
ಶೃಂಗೇರಿ: ‘ಅತ್ಯಮೂಲ್ಯ ನಿಧಿಗಳಾದ ವೇದ ಶಾಸ್ತ್ರಗಳ ಸಂರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ’ ಎಂದು ಶೃಂಗೇರಿ ಶಾರದಾ ಪೀಠದ ಗುರುಗಳಾದ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕಿಗ್ಗಾ ಸಮೀಪದ ಕೊಚ್ಚಾರು ಶ್ರೀಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ 5 ದಿನಗಳಿಂದ ನಡೆಯುತ್ತಿರುವ ಚತುರ್ವೇದ ಪಾರಾಯಣದ ನಂತರ ನಡೆದ ಸಮಾರೋಪದಲ್ಲಿ ಅವರು ಮಾತನಾಡಿದರು.
‘ವೇದ ಸಂರಕ್ಷಣೆ ಎಂದರೆ ಯೋಗ್ಯ ಯುವ ಸಮೂಹಕ್ಕೆ ಅಧ್ಯಯನದ ಗುರಿ ಮುಟ್ಟುವಂತೆ ಉತ್ತೇಜನ ನೀಡುವುದಾಗಿದೆ. ವ್ಯಾಕರಣ, ಮೀಮಾಂಸೆ, ನ್ಯಾಯಾಧಿಶಾಸ್ತ್ರಗಳ ಅಧ್ಯಯನ, ಅವುಗಳ ಅಧ್ಯಾಪನ, ವೇದಶಾಸ್ತ್ರ ವಿದ್ವಾಂಸರ ಆಧರಣೆ, ಪೋಷಣೆ, ಅವರ ಸಂಕಷ್ಟ ಸ್ಥಿತಿಯಲ್ಲಿ ನೆರವಾಗುವಿಕೆ ಮುಖ್ಯವಾಗಿದೆ. ಲೌಖಿಕ ವ್ಯವಹಾರಗಳು ಜೀವನ ನಿರ್ವಹಣೆಗೆ ಎಷ್ಟೇ ಅವಶ್ಯಕವಾದರೂ ಅದರ ನಡುವೆಯೇ ಪಾರಮಾರ್ಥಿಕ ಹಿತದೃಷ್ಟಿಯಿಂದ ಇಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಅದಕ್ಕಿಂತಲೂ ಅವಶ್ಯಕವಾಗಿದೆ ಎಂದರು.
ಯಾವುದೇ ಆಚರಣೆ ಸಂಪ್ರದಾಯಗಳಿಗೆ ವೇದಶಾಸ್ತ್ರವನ್ನು ಪ್ರಮಾಣವಾಗಿಟ್ಟುಕೊಳ್ಳುತ್ತೇವೆ. ವೇದಶಾಸ್ತ್ರಗಳು ಇಲ್ಲದೆ ಇರುವ ಆಚರಣೆಗಳು ಮೂಢ ನಂಬಿಕೆ ಅನಿಸಿಕೊಳ್ಳುತ್ತವೆ. ಪವಿತ್ರವಾದ ವೇದಗಳ ಪಾರಾಯಣದ ಮಾತ್ರದಿಂದಲೇ ಸಕಲ ಪಾಪರಾಶಿಗಳು ನಶಿಸಿಹೋಗುತ್ತವೆ ಎಂದು ಶಾಸ್ತ್ರ ಹೇಳುತ್ತದೆ. ಮಾನವನ ಅಭ್ಯುದಯ ಶ್ರೇಯಸ್ಸುಗಳಿಗೆ ಕಾರಣವಾದ ವೇದಗಳ ಅಧ್ಯಯನವು ಶ್ರೇಯ ಸಾಧನೆಗೆ ಪ್ರಥಮ ಸೋಪಾನವೆಂದು ಆದಿ ಶಂಕರಾಚಾರ್ಯರು ಉಪದೇಶಿಸಿದ್ದಾರೆ. ಪ್ರತಿ ಮನೆಯಲ್ಲಿಯೂ ನಡೆಯುವ ಶುಭ ಸಂದರ್ಭದಲ್ಲಿ ವೇದ ಪಾರಾಯಣ ಕರ್ತರನ್ನು ಕರೆಯಿಸಿ ಅವರನ್ನು ಗೌರವಿಸಬೇಕು. ಕಲಿತವರಿಗೆ ಒಂದು ಮನ್ನಣೆ ದೊರಕಿದಂತಾಗುತ್ತದೆ. ವೇದಶಾಸ್ತ್ರ ವಿದ್ವನ್ನಿಧಿ ಪ್ರತಿಷ್ಠಾನವು ವೇದ ಶಾಸ್ತ್ರಗಳ ಉನ್ನತೀಕರಣಕ್ಕೆ ಇಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಯೋಜಿಸುವಂತಾಗಲಿ ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಗುರುಗಳು ಲಕ್ಷ್ಮಿನರಸಿಂಹ ದೇವರಿಗೆ ವಿಶೇಷ ಪೂಜೆ, ಚತುರ್ವೇದ ಕಲಶಾಭಿಶೇಕ ನೆರವೇರಿಸಿದರು. ನಂತರ 5 ದಿನಗಳ ಕಾಲ ವೇದ ಪಾರಾಯಣವನ್ನು ನಡೆಸಿದ 20 ವಿದ್ವಾಂಸರನ್ನು ಸನ್ಮಾನಿಸಿದರು. ವೇದ ಪಾರಾಯಣದ ನಂತರ ಧಾರ್ಮಿಕ ಪ್ರವಚನ ನೀಡಿದ ವಿದ್ವಾಂಸರಾದ ಶಾರದಾ ಮಠದ ಆಸ್ಥಾನ ವಿದ್ವಾಂಸ ಕೃಷ್ಣರಾಜ ಭಟ್ಟ, ಸಂಸ್ಕೃತ ಕಾಲೇಜಿನ ಪ್ರಸನ್ನ ಅಡಿಗ, ಸದ್ವಿದ್ಯಾ ಸಂಜೀವಿನಿ ಪಾಠಶಾಲೆಯ ಅಧ್ಯಕ್ಷ ವಿನಾಯಕ ಉಡುಪ ಹಾಗೂ ಆಸ್ಥಾನ ವಿದ್ವಾಂಸ ನಾಗರಾಜ ಭಟ್ಟ ಅವರನ್ನು ಗೌರವಿಸಲಾಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಹಂದಿಗದ್ದೆ ನಾಗರಾಜ ಭಟ್, ಅರ್ಚಕರಾದ ಶೃಂಗೇಶ್ವರ ಭಟ್, ಸುಬ್ರಹ್ಮಣ್ಯ ಭಟ್ ಅವರನ್ನು ಗೌರವಿಸಲಾಯಿತು. ತಂತ್ರಿ ವಿಶ್ವನಾಥ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಿಕ್ಕಡಮಕ್ಕಿ ರಮೇಶ್ ಭಟ್, ವಾಸುದೇವ ಜೋಯಿಸ್, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಬಿ.ಎಲ್ ರವಿಕುಮಾರ್, ಸುಧೀಂದ್ರ ಭಟ್, ಶ್ರೀಧರರಾವ್, ಜಿ.ಎಂ ಸತೀಶ್ ಭಾಗವಹಿಸಿದ್ದರು.
ಒಂದು ಕಟ್ಟಡಕ್ಕೆ ಹೇಗೆ ಕಂಬಗಳು ಆಧಾರವೋ ಅದೇ ರೀತಿ ಧರ್ಮಕ್ಕೆ ವೇದಶಾಸ್ತ್ರಗಳು ಆಧಾರವಾಗಿದೆವಿಧುಶೇಖರ ಭಾರತಿ ಸ್ವಾಮೀಜಿ ಶಾರದಾ ಪೀಠ ಶೃಂಗೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.