತೆ ಕಾರ್ಯಕ್ಕೆ ನೆರವಾದ ಪೊಲೀಸರು, ಆಶ್ರಮ ಶಾಲೆಯ ವಿದ್ಯಾರ್ಥಿಯಾಗಿದ್ದ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 3:13 IST
Last Updated 10 ಜುಲೈ 2025, 3:13 IST
ನಾಪತ್ತೆಯಾಗಿದ್ದ ಬಾಲಕನನ್ನು ಪತ್ತೆಹಚ್ಚಿದ ಬಾಳೆಹೊನ್ನೂರು ಸಮೀಪದ ಜಯಪುರ ಠಾಣಾಧಿಕಾರಿ ಅಂಬರೀಷ್ ಅವರನ್ನು ಪೋಷಕರು ಗೌರವಿಸಿದರು
ನಾಪತ್ತೆಯಾಗಿದ್ದ ಬಾಲಕನನ್ನು ಪತ್ತೆಹಚ್ಚಿದ ಬಾಳೆಹೊನ್ನೂರು ಸಮೀಪದ ಜಯಪುರ ಠಾಣಾಧಿಕಾರಿ ಅಂಬರೀಷ್ ಅವರನ್ನು ಪೋಷಕರು ಗೌರವಿಸಿದರು   

ಜಯಪುರ (ಬಾಳೆಹೊನ್ನೂರು): 2018ರಲ್ಲಿ ತಾಯಿಯೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದ ಮಗನನ್ನು ಏಳು ವರ್ಷಗಳ ನಂತರ ಪೊಲೀಸರು ಪತ್ತೆಹಚ್ಚಿ ಅಪ್ಪನ ಮಡಿಲಿಗೆ ಸೇರಿಸಿದ್ದಾರೆ.

ಕೊಪ್ಪ ತಾಲ್ಲೂಕಿನ ತೆಂಗಿನಮನೆ ಸಮೀಪದ ಕುಂಬ್ರಗೋಡಿನ ಮಂಜುನಾಥ್ ಶೋಭಾ ದಂಪತಿ ಅವಳಿ ಮಕ್ಕಳನ್ನು 2018ರಲ್ಲಿ ತೆಂಗಿನಮನೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರಿಸಿದ್ದರು. ಕೆಲ ದಿನಗಳ ನಂತರ ದಂಪತಿ ನಡುವೆ ಮನಸ್ತಾಪ ಉಂಟಾಗಿ, ಪತ್ನಿ ಶೋಭಾ, ಐದು ವರ್ಷದ ಮಗನನ್ನು ಕರೆದುಕೊಂಡು ಹೋಗಿ ಹೆಮ್ಮಕ್ಕಿಯ ರತ್ನಮ್ಮ– ಮಹೇಶ ದಂಪತಿ ಮನೆಯಲ್ಲಿ ಬಿಟ್ಟು ಅಲ್ಲಿಂದ ನಾಪತ್ತೆಯಾಗಿದ್ದಳು. ಎಲ್ಲ ಕಡೆ ಹುಡುಕಿ ಮಂಜುನಾಥ್ ಬೇರೆ ದಾರಿ ಕಾಣದೆ ಕೈ ಚೆಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಇತ್ತೀಚೆಗೆ ಕಳಸ ಬಳಿ ಹೆಮ್ಮಕ್ಕಿಯ ಮನೆಯೊಂದರಲ್ಲಿ ಮಗ ಇರುವ ಮಾಹಿತಿ ತಿಳಿದು ಅಲ್ಲಿಗೆ ಮಂಜುನಾಥ್ ತೆರಳಿದಾಗ, ಸ್ಥಳೀಯರು ಅವರನ್ನು ಹಿಡಿದು ಮಕ್ಕಳ ಕಳ್ಳ ಎಂದು ಬಿಂಬಿಸಿ ಥಳಿಸಿ, ಕಳಸ ಪೊಲೀಸರಿಗೆ ಒಪ್ಪಿಸಿದ್ದರು. ಇತ್ತೀಚೆಗೆ ಸ್ಥಳೀಯರೊಬ್ಬರ ಸಲಹೆಯಂತೆ ಜಯಪುರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು.

ADVERTISEMENT

ಠಾಣಾಧಿಕಾರಿ ಅಂಬರೀಷ್ ಕಾರ್ಯಪ್ರವೃತ್ತರಾಗಿ ಹುಡುಕಾಡಿದಾಗ ಬಾಲಕ ಕಳಸ ಸಮೀಪದ ಹೊರನಾಡಿನ ಆಶ್ರಮ ಶಾಲೆಯಲ್ಲಿ ಐದನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದನ್ನು ಪತ್ತೆ ಮಾಡಿ, ಆತನನ್ನು ಕರೆ ತಂದಿದ್ದಾರೆ. ನಿಯಮದಂತೆ ಚಿಕ್ಕಮಗಳೂರಿನ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಮಹಿಳಾ ಸಾಂತ್ವನ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಪೊಲೀಸರು ಪತ್ರ ಬರೆದು ಅಪ್ಪನ ವಶಕ್ಕೆ ನೀಡಲು ಅನುಮತಿ ಕೋರಿದ್ದರು.

ಸಮಿತಿ ಒಪ್ಪಿಗೆ ಪಡೆದು ಪೊಲೀಸರು ಬಾಲಕನನ್ನು ಅಪ್ಪನ ಮಡಿಲಿಗೆ ಒಪ್ಪಿಸಿದರು. ಆರು ವರ್ಷದ ನಂತರ ಮಗ ಸಿಕ್ಕಿದ ಖುಷಿಯಲ್ಲಿದ್ದಾರೆ ಮಂಜುನಾಥ್. ಮಗನನ್ನು ತೆಂಗಿನಮನೆಯ ಶಾಲೆಗೆ ಸೇರಿಸಿದ್ದಾರೆ. ‘ದೇವರ ರೂಪದಲ್ಲಿ ಪೊಲೀಸರು ಮಗನನ್ನು ಹುಡುಕಿ ಕೊಟ್ಟಿದ್ದಾರೆ’ ಎಂದು ಅವರು ಕಣ್ಣೀರಾದರು.
ಮಗ ಸಿಕ್ಕಿದ ಖುಷಿಯಲ್ಲಿ ಪೋಷಕರು ಠಾಣಾಧಿಕಾರಿಗೆ ಶಾಲು ಹೊದಿಸಿ ಹಾರ ಹಾಕಿ ಗೌರವಿಸಿದರು.
ಪತ್ತೆ ಕಾರ್ಯಾಚರಣೆಯಲ್ಲಿ ಮಹಿಳಾ ಸಿಬ್ಬಂದಿ ಕಲಾವತಿ, ನಾಗರಾಜ್, ಸತೀಶ್, ಎಎಸ್‌ಐ ರವಿಕುಮಾರ ಭಾಗವಹಿಸಿದ್ದರು.

ನ್ಯಾಯ ಒದಗಿಸಲು ಯತ್ನ

ಠಾಣೆಯಲ್ಲಿ ಅಪರಾಧ ಪ್ರಕರಣಗಳ ಜೊತೆಗೆ ಇತರ ವಿಷಯಗಳ ಅರ್ಜಿಗಳು ಬರುತ್ತಿವೆ. ಆರು ತಿಂಗಳುಗಳಲ್ಲಿ 97 ಅರ್ಜಿಗಳು ಬಂದಿವೆ. ಪ್ರಮುಖವಾಗಿ ಗಂಡ– ಹೆಂಡತಿ ಜಗಳ ಗಡಿ ವಿವಾದ ಬೇಲಿ ತಕರಾರು ರಸ್ತೆ ಅವ್ಯವಸ್ಥೆ ಕುಡುಕರ ಹಾವಳಿ ಸೇರಿದಂತೆ ಕೆಲವು ಅರ್ಜಿಗಳಿಗೆ ಪ್ರಕರಣ ದಾಖಲಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅರ್ಜಿದಾರರೊಂದಿಗೆ ಮಾತನಾಡಿ ಸಂಬಂಧಿಸಿದ ಇಲಾಖೆಗೆ ಪತ್ರ ವ್ಯವಹಾರ ನಡೆಸಿ ಸಮಸ್ಯೆ ಪರಿಹರಿಸಲಾಗುತ್ತದೆ ಎನ್ನುತ್ತಾರೆ ಠಾಣಾಧಿಕಾರಿ ಅಂಬರೀಷ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.